ADVERTISEMENT

2028ರ ಒಲಿಂಪಿಕ್ಸ್‌: ಕ್ರಿಕೆಟ್‌ ವೇಳಾಪಟ್ಟಿ ಪ್ರಕಟ

2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 23:52 IST
Last Updated 15 ಜುಲೈ 2025, 23:52 IST
ಲೋಗೊ
ಲೋಗೊ   

ಲಾಸ್‌ ಏಂಜಲೀಸ್‌: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಪುನರಾಗಮನ ಮಾಡಲಿರುವ ಕ್ರಿಕೆಟ್‌ ಕ್ರೀಡೆಯ ವೇಳಾಪಟ್ಟಿ ಪ್ರಕಟಿಸಲಾಗಿದೆ. ಜುಲೈ 12ರಿಂದ ಜುಲೈ 29ರತನಕ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಪಂದ್ಯಗಳು ನಡೆಯಲಿವೆ.‌

128 ವರ್ಷಗಳ ನಂತರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ. ಇದಕ್ಕಾಗಿ ಏಂಜಲೀಸ್‌ನಿಂದ ಸುಮಾರು 50 ಕಿಮೀ ದೂರದಲ್ಲಿರುವ ಪೊಮೆನಾ ನಗರದ ಫೇರ್‌ಗ್ರೌಂಡ್ಸ್ ಕ್ರೀಡಾಂಗಣ ಸಜ್ಜಾಗಲಿದೆ. ಜುಲೈ 20ರಂದು ಮಹಿಳೆಯರ ಮತ್ತು 29ರಂದು ಪುರುಷರ ಪದಕ ಸುತ್ತಿನ (ಫೈನಲ್‌) ಪಂದ್ಯಗಳು ನಡೆಯಲಿವೆ.

ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ತಲಾ ಆರು ತಂಡಗಳು ಪೈಪೋಟಿ ನಡೆಸಲಿವೆ. ಪ್ರತಿ ತಂಡದಲ್ಲಿ 15 ಸದಸ್ಯರಿದ್ದು, ಒಟ್ಟು 180 ಆಟಗಾರರು ಕಣಕ್ಕಿಳಿಯಲಿದ್ದಾರೆ. ಸ್ಪರ್ಧೆಯು ಟಿ20 ಮಾದರಿಯಲ್ಲಿದ್ದು, ಹೊಸ ಪ್ರೇಕ್ಷಕರನ್ನು ಸೆಳೆಯುವ ಗುರಿಯನ್ನು ಹೊಂದಲಾಗಿದೆ. 

ADVERTISEMENT

ಜುಲೈ 14 ಮತ್ತು 21ರಂದು ಮಾತ್ರ ಯಾವುದೇ ಪಂದ್ಯವಿರುವುದಿಲ್ಲ. ಡಬಲ್‌ ಹೆಡರ್‌ ಸೇರಿದಂತೆ ಉಳಿದ ಎಲ್ಲಾ ದಿನಗಳಲ್ಲಿ ಪಂದ್ಯಗಳು ನಡೆಯಲಿವೆ ಎಂದು ಒಲಿಂಪಿಕ್ಸ್‌ ಸಂಘಟನಾ ಸಮಿತಿ ತಿಳಿಸಿದೆ. 

1900ರಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್ ನಡುವಿನ ಪಂದ್ಯವೇ ಒಲಿಂಪಿಕ್ಸ್‌ನ (ಪ್ಯಾರಿಸ್‌) ಏಕೈಕ ಕ್ರಿಕೆಟ್ ಪಂದ್ಯವಾಗಿತ್ತು. ಈ ಪಂದ್ಯವನ್ನು ಗೆದ್ದ ಇಂಗ್ಲೆಂಡ್, ಚಿನ್ನದ ಪದಕ ತನ್ನದಾಗಿಸಿಕೊಂಡಿತ್ತು.  

ಅಮೆರಿಕದಲ್ಲಿ ಕ್ರಿಕೆಟ್‌ ಈಚೆಗೆ ಜನಪ್ರಿಯವಾಗುತ್ತಿದೆ. ಕಳೆದ ವರ್ಷ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್ ಜಂಟಿ ಆತಿಥ್ಯದ ಟಿ20 ವಿಶ್ವಕಪ್‌ನ ಕೆಲವು ಪಂದ್ಯಗಳು ಇಲ್ಲಿನ ಟೆಕ್ಸಾಸ್, ಫ್ಲೋರಿಡಾ ಮತ್ತು ನ್ಯೂಯಾರ್ಕ್‌ ನಗರಗಳಲ್ಲಿ ನಡೆದಿದ್ದವು. 

ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯು 2028ರ ಕ್ರೀಡಾಕೂಟದಲ್ಲಿ ಕ್ರಿಕೆಟ್ ಸೇರಿದಂತೆ ಐದು ಹೊಸ ಕ್ರೀಡೆಗಳನ್ನು ಸೇರಿಸಲು ಅನುಮೋದನೆ ನೀಡಿದೆ. ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ (ಸಿಕ್ಸ್) ಮತ್ತು ಸ್ಕ್ವ್ಯಾಷ್‌ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆದ ಇತರ ಕ್ರೀಡೆಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.