ADVERTISEMENT

IND vs PAK| ವಿಶ್ವಕಪ್ ಬಹಿಷ್ಕರಿಸಿದ್ದು ಇದೇ ಮೊದಲಲ್ಲ; ಈ ಹಿಂದಿನ ಘಟನೆಗಳ ವಿವರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2026, 12:56 IST
Last Updated 2 ಫೆಬ್ರುವರಿ 2026, 12:56 IST
<div class="paragraphs"><p>ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಖರಿ</p></div>

ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಖರಿ

   

ಫೆಬ್ರುವರಿ 7ರಿಂದ ಭಾರತ ಹಾಗೂ ಶ್ರೀಲಂಕಾದಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯು ಹಲವು ವಿವಾದಗಳಿಗೆ ಕಾರಣವಾಗಿದೆ. ಭಾರತದಲ್ಲಿ ಆಡಲು ನಿರಾಕರಿಸಿದ ಬಾಂಗ್ಲಾದೇಶ ತಂಡವನ್ನು ಟೂರ್ನಿಯಿಂದಲೇ ಹೊರಗಿಡಲಾಗಿದೆ. ಇತ್ತ ಪಾಕಿಸ್ತಾನ ತಂಡ ಭಾರತದ ವಿರುದ್ಧ ಪಂದ್ಯ ಆಡದಿರಲು ನಿರ್ಧರಿಸಿದೆ.

ಪಾಕಿಸ್ತಾನದ ನಿರ್ಧಾರದಿಂದ ಕೆರಳಿರುವ ಐಸಿಸಿ, ಪಾಕಿಸ್ತಾನದ ನಿರ್ಧಾರವನ್ನು ‍ಪ್ರಶ್ನಿಸಿದೆ. ಮಾತ್ರವಲ್ಲ, ಭಾರೀ ಪ್ರಮಾಣದ ದಂಡನಾತ್ಮಕ ನಿರ್ಬಂಧಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದೆ.

ಕ್ರಿಕೆಟ್ ಅನ್ನು 'ಜಂಟಲ್‌ಮೆನ್ ಗೇಮ್' ಎಂದು ಕರೆಯಲಾಗುತ್ತದೆ. ಆದರೆ, ಮೈದಾನದ ಒಳಗೆ ಮತ್ತು ಹೊರಗೆ ಅನೇಕ ಅಹಿತಕರ ಘಟನೆಗಳು ನಡೆದಿರುವುದು ಗಮನಾರ್ಹ. ಈ ರೀತಿ ವಿಶ್ವಕಪ್‌ ಪಂದ್ಯಾವಳಿಯನ್ನು ಬಹಿಷ್ಕರಿಸಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು 4 ತಂಡಗಳು ಈ ರೀತಿಯ ನಿರ್ಧಾರ ತೆಗೆದುಕೊಂಡಿವೆ.

1996ರ ಏಕದಿನ ವಿಶ್ವಕಪ್: ಆಸ್ಟ್ರೇಲಿಯಾ (ಶ್ರೀಲಂಕಾ ವಿರುದ್ಧ)

1996ರ ವಿಶ್ವಕಪ್ ಟೂರ್ನಿಯನ್ನು ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳು ಜಂಟಿಯಾಗಿ ಆಯೋಜಿಸಿದ್ದವು. ಈ ಪಂದ್ಯಾವಳಿ ಆರಂಭದಿಂದಲೂ ವಿವಾದಗಳಲ್ಲಿ ಸಿಲುಕಿತ್ತು. ಶ್ರೀಲಂಕಾದಲ್ಲಿ ನಾಗರಿಕ ದಾಳಿಯಿಂದ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು ಮತ್ತು ಟೂರ್ನಮೆಂಟ್ ಆರಂಭವಾಗುವ ಕೆಲವೇ ವಾರಗಳ ಮೊದಲು ಬಾಂಬ್ ಸ್ಫೋಟ ಕೂಡ ಸಂಭವಿಸಿತ್ತು.

ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಲೀಗ್ ಮಾದರಿಯ ಪಂದ್ಯವನ್ನು ಆಡಲು ಶ್ರೀಲಂಕಾದ ಕೊಲೊಂಬೊಗೆ ಪ್ರಯಾಣಿಸಲು ನಿರಾಕರಿಸಿತ್ತು. ಕಾಂಗರೂಗಳು ತಮ್ಮ ಪಾಲಿನ ಎರಡು ಅಂಕಗಳನ್ನು ಕಳೆದುಕೊಂಡಿತ್ತು. ಆದರೆ, ಈ ಎರಡೂ ತಂಡಗಳು ಆ ವರ್ಷ ಫೈನಲ್ ತಲುಪಿದ್ದು, ಲಾಹೋರ್‌ನಲ್ಲಿ ನಡೆದ ಫೈನಲ್ ಪಂದ್ಯವನ್ನು ಶ್ರೀಲಂಕಾ ಗೆದ್ದುಕೊಂಡಿತ್ತು.

1996ರ ಏಕದಿನ ವಿಶ್ವಕಪ್ ವೆಸ್ಟ್ ಇಂಡೀಸ್ (ಶ್ರೀಲಂಕಾ ವಿರುದ್ಧ)

ಶ್ರೀಲಂಕಾಗೆ ಪ್ರಯಾಣಿಸಲು ವಿರೋಧಿಸಿದ್ದ ಆಸ್ಟ್ರೇಲಿಯಾ ನಡೆಯನ್ನು ಅನುಸರಿಸಿದ ವೆಸ್ಟ್ ಇಂಡೀಸ್ ಕೂಡ ಶ್ರೀಲಂಕಾದಲ್ಲಿ ಆಡಲು ಹಿಂದೇಟು ಹಾಕಿತ್ತು. ಆ ಮೂಲಕ ಲೀಗ್‌ನಲ್ಲಿ ಪ್ರಮುಖ ಅಂಕಗಳನ್ನು ಎದುರಾಳಿ ತಂಡಕ್ಕೆ ಬಿಟ್ಟುಕೊಟ್ಟಿತ್ತು. ಆದರೂ, ಕೆರಿಬಿಯನ್ ತಂಡ ಸೆಮಿಫೈನಲ್ ಪ್ರವೇಶಿಸಿತ್ತು. ಅಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತ್ತು.

2003ರ ಏಕದಿನ ವಿಶ್ವಕಪ್: ಇಂಗ್ಲೆಂಡ್ (ಜಿಂಬಾಬ್ವೆ ವಿರುದ್ಧ)

2003ರ ಏಕದಿನ ವಿಶ್ವಕಪ್‌ ಅನ್ನು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ಕೀನ್ಯಾ ದೇಶಗಳು ಜಂಟಿಯಾಗಿ ಆಯೋಜಿಸಿದ್ದವು. ಜಿಂಬಾಬ್ವೆಯ ರಾಬರ್ಟ್ ಮುಗಾಬೆ ಆಡಳಿತ ಮತ್ತು ಟೋನಿ ಬ್ಲೇರ್ ನೇತೃತ್ವದ ಯುಕೆ ಸರ್ಕಾರದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ಕಾರಣದಿಂದಾಗಿ, ಲೀಗ್ ಮಾದರಿಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಹರಾರೆಗೆ ಪ್ರಯಾಣಿಸಲು ನಿರಾಕರಿಸಿತ್ತು.

2003ರ ಏಕದಿನ ವಿಶ್ವಕಪ್: ನ್ಯೂಜಿಲೆಂಡ್ (ಕೀನ್ಯಾ ವಿರುದ್ಧ)

ಅದೇ ವರ್ಷದ ಪಂದ್ಯಾವಳಿಯಲ್ಲಿ ಭದ್ರತೆಯ ಕಾರಣಗಳನ್ನು ನೀಡಿ ನ್ಯೂಜಿಲೆಂಡ್ ತಂಡವು ನೈರೋಬಿಗೆ ಪ್ರಯಾಣಿಸಲು ನಿರಾಕರಿಸಿತ್ತು. ಆ ವರ್ಷ ಮೊಂಬಾಸಾದಲ್ಲಿದ್ದ ಇಸ್ರೇಲ್ ಒಡೆತನದ ಹೋಟೆಲ್ ಒಂದರ ಮೇಲೆ ಭಯೋತ್ಪಾದನಾ ದಾಳಿ ನಡೆದು 16 ಜನರು ಮೃತಪಟ್ಟಿದ್ದರು. ಈ ಹಿನ್ನೆಲೆ ಕಿವೀಸ್ ತನ್ನ ಪಂದ್ಯಾವಳಿಗಳನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸುವಂತೆ ಐಸಿಸಿಯನ್ನು ಕೋರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.