ಲಾಹೋರ್: ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಅಫ್ಗಾನಿಸ್ತಾನದ ಮೂವರು ಸ್ಥಳೀಯ ಕ್ರಿಕೆಟಿಗರು ಸಾವೀಗಿಡಾದ ಬಳಿಕ ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿ ಪಾಕಿಸ್ತಾನದಲ್ಲಿ ನವೆಂಬರ್ 17ರಿಂದ ನಡೆಯಬೇಕಿದ್ದ ತ್ರಿಕೋನ ಸರಣಿ ಆಡದಿರಲು ನಿರ್ಧರಿಸಿತ್ತು. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಿಗದಿಯಂತೆ ಸರಣಿ ನಡೆಯಲಿದೆ ಶನಿವಾರ ತಿಳಿಸಿದೆ.
ಶ್ರೀಲಂಕಾದ ಜೊತೆ ತ್ರಿಕೋನ ಸರಣಿ ಆಡಲು ಅಫ್ಗಾನಿಸ್ತಾನದ ಬದಲು ಮೂರನೇ ತಂಡವನ್ನು ಸೇರಿಸಿಕೊಳ್ಳುವ ಕುರಿತು ಇತರೆ ಕ್ರಿಕೆಟ್ ಮಂಡಳಿಗಳ ಜೊತೆಗೆ ಪಿಸಿಬಿ ಮಾತುಕತೆ ನಡೆಸುತ್ತಿದೆ ಎಂದು ಪಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಅಫ್ಗಾನಿಸ್ತಾನ ತಂಡ ತ್ರಿಕೋನ ಸರಣಿಯಿಂದ ಹಿಂದೆ ಸರಿದರೂ, ನಿಗದಿತ ವೇಳಾಪಟ್ಟಿಯಂತೆ ಈ ಸರಣಿ ನಡೆಯಲಿದೆ. ನಾವು ಅಫ್ಗಾನಿಸ್ತಾನಕ್ಕೆ ಬದಲಿ ತಂಡವನ್ನು ಹುಡುಕುತ್ತಿದ್ದೇವೆ. ಅಂತಿಮಗೊಂಡ ಬಳಿಕ ಘೋಷಣೆ ಮಾಡುತ್ತೇವೆ. ತ್ರಿಕೋನ ಸರಣಿ ನಿಗದಿಯಂತೆ ನವೆಂಬರ್ 17ರಿಂದ ಆರಂಭವಾಗಲಿದೆ‘ ಎಂದು ಅವರು ಹೇಳಿದರು.
ಪಕ್ತಿಕಾ ಪ್ರಾಂತ್ಯದಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಿಂದ ಅಫ್ಗಾನಿಸ್ತಾನದ ಮೂವರು ಸ್ಥಳೀಯ ಕ್ರಿಕೆಟಿಗರು ಸಾವಿಗೀಡಾಗಿದ್ದರು. ಇದಾದ ಬಳಿಕ ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿ ಪಾಕಿಸ್ತಾನದ ಜೊತೆಗೆ ಕ್ರಿಕೆಟ್ ಆಡುವುದಿಲ್ಲ ಎಂದು ತ್ರಿಕೋನ ಸರಣಿಯಿಂದ ಹಿಂದೆ ಸರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.