ADVERTISEMENT

ಭಾರತ–ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್: ಐತಿಹಾಸಿಕ ಸಾಧನೆಯತ್ತ ವಿರಾಟ್ ಚಿತ್ತ

ಜೋಹಾನ್ಸ್‌ಬರ್ಗ್‌ನಲ್ಲಿ ಭಾರತ–ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್ ಇಂದಿನಿಂದ

ಪಿಟಿಐ
Published 2 ಜನವರಿ 2022, 19:30 IST
Last Updated 2 ಜನವರಿ 2022, 19:30 IST
ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ 
ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ    

ಜೋಹಾನ್ಸ್‌ಬರ್ಗ್: ನವವರ್ಷದಲ್ಲಿ ಹೊಸ ಇತಿಹಾಸ ರಚಿಸಲು ವಿರಾಟ್ ಕೊಹ್ಲಿ ಬಳಗವು ತುದಿಗಾಲಿನಲ್ಲಿ ನಿಂತಿದೆ.

ದಕ್ಷಿಣ ಆಫ್ರಿಕಾ ನೆಲದಲ್ಲಿ ಮೊಟ್ಟಮೊದಲ ಟೆಸ್ಟ್ ಸರಣಿ ಜಯಿಸುವ ಅವಕಾಶ ಈಗ ಭಾರತದ ಮುಂದಿದೆ. ಸೋಮವಾರದಿಂದ ವಾಂಡರರ್ಸ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್‌ನಲ್ಲಿ ಜಯಿಸಿದರೆ ಇತಿಹಾಸ ದಾಖಲಾಗಲಿದೆ.

ಈಚೆಗೆ ಸೆಂಚುರಿಯನ್‌ನಲ್ಲಿ ‘ಬಾಕ್ಸಿಂಗ್ ಡೇ ಟೆಸ್ಟ್‌’ನಲ್ಲಿ ಅಮೋಘ ಜಯ ಸಾಧಿಸಿದ ಭಾರತ ದಾಖಲೆ ಮಾಡಿತ್ತು. ಸೆಂಚುರಿಯನ್‌ನಲ್ಲಿ ಟೆಸ್ಟ್‌ ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿತ್ತು. ಭಾರತ ತಂಡದ ಬೌಲಿಂಗ್ ಪಡೆಯ ಆರ್ಭಟ ಮತ್ತು ಕನ್ನಡಿಗ ಕೆ.ಎಲ್. ರಾಹುಲ್ ಶತಕದಿಂದ ಜಯ ಸಾಧ್ಯವಾಗಿತ್ತು.

ADVERTISEMENT

ಆಸ್ಟ್ರೇಲಿಯಾ, ಇಂಗ್ಲೆಂಡ್‌ನಲ್ಲಿ ಜಯಭೇರಿಯ ನಂತರ ದಕ್ಷಿಣ ಆಫ್ರಿಕಾದಲ್ಲಿಯೂ ಸರಣಿ ಗೆದ್ದ ನಾಯಕನೆಂಬ ಕೀರ್ತಿಗೆ ಭಾಜನರಾಗಲು ವಿರಾಟ್ ಕಾತುರರಾಗಿದ್ದಾರೆ. ಈಗಿನ ದಕ್ಷಿಣ ಆಫ್ರಿಕಾ ತಂಡವು ಮೊದಲಿನಂತೆ ಬಲಿಷ್ಠವಾಗಿ ಉಳಿದಿಲ್ಲ. ಆದ್ದರಿಂದ ಐಸಿಸಿ ಅಗ್ರಶ್ರೇಯಾಂಕದ ತಂಡವಾಗಿರುವ ಭಾರತವೇ ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.

ಆತಿಥೇಯ ತಂಡದಲ್ಲಿ ಈಗ ಮೊದಲಿನಂತೆ ಪ್ರವಾಸಿಗರಿಗೆ ಭಯ ಹುಟ್ಟಿಸುವಂತಹ ಆಟಗಾರರೂ ಇಲ್ಲ. ಕೆಲವು ವರ್ಷಗಳ ಹಿಂದೆ ಗ್ರೆಮ್ ಸ್ಮಿತ್, ಹಾಶೀಂ ಆಮ್ಲಾ, ಎಬಿ ಡಿವಿಲಿಯರ್ಸ್, ಜಾಕಸ್ ಕಾಲಿಸ್, ಡೇಲ್ ಸ್ಟೇನ್, ಮಾರ್ನಿ ಮಾರ್ಕೆಲ್ ಅವರಂತಹ ಅಪ್ರತಿಮ ಆಟಗಾರರಿದ್ದರು. ಒಂದಿಷ್ಟು ಭರವಸೆ ಇಡಬಹುದಾಗಿದ್ದ ಕ್ವಿಂಟನ್ ಡಿ ಕಾಕ್ ಕೂಡ ಮೊದಲ ಟೆಸ್ಟ್ ಸೋಲಿನ ನಂತರ ನಿವೃತ್ತಿ ಘೋಷಿಸಿದ್ದಾರೆ. ನಾಯಕಡೀನ್ ಎಲ್ಗರ್, ತೆಂಬಾ ಬವುಮಾ ಬಿಟ್ಟರೆ ಬ್ಯಾಟಿಂಗ್‌ನಲ್ಲಿ ಅಂತಹ ಭರವಸೆಯ ಆಟಗಾರರು ಕಾಣುತ್ತಿಲ್ಲ.

ಬೌಲಿಂಗ್‌ನಲ್ಲಿ ಕಗಿಸೊ ರಬಾಡ, ಲುಂಗಿ ಗಿಡಿ ಅವರಿಬ್ಬರೂ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಆಟಗಾರರು. ಆದರೆ ಬ್ಯಾಟಿಂಗ್ ಪಡೆಯಿಂದ ದೊಡ್ಡ ಮೊತ್ತ ದಾಖಲಾಗದೇ ಹೋದರೆ ಅವರ ಆಟ ವ್ಯರ್ಥವಾಗುವುದು ಖಚಿತ.

ಭಾರತ ತಂಡದ ಬ್ಯಾಟಿಂಗ್ ವಿಭಾಗದಲ್ಲಿಯೂ ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿವೆ. ಲಯ ಕಂಡುಕೊಳ್ಳುವಲ್ಲಿ ವಿಫಲರಾದ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಬದಲಿಗೆ ಹನುಮವಿಹಾರಿ ಹಾಗೂ ಶ್ರೇಯಸ್ ಅಯ್ಯರ್ ಆಡಬಹುದು. ರಿಷಭ್ ಪಂತ್‌ ಬ್ಯಾಟಿಂಗ್‌ನಲ್ಲಿ ಉತ್ತಮ ಕಾಣಿಕೆ ನೀಡುತ್ತಿಲ್ಲ. ಆದರೂ ಈ ಪಂದ್ಯದಲ್ಲಿ ಅವರು ಮತ್ತೊಂದು ಅವಕಾಶ ಪಡೆಯಬಹುದು. ಬೌಲಿಂಗ್ ವಿಭಾಗದಲ್ಲಿ ಹೆಚ್ಚಿನ ಬದಲಾವಣೆ ಆಗಲಿಕ್ಕಿಲ್ಲ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಮಯಂಕ್ ಅಗರವಾಲ್, ಚೇತೇಶ್ವರ್ ಪೂಜಾರ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್‌ಕೀಪರ್),ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಆರ್. ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅಜಿಂಕ್ಯ ರಹಾನೆ, ಜಯಂತ್ ಯಾದವ್, ಪ್ರಿಯಾಂಕ್ ಪಾಂಚಾಲ್, ಉಮೇಶ್ ಯಾದವ್, ಹನುಮವಿಹಾರಿ, ಇಶಾಂತ್ ಶರ್ಮಾ.

ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ತೆಂಬಾ ಬವುಮಾ (ಉಪನಾಯಕ), ಕಗಿಸೊ ರಬಾಡ, ಸರೆಲ್ ಎರ್ವಿ, ಬೆರನ್ ಹೆನ್ರಿಕ್ಸ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಲುಂಗಿ ಗಿಡಿ, ಏಡನ್ ಮರ್ಕರಮ್, ವಿಯಾನ್ ಮಲ್ದರ್, ಕೀಗ್ ಪೀಟರ್ಸನ್, ರೆಸಿ ವ್ಯಾನ್ ಡರ್ ಡಸೆ, ಕೈಲ್ ವೆರೆಯನ್, ಮಾರ್ಕೊ ಜಾನ್ಸನ್, ಗ್ಲೆಂಟನ್ ಸ್ಟುರ್‌ಮನ್, ಪ್ರೆನೆಲನ್ ಸುರಾಯನ್, ಸಿಸಾಂದಾ ಮಗಾಲ, ರಿಯಾನ್ ರಿಕೆಲ್ಟನ್, ಡಾನ್ ಒಲಿವಿಯರ್.

ಪಂದ್ಯ ಆರಂಭ: ಮಧ್ಯಾಹ್ನ 1.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.