ADVERTISEMENT

ನ್ಯೂಜಿಲೆಂಡ್ ಕ್ರಿಕೆಟ್ ಸರಣಿ: ಆಲ್‌ರೌಂಡರ್ ಹಾರ್ದಿಕ್ ಮರಳುವ ಸಾಧ್ಯತೆ

ಇಂದು ತಂಡದ ಆಯ್ಕೆ

ಪಿಟಿಐ
Published 11 ಜನವರಿ 2020, 19:30 IST
Last Updated 11 ಜನವರಿ 2020, 19:30 IST
ಹಾರ್ದಿಕ್ ಪಾಂಡ್ಯ
ಹಾರ್ದಿಕ್ ಪಾಂಡ್ಯ   

ಮುಂಬೈ: ನ್ಯೂಜಿಲೆಂಡ್‌ಗೆ ಕ್ರಿಕೆಟ್ ಸರಣಿ ಆಡಲು ತೆರಳಲಿರುವ ಭಾರತ ತಂಡಕ್ಕೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮರಳುವ ಸಾಧ್ಯತೆ ಇದೆ.

ಇದೇ 24ರಿಂದ ಸರಣಿ ಆರಂಭವಾಗಲಿದೆ. ಐದು ಟಿ20, ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ಈ ಸರಣಿಗಾಗಿ ಭಾನುವಾರ ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತಿದೆ. 16 ಅಥವಾ 17 ಆಟಗಾರರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಇದೇ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡುವ ಭಾರತ ತಂಡದ ಆಯ್ಕೆಗೆ ನ್ಯೂಜಿಲೆಂಡ್ ಪ್ರವಾಸದಲ್ಲಿ ಆಟಗಾರರು ತೋರುವ ಸಾಮರ್ಥ್ಯವು ಮುಖ್ಯವಾಗಲಿದೆ.

ಬೆನ್ನುಹುರಿ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಇದೇ ತಿಂಗಳು ಕಣಕ್ಕಿಳಿದಿರುವ ಹಾರ್ದಿಕ್ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಭಾರತ ಎ ತಂಡದಲ್ಲಿ ಆಡುತ್ತಿದ್ದಾರೆ. 26ರಂದು ಟೂರ್ನಿ ಮುಗಿಯಲಿದೆ. ಆದ್ದರಿಂದ 29ರಂದು ನಡೆಯಲಿರುವ ಮೂರನೇ ಟಿ20 ಪಂದ್ಯದಲ್ಲಿ ಹಾರ್ದಿಕ್ ಆಡುವ ಸಾಧ್ಯತೆ ಇದೆ.

ADVERTISEMENT

‘ಹಾರ್ದಿಕ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಸಮರ್ಥರಾಗಿದ್ದಾರೆಯೇ ಎಂದು ಪರೀಕ್ಷೆ ಮಾಡಲು ‘ಎ’ ಟೂರ್ನಿ ನೆರವವಾಗಲಿದೆ. ಟಿ20 ವಿಶ್ವಕಪ್ ಟೂರ್ನಿಗಾಗಿ ರೂಪಿಸಲಾಗಿರುವ ಯೋಜನೆಯಲ್ಲಿ ಅವರಿದ್ದಾರೆ ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ‌

ಫಾರ್ಮ್‌ನಲ್ಲಿ ಇಲ್ಲದಿದ್ದರೂ ಬಹಳಷ್ಟು ಅವಕಾಶ ಪಡೆದಿರುವ ಕೇದಾರ್ ಜಾಧವ್ ಅವರನ್ನು ಏಕದಿನ ಕ್ರಿಕೆಟ್‌ ತಂಡಕ್ಕೆ ಆಯ್ಕೆ ಮಾಡುವ ಕುರಿತು ಈಗ ಕುತೂಹಲ ಮೂಡಿದೆ. ಅವರನ್ನು ಈಚೆಗೆ ವಿಂಡೀಸ್ ಎದುರಿನ ಏಕದಿನ ಸರಣಿಯಲ್ಲಿಯೂ ಆಡಿಸಲಾಗಿತ್ತು. ಆದ್ದರಿಂದ ಅವರ ಬದಲಿಗೆ ಅಜಿಂಕ್ಯ ರಹಾನೆಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಮುಂಬೈ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೂ ಈ ಬಾರಿ ಟಿ20 ತಂಡದಲ್ಲಿ ಸ್ಥಾನ ಸಿಗಬಹುದು. ಸೂರ್ಯ ಮತ್ತು ಸಂಜು ಸ್ಯಾಮ್ಸನ್ ಇಬ್ಬರೂ ಎ ತಂಡದಲ್ಲಿದ್ಧಾರೆ.

ಆಯ್ಕೆ ಸಮಿತಿಗೆ ಟೆಸ್ಟ್ ತಂಡದ ಆಯ್ಕೆಯು ಹೆಚ್ಚು ಸುಲಭವಾಗಿದೆ.ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಮಯಂಕ್ ಅಗರವಾಲ್ ಅವರೇ ಮುಂದುವರಿಯುವುದು ಬಹುತೇಕ ಖಚಿತ. ಇನ್ನೊಬ್ಬ ಆರಂಭಿಕ ಆಟಗಾರ (ರಿಸರ್ವ್)ನಾಗಿ ಶುಭಮನ್ ಗಿಲ್ ಅವಕಾಶ ಪಡೆಯಬಹುದು. ಆದರೆ, ಈಚೆಗೆ ಉತ್ತಮವಾಗಿ ಆಡುತ್ತಿರುವ ಕನ್ನಡಿಗ ಕೆ.ಎಲ್. ರಾಹುಲ್ ಅವರನ್ನೇ ಈ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ರಾಹುಲ್ ಅವರು ಈ ಹಿಂದೆ ಮಾಡಿರುವ ದಾಖಲೆಗಳೂ ಚೆನ್ನಾಗಿವೆ.

ಚೈನಾಮೆನ್ ಬೌಲರ್ ಕುಲದೀಪ್ ಯಾದವ್ ಅವರು ಮೂರನೇ ಸ್ಪಿನ್ನರ್ ಆಗಿ ತಂಡದಲ್ಲಿ ಸ್ಥಾನ ಗಿಟ್ಟಿಸಬಹುದು. ಆಗ ಐದನೇ ಮಧ್ಯಮವೇಗಿಯಾಗಿ ಸ್ಥಾನದ ನಿರೀಕ್ಷೆಯಲ್ಲಿರುವ ನವದೀಪ್ ಸೈನಿಗೆ ಅವಕಾಶ ಕೈತಪ್ಪಬಹುದು. ಜಸ್‌ಪ್ರೀತ್ ಬೂಮ್ರಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಅವರು ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.