ಜಸ್‌ಪ್ರೀತ್ ಬೂಮ್ರಾ
(ಪಿಟಿಐ ಚಿತ್ರ)
ದುಬೈ: ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಇಲ್ಲದಿದ್ದರೆ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಗೆಲ್ಲುವ ಅವಕಾಶ ಶೇ 30ರಿಂದ 35ರಷ್ಟು ಕ್ಷೀಣಿಸಲಿದೆ ಎಂದು ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅಂತಿಮ ಟೆಸ್ಟ್ ಪಂದ್ಯದ ವೇಳೆ ಬೂಮ್ರಾ ಬೆನ್ನು ನೋವಿಗೆ ಒಳಗಾಗಿದ್ದರು. ಇದರಿಂದಾಗಿ ನಿರ್ಣಾಯಕ ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿರಲಿಲ್ಲ. ಬೂಮ್ರಾ ಈಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನಶ್ಚೇತನ ಶಿಬಿರದಲ್ಲಿದ್ದಾರೆ.
ಚಾಂಪಿಯನ್ಸ್ ಟ್ರೋಫಿಗಾಗಿ ಆಯ್ಕೆ ಮಾಡಿರುವ ಪ್ರಾಥಮಿಕ ತಂಡದಲ್ಲಿ ಬೂಮ್ರಾ ಅವರನ್ನು ಹೆಸರಿಸಲಾಗಿದೆ. ಆದರೆ ಬೂಮ್ರಾ ಫಿಟ್ ಆಗಲಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಗಾಯದ ಸಮಸ್ಯೆಯಿಂದಾಗಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಬೂಮ್ರಾ ಹೊರಗುಳಿದಿದ್ದಾರೆ.
ಈ ಕುರಿತು ಐಸಿಸಿ ರಿವ್ಯೂನಲ್ಲಿ ಮಾತನಾಡಿರುವ ರವಿ ಶಾಸ್ತ್ರಿ, 'ಬೂಮ್ರಾ ಫಿಟ್ ಆಗದಿದ್ದರೆ ಟ್ರೋಫಿ ಗೆಲ್ಲುವ ಭಾರತದ ಸಾಧ್ಯತೆ ಶೇ 35ರಷ್ಟು ಕ್ಷೀಣವಾಗಲಿದೆ' ಎಂದು ಹೇಳಿದ್ದಾರೆ.
'ಒಂದು ವೇಳೆ ಬೂಮ್ರಾ ಫಿಟ್ ಆದರೆ ಅದು ಸಂಪೂರ್ಣ ವಿಭಿನ್ನ ಆಟವಾಗಿರಲಿದೆ. ಡೆತ್ ಓವರ್‌ನ ಬಗ್ಗೆ ನಿಮಗೆ ಖಾತರಿ ಇರಲಿದೆ' ಎಂದು ಹೇಳಿದ್ದಾರೆ.
ಹಾಗಿದ್ದರೂ ಬೂಮ್ರಾ ಪುನರಾಗಮನಕ್ಕಾಗಿ ಆತುರಪಡಬಾರದು ಎಂದು ಶಾಸ್ತ್ರಿ ಸಲಹೆ ನೀಡಿದ್ದಾರೆ.
'ಭಾರತಕ್ಕೆ ಭವಿಷ್ಯದಲ್ಲಿ ಇನ್ನು ಮಹತ್ವದ ಟೂರ್ನಿಗಳು ಇವೆ. ಹಾಗಾಗಿ ಅಪಾಯವನ್ನು ಆಹ್ವಾನಿಸಬಾರದು. ಗಾಯದ ಬಳಿಕ ಕ್ರಿಕೆಟ್ ಆಡುವುದು ಅಷ್ಟು ಸುಲಭದ ವಿಚಾರವಲ್ಲ. ಬೂಮ್ರಾ ಅವರ ಕೆರಿಯರ್‌ನ ಈ ಹಂತದಲ್ಲಿ ರಿಸ್ಕ್ ತೆಗೆದುಕೊಳ್ಳಬಾರದು' ಎಂದು ಹೇಳಿದ್ದಾರೆ.
ಕಳೆದ ಸಾಲಿನಲ್ಲಿ ಅಮೋಘ ನಿರ್ವಹಣೆ ನೀಡಿರುವ ಬೂಮ್ರಾ 'ಐಸಿಸಿ ವರ್ಷದ ಕ್ರಿಕೆಟಿಗ' ಮತ್ತು 'ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ' ಪ್ರಶಸ್ತಿಗೆ ಭಾಜನರಾಗಿದ್ದರು. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 32 ವಿಕೆಟ್‌ಗಳನ್ನು ಕಬಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.