ADVERTISEMENT

ಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ: ಅವಸರದ ನಿರ್ಧಾರ ಇಲ್ಲ ಎಂದ ಐಸಿಸಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2020, 1:10 IST
Last Updated 18 ಏಪ್ರಿಲ್ 2020, 1:10 IST
   

ಮೆಲ್ಬರ್ನ್‌: ಕೋವಿಡ್‌–19 ಸಾಂಕ್ರಾಮಿಕ ಪಿಡುಗಿನ ಕಾರಣ ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯನ್ನು ಮುಂದೂಡಬೇಕೇ ಅಥವಾ ನಿಗದಿತ ಸಮಯದಲ್ಲೇ ನಡೆಸಬೇಕೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಅವಸರ ಮಾಡುವುದಿಲ್ಲ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಶುಕ್ರವಾರ ಸ್ಪಷ್ಟಪಡಿಸಿದೆ.

ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಮುನ್ನ ಎಲ್ಲ ಆಯ್ಕೆಗಳನ್ನು ಪರಿಶೀಲಿಸಲಾಗುವುದು ಎಂದು ಹೇಳಿದೆ. ನಿಗದಿಯಂತೆ ಟಿ–20 ವಿಶ್ವಕಪ್‌ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ 18 ರಿಂದ ನವೆಂಬರ್‌ 15ರವರೆಗೆ ನಡೆಯಬೇಕಾಗಿದೆ. ಆದರೆ ವಿಶ್ವದಾದ್ಯಂತ ಆರೋಗ್ಯ ತುರ್ತುಸ್ಥಿತಿ ತಲೆದೋರಿದ್ದು ಕೆಲವು ಪ್ರಮುಖ ಕ್ರೀಡಾಕೂಟಗಳು ಮುಂದಕ್ಕೆ ಹೋಗಿವೆ. ಇನ್ನು ಕೆಲವು ರದ್ದಾಗಿವೆ. ಹೀಗಾಗಿ ಈ ವಿಶ್ವಕಪ್‌ ಭವಿಷ್ಯ ತೂಗುಯ್ಯಾಲೆಯಲ್ಲಿದೆ.

ಭಯಾನಕ ಕೊರೊನಾ ಸೋಂಕು ಉಪದ್ರವದ ಕಾರಣ ಆಸ್ಟ್ರೇಲಿಯಾವು ತನ್ನ ಗಡಿಗಳನ್ನು ಮುಚ್ಚಿದ್ದು, ಪ್ರಯಾಣ ನಿರ್ಬಂಧಗಳನ್ನು ಹೇರಿದೆ. ಈ ಹಿನ್ನೆಲೆಯಲ್ಲಿ ಟಿ–20 ವಿಶ್ವಕಪ್‌ ಅನ್ನು ಮುಂದಿನ ವರ್ಷಕ್ಕೆ ಮುಂದೂಡಬೇಕಾಗುತ್ತದೆ ಅಥವಾ ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಿ ಟೂರ್ನಿಯನ್ನು ನಡೆಸಬೇಕಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

ADVERTISEMENT

‘ನಾವು ಐಸಿಸಿ ಟೂರ್ನಿಗಳಿಗೆ ನಿಗದಿ ರೀತಿಯಲ್ಲೇ ಯೋಜನೆ ಮುಂದುವರಿಸುತ್ತೇವೆ. ಆದರೆ ತ್ವರಿತಗತಿಯಲ್ಲಿ ಪರಿಸ್ಥಿತಿ ಬದಲಾಗುತ್ತಿರುವ ಸನ್ನಿವೇಶದಲ್ಲಿ ನಾವು ಕಾಳಜಿಯ ಮತ್ತು ಜವಾಬ್ದಾರಿಯಿಂದ ಪರಿಹಾರೋಪಾಯ ಕಂಡುಕೊಳ್ಳಬೇಕಾಗುತ್ತದೆ’ ಎಂದು ಐಸಿಸಿ ವಕ್ತಾರರನ್ನು ಉದ್ಧರಿಸಿ ಸ್ಕೈಸ್ಪೋರ್ಟ್‌ ವರದಿ ಮಾಡಿದೆ.‌

ಟಿ–20 ವಿಶ್ವಕಪ್‌ ಆರಂಭವಾಗಲು ಇನ್ನೂ ಆರು ತಿಂಗಳು ದೂರವಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಸೇರಿದಂತೆ ಎಲ್ಲ ಭಾಗೀದಾರರ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರಲಾಗುವುದು ಎಂದು ಐಸಿಸಿ ತಿಳಿಸಿದೆ.

ಆಸ್ಟ್ರೇಲಿಯಾ ಸರ್ಕಾರ ಒಳಗೊಂಡಂತೆ ಅಧಿಕಾರಿಗಳು ಮತ್ತು ತಜ್ಞರ ಸಲಹೆಗಳನ್ನು ಮುಂದೆಯೂ ಪಡೆಯುತ್ತೇವೆ. ಸೂಕ್ತ ಕಾಲದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದೂ ವಕ್ತಾರರು ತಿಳಿಸಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ಆ್ಯಲನ್‌ ಬಾರ್ಡರ್‌ ಮತ್ತು ಹಾಲಿ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್ ಅವರು ಪ್ರೇಕ್ಷಕರಿಲ್ಲದೇ ಟೂರ್ನಿಯನ್ನು ನಡೆಸುವುದಕ್ಕೆ ಅಸಮ್ಮತಿ ಸೂಚಿಸಿದ್ದಾರೆ. ಟೂರ್ನಿಯನ್ನು ಸದ್ಯಕ್ಕೆ ಮುಂದೂಡುವುದು ಒಂದು ದಾರಿ ಎಂದು ಮಾಜಿ ಬ್ಯಾಟ್ಸ್‌ಮನ್‌ ಸೈಮನ್‌ ಕ್ಯಾಟಿಚ್‌ ಮತ್ತು ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.