ADVERTISEMENT

ವಿಶ್ವಕಪ್‌ ಸೆಮಿಫೈನಲ್‌ ಸೋಲಿಗೆ ಇರ್ಫಾನ್ ಪಠಾಣ್‌‌ ನೀಡಿದ ಕಾರಣವಿದು...

ಭಾರತದ ಹಿರಿಯ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಅನಿಸಿಕೆ

ಪಿಟಿಐ
Published 14 ಜೂನ್ 2020, 11:08 IST
Last Updated 14 ಜೂನ್ 2020, 11:08 IST
ಇರ್ಫಾನ್‌ ಪಠಾಣ್‌
ಇರ್ಫಾನ್‌ ಪಠಾಣ್‌    

ಮುಂಬೈ: ‘ಭಾರತ ಕ್ರಿಕೆಟ್‌ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆ. ಹೀಗಿದ್ದರೂ ನಾವು ಐಸಿಸಿ ಟೂರ್ನಿಗಳಲ್ಲಿ ಯಶಸ್ಸು ಸಾಧಿಸಲು ಪರದಾಡುತ್ತಿದ್ದೇವೆ. ಸೂಕ್ತ ಯೋಜನೆಗಳಿಲ್ಲದೇ ಕಣಕ್ಕಿಳಿಯುತ್ತಿರುವುದು ಇದಕ್ಕೆ ಮುಖ್ಯ ಕಾರಣ’ ಎಂದು ಭಾರತದ ಹಿರಿಯ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರತ ತಂಡವು 2013ರಲ್ಲಿ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿತ್ತು. ಆಗ ಮಹೇಂದ್ರ ಸಿಂಗ್‌ ಧೋನಿ ನಾಯಕರಾಗಿದ್ದರು. ಬಳಿಕ ತಂಡವು ಒಮ್ಮೆಯೂ ಐಸಿಸಿ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿಲ್ಲ. ಹೋದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್‌ ಕೊಹ್ಲಿ ನೇತೃತ್ವದ ತಂಡವು ಸೆಮಿಫೈನಲ್‌ನಲ್ಲಿ ಎಡವಿತ್ತು.

‘ವಿಶ್ವಕಪ್‌ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇತ್ತು. ಆಗ ತಂಡವು ನಾಲ್ಕನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟ್ಸ್‌ಮನ್‌ನ ಹುಡುಕಾಟದಲ್ಲಿತ್ತು. ಜೊತೆಗೆ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡುವಲ್ಲೂ ಎಡವಿತು. ಈ ಕಾರಣಗಳಿಂದಾಗಿಯೇ ತಂಡವು ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು ಮಣಿದಿತ್ತು’ ಎಂದು ಇರ್ಫಾನ್‌ ನುಡಿದಿದ್ದಾರೆ.

ADVERTISEMENT

‘ವಿಶ್ವಕಪ್‌ ತಂಡದಲ್ಲಿದ್ದ ಎಲ್ಲಾ ಆಟಗಾರರೂ ಫಿಟ್‌ ಆಗಿದ್ದರು. ಅಗಾದ ಸಂಪನ್ಮೂಲವೂ ಇತ್ತು. ಆದರೆ ಸರಿಯಾದ ಯೋಜನೆ ಇರಲಿಲ್ಲ. ಹೀಗಾಗಿಯೇ ವಿಶ್ವ ಚಾಂಪಿಯನ್‌ ಪಟ್ಟಕ್ಕೇರುವ ತಂಡದ ಕನಸು ಕೈಗೂಡಲಿಲ್ಲ’ ಎಂದು 35 ವರ್ಷ ವಯಸ್ಸಿನ ಆಲ್‌ರೌಂಡರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.