ADVERTISEMENT

Champions Trophy: ಆತಿಥೇಯ ದೇಶದಲ್ಲಿಲ್ಲ ಫೈನಲ್; ಪಾಕ್ ಮಾಜಿ,ಅಭಿಮಾನಿಗಳ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮಾರ್ಚ್ 2025, 11:20 IST
Last Updated 5 ಮಾರ್ಚ್ 2025, 11:20 IST
<div class="paragraphs"><p>ಪಾಕಿಸ್ತಾನ ಕ್ರಿಕೆಟ್ ತಂಡ</p></div>

ಪಾಕಿಸ್ತಾನ ಕ್ರಿಕೆಟ್ ತಂಡ

   

(ಚಿತ್ರ ಕೃಪೆ: X/@TheRealPCB)

ಲಾಹೋರ್: ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯು ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿದೆ. ಆದರೆ ವಿಪರ್ಯಾಸವೆಂಬಂತೆ ಫೈನಲ್ ಪಂದ್ಯವನ್ನು ತವರು ನಾಡಿನಲ್ಲಿ ಆಯೋಜಿಸುವ ಅವಕಾಶದಿಂದ ಪಾಕಿಸ್ತಾನ ವಂಚಿತವಾಗಿದೆ. ಇದರಿಂದಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.

ADVERTISEMENT

ಪಾಕಿಸ್ತಾನಕ್ಕೆ ಭಾರತ ತೆರಳಲು ನಿರಾಕರಿಸಿದ್ದರಿಂದ ಐಸಿಸಿ ಮಧ್ಯಪ್ರವೇಶಿಸಿ ಸಂಧಾನ ಮಾಡಿತ್ತು. ಇದರಂತೆ ಟೂರ್ನಿಯನ್ನು ಪಾಕಿಸ್ತಾನದ ಆತಿಥ್ಯದಲ್ಲೇ ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು.

ಭಾರತ ತನ್ನೆಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲು ಅವಕಾಶ ಕಲ್ಪಿಸಲಾಗಿತ್ತು. ಈಗ ಭಾರತ ತಂಡವು ಫೈನಲ್‌ಗೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಫೈನಲ್ ಪಂದ್ಯದ ಕನಸು ಕಾಣುತ್ತಿದ್ದ ಪಾಕ್ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ಆತಿಥೇಯ ಪಾಕಿಸ್ತಾನ ತಂಡವು ಗುಂಪು ಹಂತದಿಂದಲೇ ನಿರ್ಗಮಿಸಿದೆ. ಇದು ಕೂಡ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಉಳಿದೆಲ್ಲ ತಂಡವು ಭಾರತದ ವಿರುದ್ಧ ಪಂದ್ಯಕ್ಕಾಗಿ ದುಬೈಗೆ ಪ್ರಯಾಣ ಬೆಳೆಸಬೇಕಿದೆ. ಮತ್ತೊಂದೆಡೆ ಭಾರತದ ಒಂದೇ ತಾಣದಲ್ಲಿ ಆಡುವುದರಿಂದ ಹೆಚ್ಚಿನ ಅನುಕೂಲ ಸಿಗುತ್ತಿದೆ ಎಂಬ ಆರೋಪವು ಕೇಳಿಬಂದಿದೆ.

'ನಮ್ಮ ವಿರುದ್ಧ ಅನ್ಯಾಯ ಮಾಡಲಾಗಿದೆ. ನಮ್ಮ ತಂಡವು ಫೈನಲ್‌ನಲ್ಲಿಲ್ಲ. ಆತಿಥೇಯ ದೇಶವಾಗಿದ್ದರೂ ಫೈನಲ್‌ ಕೂಡ ಆಯೋಜನೆಯಾಗುತ್ತಿಲ್ಲ' ಎಂದು ಲಾಹೋರ್ ಮೂಲದ ಅಭಿಮಾನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಮೂರು ದಶಕಗಳ ಬಳಿಕ ಪಾಕಿಸ್ತಾನಕ್ಕೆ ಐಸಿಸಿಯ ಪ್ರಮುಖ ಟೂರ್ನಿ ಮರಳಿದೆ. ಆದರೆ ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವ ವ್ಯವಸ್ಥೆಯನ್ನು ನಾವೇ ಒಪ್ಪಿಕೊಂಡಿದ್ದೇವೆ. ಈಗ ಕೊರಗುವುದರಲ್ಲಿ ಅರ್ಥವಿಲ್ಲ' ಎಂದು ಮತ್ತೊಬ್ಬ ಅಭಿಮಾನಿ ಪ್ರತಿಕ್ರಿಯಿಸಿದ್ದಾರೆ.

'ನಮ್ಮ ಕ್ರಿಕೆಟ್ ಹಾಗೂ ನಮ್ಮ ತಂಡ ಹಿನ್ನಡೆ ಅನುಭವಿಸಿದೆ. ನಿಮ್ಮಲ್ಲಿ ಶಕ್ತಿಯಿಲ್ಲದಿದ್ದಾಗ ರಾಜಿ ಮಾಡಿಕೊಳ್ಳಬೇಕಾಯಿತು. ಹಾಗಾಗಿ ಯಾವುದೇ ವಿಷಾದವಿಲ್ಲ' ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

'ಪಾಕಿಸ್ತಾನದಲ್ಲಿ ಕ್ರಿಕೆಟ್ ಆಯೋಜಿಸಲು ಸ್ಟೇಡಿಯಂ ನವೀಕರಣಕ್ಕಾಗಿ ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆ ಮಾಡಲಾಗಿದೆ. ಆದರೆ ಫೈನಲ್ ಪಂದ್ಯವನ್ನು ಪಾಕಿಸ್ತಾನದಲ್ಲಿ ಆಡಲಾಗುತ್ತಿಲ್ಲ ಎಂಬುದು ಭಾರಿ ಹೊಡೆತವಾಗಿದೆ' ಎಂದು ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಹೇಳಿದ್ದಾರೆ.

'ಹಣಕಾಸಿನ ದೃಷ್ಟಿಕೋನದಲ್ಲೂ ಬೇರೆ ರಾಷ್ಟ್ರಗಳಿಗಿಂತ ಪಾಕಿಸ್ತಾನ ಹಿನ್ನಡೆಯಲ್ಲಿದೆ. ಇದು ನಿಜಕ್ಕೂ ಡಬಲ್ ಹೊಡೆತವಾಗಿದೆ. ರಾಜಕೀಯದಿಂದಾಗಿ ಕ್ರಿಕೆಟ್‌ಗೆ ಹಿನ್ನೆಡೆಯಾಗಿದೆ. ಭಾರತ ತಂಡವು ಅತ್ಯುತ್ತಮವಾಗಿ ಆಡಿದೆ. ಆದರೆ ಲಾಹೋರ್‌ಗೆ ಬಂದು ಕಪ್ ಗೆದ್ದಿದ್ದರೆ ಇನ್ನಷ್ಟು ಚೆನ್ನಾಗಿರುತ್ತಿತ್ತು' ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ಭಾರತ ಫೈನಲ್‌ಗೆ ಪ್ರವೇಶಿಸದಿದ್ದರೆ ಫೈನಲ್ ಪಂದ್ಯವನ್ನು ಲಾಹೋರ್‌ನಲ್ಲಿ ಆಯೋಜಿಸಲಾಗುತ್ತಿತ್ತು. ಈಗ ಭಾರತ ಫೈನಲ್‌ಗೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ಫೈನಲ್ ಪಂದ್ಯವು ದುಬೈನಲ್ಲಿ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.