ಹಾರ್ದಿಕ್ ಪಾಂಡ್ಯ
(ಪಿಟಿಐ ಚಿತ್ರ)
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2025ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವನ್ನು ನಾಯಕ ಹಾರ್ದಿಕ್ ಪಾಂಡ್ಯ ವ್ಯಕ್ತಪಡಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ ಮುಂಬೈ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ತಂಡಕ್ಕೆ ಮರಳಿದ್ದರು. ಆದರೆ ಅವರ ಪ್ರಯಾಣವು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ.
ರೋಹಿತ್ ಶರ್ಮಾ ಅವರ ಸ್ಥಾನಕ್ಕೆ ನಾಯಕರಾಗಿ ಆಯ್ಕೆಯಾಗಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಪಾಂಡ್ಯ ಅವರನ್ನು ತವರು ಮೈದಾನದಲ್ಲೇ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಗೇಲಿ ಮಾಡಿದ್ದರು.
ತಂಡದ ಫಲಿತಾಂಶವೂ ಅತ್ಯಂತ ಕೆಟ್ಟದಾಗಿತ್ತು. 10 ತಂಡಗಳಿದ್ದ ಟೂರ್ನಿಯಲ್ಲಿ ಮುಂಬೈ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಆದರೆ ಕಳೆದೊಂದು ವರ್ಷದಲ್ಲಿ ಟೀಮ್ ಇಂಡಿಯಾದ ಪರ ಪಾಂಡ್ಯ ಸಾಕಷ್ಟು ಯಶಸ್ಸನ್ನು ಗಳಿಸಿದ್ದಾರೆ. ಟ್ವೆಂಟಿ-20 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತ ತಂಡದ ಅವಿಭಾಜ್ಯ ಅಂಗವಾಗಿದ್ದರು. ಆ ಮೂಲಕ ಮರಳಿ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಾಂಡ್ಯ, 'ಯಾವತ್ತೂ ದೇಶದ ಪರ ಆಡುವುದು ಹೆಮ್ಮೆಯ ವಿಷಯ. ದೇಶವನ್ನು ಪ್ರತಿನಿಧಿಸುವುದಕ್ಕೆ ಮೊದಲ ಆದ್ಯತೆಯಾಗಿದೆ. ಎರಡು ಐಸಿಸಿ ಟ್ರೋಫಿಗಳು ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಈ ಯಶಸ್ಸನ್ನು ಐಪಿಎಲ್‌ನಲ್ಲೂ ಮುಂದುವರಿಸುವ ವಿಶ್ವಾಸವಿದೆ' ಎಂದು ಹೇಳಿದ್ದಾರೆ.
'ಕಳೆದ ನಾಲ್ಕು ಆವೃತ್ತಿ ಮುಂಬೈ ಪಾಲಿಗೆ ಕೆಟ್ಟದ್ದಾಗಿತ್ತು. ಈ ಸಲ ಎಲ್ಲರೂ ಖುಷಿಯಾಗಿ, ಒಗ್ಗಟ್ಟಿನಿಂದ ಟೂರ್ನಿಯನ್ನು ಎದುರಿಸಲಿದ್ದೇವೆ' ಎಂದು ಹೇಳಿದ್ದಾರೆ.
'ನನ್ನ ಬುದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಆದರೆ ಪ್ರತಿಯೊಂದು ಕಲಿಕೆಯನ್ನು ಆನಂದಿಸಿದ್ದೇನೆ. ಕ್ರೀಡೆ ಹಾಗೂ ಬದುಕು ಸಾಕಷ್ಟು ಕಲಿಸಿದೆ. ಇದು ಹೊಸ ಆವೃತ್ತಿ. ತುಂಬಾ ವಿಷಯಗಳು ಬದಲಾಗಿವೆ. ನೀವು 'ಹಾರ್ದಿಕ್ 3.0' ಎಂದು ಕರೆಯಲು ಬಯಸುದಾದರೆ ಆ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದ್ದೇನೆ' ಎಂದು ತಿಳಿಸಿದ್ದಾರೆ.
'ತಂಡದ ಸಹ ಆಟಗಾರರಿಗೆ ನರವಾಗುವುದೇ ನನ್ನ ಜವಾಬ್ದಾರಿಯಾಗಿದೆ' ಎಂದು ಹಾರ್ದಿಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.