
ನವದೆಹಲಿ: ಪಾಕಿಸ್ತಾನ ತಂಡವು ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರದಿಂದ ‘ಯು-ಟರ್ನ್’ ತೆಗೆದುಕೊಳ್ಳುತ್ತದೆ. ಆದರೆ, ಅದನ್ನು ಲೆಕ್ಕಿಸದೆ ಐಸಿಸಿ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಆಗ್ರಹಿಸಿದ್ದಾರೆ.
ಫೆಬ್ರುವರಿ 15ರಂದು ಭಾರತ ವಿರುದ್ಧ ನಡೆಯಬೇಕಿದ್ದ ಹೈವೋಲ್ಟೇಜ್ ಪಂದ್ಯವನ್ನು ಆಡದಿರಲು ಪಾಕಿಸ್ತಾನ ತಂಡ ನಿರ್ಧರಿಸಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ. ಆದರೆ, ಈ ನಿರ್ಧಾರಕ್ಕೆ ಪಾಕಿಸ್ತಾನ ಯಾವುದೇ ಅಧಿಕೃತ ಕಾರಣ ನೀಡಿಲ್ಲ. ಪಾಕಿಸ್ತಾನ ತೆಗೆದುಕೊಂಡಿರುವ ಈ ನಿರ್ಧಾರವನ್ನು ಬಾಂಗ್ಲಾದೇಶದ ಜೊತೆ ಒಗ್ಗಟ್ಟು ಪ್ರದರ್ಶಿಸುವ ಸೂಚನೆ ಎಂದು ಅಂದಾಜಿಸಲಾಗುತ್ತಿದೆ.
ಭದ್ರತಾ ಕಾರಣಗಳನ್ನು ನೀಡಿ ಭಾರತದಲ್ಲಿ ಆಯೋಜನೆಗೊಂಡಿರುವ ಪಂದ್ಯಗಳನ್ನು ಆಡಲು ನಿರಾಕರಿಸಿದ ಬಳಿಕ ಬಾಂಗ್ಲಾದೇಶ ತಂಡವನ್ನು ಟಿ20 ವಿಶ್ವಕಪ್‌ನಿಂದ ಹೊರಹಾಕಲಾಗಿದೆ.
‘ಮುಂದಿನ ನಾಲ್ಕೈದು ದಿನಗಳಲ್ಲಿ ವಿಶ್ವದಾದ್ಯಂತ ಮತ್ತು ಅವರದೇ ದೇಶದ ಮಾಜಿ ಆಟಗಾರರಿಂದ ಪ್ರತಿಕ್ರಿಯೆಗಳು ಹರಿದುಬರಲು ಪ್ರಾರಂಭಿಸಿದ ಬಳಿಕ ಪಾಕಿಸ್ತಾನ ತನ್ನ ನಿಲುವನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ’ ಎಂದು ಗವಾಸ್ಕರ್ ವ್ಯಂಗ್ಯವಾಡಿದ್ದಾರೆ.
‘ಇದರಲ್ಲಿ ಹೊಸದೇನಿದೆ? ಪಾಕಿಸ್ತಾನ ಕ್ರಿಕೆಟಿಗರು ಕೂಡ ಮೊದಲು ನಿವೃತ್ತಿ ಘೋಷಿಸುತ್ತಾರೆ. ನಾಲ್ಕು ದಿನಗಳ ನಂತರ, ನಮ್ಮ ಅಭಿಮಾನಿಗಳು ನಮ್ಮನ್ನು ಇನ್ನಷ್ಟು ದಿನ ಮೈದಾನದಲ್ಲಿ ನೋಡಲು ಆಗ್ರಹಿಸುತ್ತಿದ್ದಾರೆ ಎಂದು ಕಾರಣ ನೀಡಿ ನಿವೃತ್ತಿ ಹಿಂಪಡೆಯುತ್ತಾರೆ. ಅದರಂತೆ ಈ ಇದು ಕೂಡ ಸಂಭವಿಸಬಹುದು’ ಎಂದರು.
‘ಭಾರತ ವಿರುದ್ಧದ ಹೈವೋಲ್ಟೇಜ್ ಪಂದ್ಯದಿಂದ ಹಿಂದೆ ಸರಿದಿರುವುದಕ್ಕೆ ಪಾಕಿಸ್ತಾನ ಸರಿಯಾದ ಕಾರಣ ನೀಡದಿದ್ದರೆ ಅಥವಾ ಐಸಿಸಿ ಜೊತೆಗಿನ ಒಪ್ಪಂದವನ್ನು ಉಲ್ಲಂಘಿಸುವ ಕಾರಣಗಳನ್ನು ನೀಡಲು ಮುಂದಾದರೆ ಐಸಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ’ ಎಂದಿದ್ದಾರೆ.
‘ಐಸಿಸಿಯು ಪಾಕಿಸ್ತಾನದ ವಿರುದ್ಧ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂದು ನನಗೆ ತಿಳಿದಿಲ್ಲ. ಆದರೆ, ಐಸಿಸಿ ತೆಗೆದುಕೊಳ್ಳುವ ಕ್ರಮದಿಂದ ವಿಶ್ವ ಕ್ರಿಕೆಟ್‌ನಲ್ಲಿ ಯಾವುದೇ ತಂಡ ಆ ರೀತಿಯ ನಿರ್ಧಾರ ತೆಗೆದುಕೊಳ್ಳಲು ಯೋಚಿಸಬಾರದು’ ಎಂದಿದ್ದಾರೆ.
ಇನ್ನೂ ಪಾಕಿಸ್ತಾನದ ನಿರ್ಧಾರದ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಹರ್ಭಜನ್ ಸಿಂಗ್ ಅವರು, ಕೊನೆ ಕ್ಷಣದಲ್ಲಿ ಈ ರೀತಿ ನಿರ್ಧಾರ ತೆಗೆದುಕೊಂಡಿರುವ ಪಾಕಿಸ್ತಾನ ತಂಡವನ್ನು ಐಸಿಸಿ ಸುಮ್ಮನೆ ಬಿಡಬಾರದು ಎಂದಿದ್ದಾರೆ.
‘ಪಾಕಿಸ್ತಾನಕ್ಕೆ ಆರಂಭದಲ್ಲಿ ಭಾರತದ ವಿರುದ್ಧ ಆಡಲು ಯಾವುದೇ ಸಮಸ್ಯೆ ಇರಲಿಲ್ಲ. ಈಗ ಅವರು ಬಾಂಗ್ಲಾದೇಶದ ಸಮಸ್ಯೆಯಲ್ಲಿ ಮೂಗು ತೂರಿಸಿದ್ದಾರೆ. ಈ ನಿರ್ಧಾರವು ಐಸಿಸಿ ಹಾಗೂ ವಿಶ್ವಕಪ್ ಪಂದ್ಯಾವಳಿಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗಾಗಿ ಐಸಿಸಿ ಕಾನೂನು ಕ್ರಮ ಕೈಗೊಳ್ಳುವ ಎಲ್ಲ ಹಕ್ಕನ್ನು ಹೊಂದಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.