ಮೊಹಮ್ಮದ್ ಅಮೀರ್
(ಚಿತ್ರ ಕೃಪೆ: X/@iamamirofficial)
ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಎಡಗೈ ವೇಗದ ಬೌಲರ್ ಮೊಹಮ್ಮದ್ ಅಮೀರ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
'ಸಾಕಷ್ಟು ಆಲೋಚನೆಗಳ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಲು ನಿರ್ಧರಿಸಿದ್ದೇನೆ' ಎಂದು 32 ವರ್ಷದ ಅಮೀರ್ ತಿಳಿಸಿದ್ದಾರೆ.
ಕ್ರಿಕೆಟ್ ವೃತ್ತಿ ಜೀವನದಲ್ಲಿ ಸ್ಪಾಟ್ ಫಿಕ್ಸಿಂಗ್ ಸೇರಿದಂತೆ ಹಲವಾರು ವಿವಾದಗಳು ಅಮೀರ್ ಅವರನ್ನು ಸುತ್ತುವರಿದಿತ್ತು.
2010ರ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಸಿಕ್ಕಿಬಿದ್ದಿದ್ದ ಅಮೀರ್, ಐದು ವರ್ಷಗಳ ನಿಷೇಧದ ಶಿಕ್ಷೆಗೊಳಗಾಗಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸಹ ಆಟಗಾರರಾದ ಸಲ್ಮಾನ್ ಭಟ್ ಮತ್ತು ಮೊಹಮ್ಮದ್ ಆಸಿಫ್ ಸಹ ಸಿಕ್ಕಿಬಿದ್ದಿದ್ದರು. ಬಳಿಕ ಜೈಲಿಗೆ ಅಟ್ಟಲಾಗಿತ್ತು.
2016ರಲ್ಲಿ ಕ್ರಿಕೆಟ್‌ಗೆ ಮರಳಿದ್ದ ಅಮೀರ್, 2021ರಲ್ಲಿ ನಿವೃತ್ತಿ ಘೋಷಿಸಿದ್ದರು. ಆದರೆ ಜಗತ್ತಿನ ವಿವಿಧ ಟ್ವೆಂಟಿ-20 ಕ್ರಿಕೆಟ್ ಲೀಗ್‌ಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.
ಈ ವರ್ಷಾರಂಭದಲ್ಲಿ ಟ್ವೆಂಟಿ-20 ಕ್ರಿಕೆಟ್‌ಗೆ ಮರಳಿದ್ದ ಅಮೀರ್, ಅಮೆರಿಕ ಮತ್ತು ವೆಸ್ಟ್‌ಇಂಡೀಸ್ ಜಂಟಿ ಆತಿಥ್ಯ ವಹಿಸಿದ್ದ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದರು.
'ಇದು ಸುಲಭದ ನಿರ್ಧಾರ ಆಗಿರಲಿಲ್ಲ. ಆದರೆ ಅನಿವಾರ್ಯವಾಗಿದ್ದು, ಪಾಕಿಸ್ತಾನ ಕ್ರಿಕೆಟ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಮುಂದಿನ ಪೀಳಿಗೆಗೆ ಅವಕಾಶ ನೀಡುವ ಸಮಯ ಬಂದಿದೆ' ಎಂದು ಹೇಳಿದ್ದಾರೆ.
ಅಮೀರ್ 36 ಟೆಸ್ಟ್ ಪಂದ್ಯಗಳಲ್ಲಿ 119 ವಿಕೆಟ್ ಗಳಿಸಿದ್ದಾರೆ. ಹಾಗೆಯೇ 61 ಏಕದಿನಗಳಲ್ಲಿ 81 ಮತ್ತು 62 ಟಿ20 ಪಂದ್ಯಗಳಲ್ಲಿ 71 ವಿಕೆಟ್ ಗಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.