ADVERTISEMENT

ಟೆಸ್ಟ್ ಕ್ರಿಕೆಟ್‌ನಲ್ಲಿ 30ನೇ ಶತಕ; ಬ್ರಾಡ್ಮನ್, ಕೊಹ್ಲಿ ಹಿಂದಿಕ್ಕಿದ ಕೇನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಫೆಬ್ರುವರಿ 2024, 11:02 IST
Last Updated 4 ಫೆಬ್ರುವರಿ 2024, 11:02 IST
<div class="paragraphs"><p>ಕೇನ್ ವಿಲಿಯಮ್ಸನ್</p></div>

ಕೇನ್ ವಿಲಿಯಮ್ಸನ್

   

(ಚಿತ್ರ ಕೃಪೆ: X/@BLACKCAPS)

ಮೌಂಟ್ ಮೌಂಗನುಯಿ: ನ್ಯೂಜಿಲೆಂಡ್ ತಂಡದ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್, ಟೆಸ್ಟ್ ಕ್ರಿಕೆಟ್‌ನಲ್ಲಿ 30ನೇ ಶತಕ ಸಾಧನೆ ಮಾಡಿದ್ದಾರೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಬೇ ಓವಲ್‌ ಮೈದಾನದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕೇನ್ ಈ ಸಾಧನೆ ಮಾಡಿದ್ದಾರೆ.

ADVERTISEMENT

ಕೇನ್ ವಿಲಿಯಮ್ಸನ್ ಹಾಗೂ ಯುವ ಎಡಗೈ ಬ್ಯಾಟರ್ ರಚಿನ್ ರವೀಂದ್ರ ಚೊಚ್ಚಲ ಶತಕದ ಬೆಂಬಲದೊಂದಿಗೆ ನ್ಯೂಜಿಲೆಂಡ್ ತಂಡವು ಮೊದಲ ದಿನದಂತ್ಯಕ್ಕೆ 86 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿದೆ.

ಅತಿಥೇಯರಿಗೆ ಟಾಮ್ ಲೇಥಮ್ ಹಾಗೂ ಡೆವೊನ್ ಕಾನ್ವೆ ವಿಕೆಟ್ ಬೇಗನೇ ನಷ್ಟವಾಯಿತು. ಈ ವೇಳೆ ಜೊತೆಗೂಡಿದ ಕೇನ್ ಹಾಗೂ ರಚಿನ್ ಮುರಿಯದ ಮೂರನೇ ವಿಕೆಟ್‌ಗೆ 219 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಕೇನ್ 112 ಹಾಗೂ ರಚಿನ್ 118 ರನ್ ಗಳಿಸಿ ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಬ್ರಾಡ್ಮನ್, ಕೊಹ್ಲಿ ಹಿಂದಿಕ್ಕಿದ ಕೇನ್...

ಟೆಸ್ಟ್ ಕ್ರಿಕೆಟ್‌ನಲ್ಲಿ 30ನೇ ಶತಕ ಗಳಿಸಿರುವ ಕೇನ್ ವಿಲಿಯಮ್ಸನ್, ಆಸ್ಟ್ರೇಲಿಯಾದ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಮತ್ತು 'ರನ್ ಮೆಷಿನ್' ಖ್ಯಾತಿಯ ವಿರಾಟ್ ಕೊಹ್ಲಿ ಸಾಧನೆಯನ್ನು ಹಿಂದಿಕ್ಕಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪೈಕಿ ಇಂಗ್ಲೆಂಡ್‌ನ ಜೋ ರೂಟ್, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ದಾಖಲೆಯನ್ನು ವಿಲಿಯಮ್ಸನ್ ಸರಿಗಟ್ಟಿದ್ದಾರೆ.

97ನೇ ಟೆಸ್ಟ್ ಪಂದ್ಯದಲ್ಲಿ (169 ಇನಿಂಗ್ಸ್) ವಿಲಿಯಮ್ಸನ್ 30ನೇ ಶತಕದ ಸಾಧನೆ ಮಾಡಿದ್ದಾರೆ. ಅಲ್ಲದೆ ಕಳೆದ ಆರು ಟೆಸ್ಟ್ ಪಂದ್ಯಗಳಲ್ಲಿ ಐದನೇ ಸಲ ಮೂರಂಕಿಯ ಗಡಿ ದಾಟಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿ ಇಂತಿದೆ:

  • ಸಚಿನ್ ತೆಂಡೂಲ್ಕರ್ (ಭಾರತ): 51

  • ಜಾಕ್ ಕಾಲಿಸ್ (ದ.ಆಫ್ರಿಕಾ): 45

  • ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ): 41

  • ಕುಮಾರ ಸಂಗಕ್ಕಾರ (ಶ್ರೀಲಂಕಾ): 38

  • ರಾಹುಲ್ ದ್ರಾವಿಡ್ (ಭಾರತ): 36

  • ಯೂನಿಸ್ ಖಾನ್ (ಪಾಕಿಸ್ತಾನ): 34

  • ಸುನಿಲ್ ಗವಾಸ್ಕರ್ (ಭಾರತ): 34

  • ಬ್ರಿಯಾನ್ ಲಾರಾ (ವೆಸ್ಟ್‌ ಇಂಡೀಸ್): 34

  • ಮಹೇಲಾ ಜಯವರ್ಧನೆ (ಶ್ರೀಲಂಕಾ): 34

  • ಆಲಿಸ್ಟಾರ್ ಕುಕ್ (ಇಂಗ್ಲೆಂಡ್): 33

  • ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ): 32

  • ಮಾರ್ಕ್ ವ್ಹಾ (ಆಸ್ಟ್ರೇಲಿಯಾ): 32

  • ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್): 30

  • ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ): 30

  • ಜೋ ರೂಟ್ (ಇಂಗ್ಲೆಂಡ್): 30

  • ಶಿವನಾರಾಯಣ್ ಚಂದ್ರಪಾಲ್ (ವೆಸ್ಟ್ ಇಂಡೀಸ್): 30

  • ಡಾನ್ ಬ್ರಾಡ್ಮನ್ (ಆಸ್ಟ್ರೇಲಿಯಾ): 29

  • ವಿರಾಟ್ ಕೊಹ್ಲಿ (ಭಾರತ): 29

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.