ADVERTISEMENT

Champions Trophy: ನ್ಯೂಜಿಲೆಂಡ್‌ಗೆ ಸ್ಯಾಂಟ್ನರ್ ನಾಯಕ, ಐವರು ವೇಗಿಗಳಿಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 12 ಜನವರಿ 2025, 5:12 IST
Last Updated 12 ಜನವರಿ 2025, 5:12 IST
<div class="paragraphs"><p>ನ್ಯೂಜಿಲೆಂಡ್‌ ಆಟಗಾರರಿ</p></div>

ನ್ಯೂಜಿಲೆಂಡ್‌ ಆಟಗಾರರಿ

   

ರಾಯಿಟರ್ಸ್‌ ಚಿತ್ರ

ವೆಲ್ಲಿಂಗ್ಟನ್‌: ಮುಂದಿನ ತಿಂಗಳು ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಗೆ ನ್ಯೂಜಿಲೆಂಡ್‌ ತಂಡ ಪ್ರಕಟವಾಗಿ‌ದೆ.

ADVERTISEMENT

ನಿಗದಿತ ಓವರ್‌ಗಳಲ್ಲಿ ತಂಡದ ನಾಯಕನಾಗಿ ಕಳೆದ ತಿಂಗಳಷ್ಟೇ ನೇಮಕಗೊಂಡಿರುವ ಸ್ಪಿನ್‌ ಆಲ್‌ರೌಂಡರ್‌ ಮಿಚೇಲ್‌ ಸ್ಯಾಂಟ್ನರ್‌, 15 ಸದಸ್ಯರ ತಂಡವನ್ನು ಮುನ್ನಡೆಸಲಿದ್ದಾರೆ. ಅನುಭವಿಗಳಾದ ಕೇನ್‌ ವಿಲಿಯಮ್ಸನ್‌, ಟಾಮ್‌ ಬ್ಲಂಡೆಲ್, ಟಾಮ್‌ ಲಥಾಮ್‌, ಡೆವೋನ್‌ ಕಾನ್ವೇ ಅವರೂ ತಂಡದಲ್ಲಿದ್ದಾರೆ.

ಐವರು ವೇಗಿಗಳಿಗೆ ಸ್ಥಾನ ನೀಡಲಾಗಿದೆ. ಬೆನ್‌ ಸೀರ್ಸ್‌, ನಾಥನ್‌ ಸ್ಮಿತ್‌ ಹಾಗೂ ವಿಲ್‌ ಓ ರೂರ್ಕಿ ಅವರು ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಆಡಲು ಸಜ್ಜಾಗಿದ್ದಾರೆ.

ನ್ಯೂಜಿಲೆಂಡ್ ಕಂಡ ಶ್ರೇಷ್ಠ ಬೌಲರ್‌ಗಳೆನಿಸಿದ್ದ ಟಿಮ್‌ ಸೌಥಿ ಮತ್ತು ಟ್ರೆಂಟ್‌ ಬೌಲ್ಟ್‌ ವಿದಾಯದ ಬಳಿಕ, ವೇಗದ ಬೌಲಿಂಗ್‌ ವಿಭಾವನ್ನು ಮುನ್ನಡೆಸುವ ಹೊಣೆ ಮ್ಯಾಟ್‌ ಹೆನ್ರಿ ಮತ್ತು ಲಾಕಿ ಫರ್ಗ್ಯೂಸನ್‌ ಮೇಲಿದೆ. 

ಸೀರ್ಸ್‌ ಅವರು ಮಂಡಿ ನೋವಿನಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ನಾಥನ್‌ ಹಾಗೂ ರೂರ್ಕಿ, ಇಂಗ್ಲೆಂಡ್‌ ವಿರುದ್ಧ ಇತ್ತೀಚೆಗೆ ನಡೆದ ಟೆಸ್ಟ್‌ ಸರಣಿ ಹಾಗೂ ನಂತರ ಶ್ರೀಲಂಕಾ ಎದುರಿನ ಚುಟುಕು ಸರಣಿಯಲ್ಲಿ ಗಮನ ಸೆಳೆದಿದ್ದರು.

'ಸಾಕಷ್ಟು ಗುಣಮಟ್ಟವುಳ್ಳ ಸಾಕಷ್ಟು ಆಟಗಾರರು ತಂಡದಲ್ಲಿದ್ದಾರೆ. ಪಾಕಿಸ್ತಾನ ಮತ್ತು ಯುಎಇಯಲ್ಲಿ ಪರಿಸ್ಥಿತಿಯಲ್ಲಿ ಉತ್ತಮವಾಗಿ ಆಡಬಲ್ಲ ಆಟಗಾರರೊಂದಿಗೆ ತೆರಳುತ್ತಿದ್ದೇವೆ' ಎಂದು ಕೋಚ್ ಗ್ಯಾರಿ ಸ್ಟೀಡ್‌ ಹೇಳಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯು ಫೆಬ್ರುವರಿ 19ರಂದು ಆರಂಭವಾಗಲಿದೆ. ಕರಾಚಿಯ ನ್ಯಾಷನಲ್‌ ಸ್ಟೇಡಿಯಂನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ನ್ಯೂಜಿಲೆಂಡ್ ಪಡೆಯು ಆತಿಥೇಯ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ.

ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ಪಂದ್ಯಗಳು ನಿಗದಿಯಾಗಿವೆ. ಭಾರತ ತನ್ನ ಪಾಲಿನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ.

ನ್ಯೂಜಿಲೆಂಡ್‌ ತಂಡ ಹೀಗಿದೆ
ಮಿಚೇಲ್‌ ಸ್ಯಾಂಟ್ನರ್‌ (ನಾಯಕ), ಕೇನ್‌ ವಿಲಿಯಮ್ಸನ್‌, ವಿಲ್‌ ಯಂಗ್‌, ಮಿಚೇಲ್‌ ಬ್ರೇಸ್‌ವೆಲ್‌, ಮಾರ್ಕ್‌ ಚಾಪ್‌ಮನ್‌, ಡೆವೋನ್‌ ಕಾನ್ವೇ, ಲಾಕಿ ಫರ್ಗ್ಯೂಸನ್‌, ಗ್ಲೆನ್‌ ಫಿಲಿಪ್ಸ್‌, ರಚಿನ್‌ ರವೀಂದ್ರ, ಮ್ಯಾಟ್‌ ಹೆನ್ರಿ, ಟಾಮ್‌ ಲಥಾಮ್‌, ಡೆರಿಲ್‌ ಮಿಚೇಲ್‌, ವಿಲ್‌ ಓ ರೂರ್ಕಿ, ಬೆನ್‌ ಸೀರ್ಸ್‌, ನಾಥನ್‌ ಸ್ಮಿತ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.