ADVERTISEMENT

‘ದ್ವಿಶತಕ’ದತ್ತ ರೋಹಿತ್ ಶರ್ಮಾ

ಕ್ರಿಕೆಟ್: ಭಾರತ–ನ್ಯೂಜಿಲೆಂಡ್ ನಡುವಣ ನಾಲ್ಕನೇ ಏಕದಿನ ಪಂದ್ಯ: ವಿರಾಟ್ ಕೊಹ್ಲಿಗೆ ವಿಶ್ರಾಂತಿ

ಪಿಟಿಐ
Published 30 ಜನವರಿ 2019, 20:13 IST
Last Updated 30 ಜನವರಿ 2019, 20:13 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   

ಹ್ಯಾಮಿಲ್ಟನ್: ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ‘ಡಬಲ್ ಟ್ರಿಪಲ್’ ಸಾಧಕ ರೋಹಿತ್ ಶರ್ಮಾ ಈಗ ಮತ್ತೊಂದು ದ್ವಿಶತಕದ ಸಂಭ್ರಮ ಆಚರಿಸಲು ಸಿದ್ಧರಾಗಿದ್ದಾರೆ.

ಗುರುವಾರ ಇಲ್ಲಿ ನಡೆಯಲಿರುವ ನ್ಯೂಜಿಲೆಂಡ್ ಎದುರಿನ ಏಕದಿನ ಪಂದ್ಯವು ಅವರಿಗೆ 200ನೇಯದ್ದಾಗಲಿದೆ. ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದು ಸ್ವದೇಶಕ್ಕೆ ಮರಳಿರುವುದರಿಂದ ತಂಡದ ನಾಯಕತ್ವವನ್ನೂ ರೋಹಿತ್ ನಿರ್ವಹಿಸುತ್ತಿದ್ದಾರೆ. ಐದು ಪಂದ್ಯಗಳ ಸರಣಿಯನ್ನು ಭಾರತವು ಈಗಾಗಲೇ 3–0ಯಿಂದ ಕೈವಶ ಮಾಡಿಕೊಂಡಿದೆ. ಗೆಲುವಿನ ಓಟವನ್ನು ಮುಂದುವರಿಸಿಕೊಂಡು ಹೋಗುವ ಹೊಣೆ ‘ಹಿಟ್‌ಮ್ಯಾನ್‌’ ರೋಹಿತ್ ಮೇಲೆ ಇದೆ. 50–50 ಕ್ರಿಕೆಟ್‌ನಲ್ಲಿ ಮೂರು ದ್ವಿಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್‌ಮನ್ ಆಗಿರುವ ರೋಹಿತ್, ಹೋದ ವರ್ಷ ಏಷ್ಯಾ ಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ ತಂಡದ ನಾಯಕತ್ವ ವಹಿಸಿದ್ದರು.

ಭಾರತವು ಈ ಪಂದ್ಯದಲ್ಲಿ ಗೆದ್ದು 4–0 ಮುನ್ನಡೆ ಸಾಧಿಸಿದರೆ ದಾಖಲೆಯಾಗಲಿದೆ. ಹೋದ 52 ವರ್ಷಗಳಲ್ಲಿ ನ್ಯೂಜಿಲೆಂಡ್ ಎದುರು ಅತಿ ಹೆಚ್ಚು ಅಂತರದಿಂದ ಸರಣಿ ಮುನ್ನಡೆ ಸಾಧಿಸಿದ ಸಾಧನೆಯಾಗಲಿದೆ.

ADVERTISEMENT

ಈಗಾಗಲೇ ಸರಣಿ ಕೈವಶವಾಗಿರುವುದರಿಂದ ಉಳಿದಿರುವ ಎರಡೂ ಪಂದ್ಯಗಳಲ್ಲಿ ಪ್ರಯೋಗಕ್ಕೆ ಸಾಕಷ್ಟು ಅವಕಾಶ ಇದೆ. ಬೆಂಚ್‌ನಲ್ಲಿರುವ ಆಟಗಾರರಿಗೆ ಕಣಕ್ಕಿಳಿಯುವ ಅವಕಾಶ ಸಿಗಲಿದೆ. ವಿರಾಟ್‌ ಕೊಹ್ಲಿಯಿಂದ ಶಹಬ್ಬಾಸ್‌ಗಿರಿ ಪಡೆದಿರುವ ಶುಭಮನ್ ಗಿಲ್ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಅವರು ಹೋದ ವರ್ಷ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದ ತಂಡದಲ್ಲಿ ಮಿಂಚಿದ್ದರು.

‘ಶಿಕ್ಷೆ’ ಮುಗಿಸಿ ತಂಡಕ್ಕೆ ಮರಳಿರುವ ಹಾರ್ದಿಕ್ ಪಾಂಡ್ಯ ಹೋದ ಪಂದ್ಯದಲ್ಲಿ ಗಮನ ಸೆಳೆದಿದ್ದರು. ಅವರ ಹಾವಭಾವ ಮತ್ತು ಆಟದಲ್ಲಿಯೂ ಬಹಳಷ್ಟು ಬದಲಾವಣೆಗಳು ಕಂಡಿದ್ದವು. ಗಾಯದಿಂದಾಗಿ ಹೋದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಮಹೇಂದ್ರಸಿಂಗ್ ಧೋನಿ ಚೇತರಿಸಿಕೊಂಡಿದ್ದಾರೆಂದು ತಂಡದ ಮೂಲಗಳು ತಿಳಿಸಿವೆ. ಆದರೆ ಅವರು ಕಣಕ್ಕಿಳಿಯುವುದು ಖಚಿತವಾಗಿಲ್ಲ. ಶಿಖರ್ ಧವನ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್ ಅವರು ಉತ್ತಮ ಲಯದಲ್ಲಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಕ್ರಮವಾಗಿ ಎಂಟು ಮತ್ತು ಆರು ವಿಕೆಟ್‌ಗಳನ್ನು ಗಳಿಸಿದ್ದಾರೆ. ಮಧ್ಯಮವೇಗಿ ಮೊಹಮ್ಮದ್ ಶಮಿ ಸತತ ಎರಡು ಪಂದ್ಯಗಳಲ್ಲಿ ಶ್ರೇಷ್ಠ ಆಟಗಾರ ಗೌರವ ಗಳಿಸಿದ್ದರು. ಎಡಗೈ ಮಧ್ಯಮವೇಗಿ ಖಲೀಲ್ ಅಹಮದ್ ಕೂಡ ಅವಕಾಶ ಪಡೆಯುವ ಸಾಧ್ಯತೆಯೂ ಇದೆ.

ಇನ್ನೊಂದೆಡೆ ತವರಿನಲ್ಲಿ ಸರಣಿ ಸೋಲಿನ ಆಘಾತದಲ್ಲಿರುವ ಕೇನ್‌ ವಿಲಿಯಮ್ಸನ್ ಬಳಗವು ಇನ್ನೆರಡು ಪಂದ್ಯಗಳಲ್ಲಿ ಗೆದ್ದು ಮಾನ ಕಾಪಾಡಿಕೊಳ್ಳುವ ಯೋಜನೆಯಲ್ಲಿದೆ. ಬ್ಲ್ಯಾಕ್‌ ಕ್ಯಾಪ್‌ ಬಳಗದ ಮಾರ್ಟಿನ್ ಗಪ್ಟಿಲ್, ಟಾಮ್ ಲಥಾಮ್ ಮತ್ತು ರಾಸ್ ಟೇಲರ್ ಉತ್ತಮವಾಗಿ ಆಡಿದರೆ ಇದು ಅಸಾಧ್ಯವೇನಲ್ಲ. ಆದರೆ, ಭಾರತದ ಬಲಿಷ್ಠ ಬ್ಯಾಟಿಂಗ್‌ ವಿಭಾಗಕ್ಕೆ ತಡೆಯೊಡ್ಡುವ ಸವಾಲು ಆತಿಥೇಯರಿಗೆ ಇದೆ.

ತಂಡಗಳು ಇಂತಿವೆ
ಭಾರತ:
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಅಂಬಟಿ ರಾಯುಡು, ಕೇದಾರ್ ಜಾಧವ್, ಮಹೇಂದ್ರಸಿಂಗ್ ಧೋನಿ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಯಜುವೇಂದ್ರ ಚಾಹಲ್, ಶುಭಮನ್ ಗಿಲ್, ಖಲೀಲ್ ಅಹಮದ್, ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜ.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಲೆ, ಟ್ರೆಂಟ್ ಬೌಲ್ಡ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಲಾಕಿ ಫರ್ಗ್ಯೂಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್ (ವಿಕೆಟ್‌ಕೀಪರ್), ಕಾಲಿನ್ ಮನ್ರೊ, ಜಿಮ್ಮಿ ನಿಶಾಮ್, ಹೆನ್ರಿ ನಿಕೊಲ್ಸ್‌, ಮಿಷೆಲ್ ಸ್ಯಾಂಟನರ್, ಟಿಮ್ ಸೌಥಿ, ರಾಸ್ ಟೇಲರ್.

*
ನಮ್ಮ ಯೋಜನೆಗಳು ಉತ್ತಮವಾಗಿವೆ. ಆದರೆ ಅನುಷ್ಠಾನದ ಹಂತದಲ್ಲಿ ಎಡವುತ್ತಿರುವುದು ಸೋಲಿಗೆ ಕಾರಣವಾಗುತ್ತಿದೆ. ಆ ಲೋಪವನ್ನು ಸರಿಪಡಿಸಿಕೊಳ್ಳುತ್ತಿದ್ದೇವೆ.
–ಮಿಷೆಲ್ ಸ್ಯಾಂಟನರ್, ನ್ಯೂಜಿಲೆಂಡ್ ಆಟಗಾರ

***

ರೋಹಿತ್ ಪ್ರಮುಖ ದಾಖಲೆಗಳು (ಏಕದಿನ)
* 10 ಸರಣಿಗಳಳಲ್ಲಿ ಸತತವಾಗಿ ಶತಕ ಬಾರಿಸಿದ ದಾಖಲೆ ಅವರದ್ದು. 2017ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಸರಣಿಯಿಂದ ಇಲ್ಲಿಯವರೆಗೆ ಅದು ಮುಂದುವರಿದಿದೆ.

* 16 ಸಿಕ್ಸರ್‌; ಬೆಂಗಳೂರಿನಲ್ಲಿ 2013ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಹೊಡೆದಿದ್ದರು. ಆ ಪಂದ್ಯದಲ್ಲಿ ಅವರು 209 ರನ್‌ ಬಾರಿಸಿದ್ದರು.

* 42 ಬೌಂಡರಿ: ಕೋಲ್ಕತ್ತದಲ್ಲಿ ಶ್ರೀಲಂಕಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಗಳಿಸಿದ್ದಿರು. ಅದರಲ್ಲಿ ಅವರು 264 ರನ್ ಗಳಿಸಿದ್ದರು.

* 66 ಸಿಕ್ಸರ್‌: ಆಸ್ಟ್ರೇಲಿಯಾ ಎದುರು ಏಕದಿನ ಕ್ರಿಕೆಟ್‌ನಲ್ಲಿ ಗಳಿಸಿದ್ದು.

* 216 ಸಿಕ್ಸರ್‌: ಗಳಿಸಿರುವ ಭಾರತದ ಏಕೈಕ ಬ್ಯಾಟ್ಸ್‌ಮನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.