ADVERTISEMENT

ಕೊಹ್ಲಿ, ಸ್ಮಿತ್‌ಗಿಂತ ವಿಲಿಯರ್ಸ್ ಅತ್ಯುತ್ತಮ ಆಟಗಾರ: ಪೀಟರ್ ಬೊರೆನ್

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 13:00 IST
Last Updated 16 ಅಕ್ಟೋಬರ್ 2020, 13:00 IST
ಎಬಿ ಡಿ ವಿಲಿಯರ್ಸ್
ಎಬಿ ಡಿ ವಿಲಿಯರ್ಸ್   

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್ ಅವರು ಟೀಂ ಇಂಡಿಯಾ ನಾಯ ವಿರಾಟ್‌ ಕೊಹ್ಲಿಗಿಂತಲೂ ಅತ್ಯುತ್ತಮ ಬ್ಯಾಟ್ಸ್‌ಮನ್‌ ಎಂದುನೆದರ್ಸ್‌ಲ್ಯಾಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಪೀಟರ್‌ ಬೊರೆನ್ ಹೇಳಿದ್ದಾರೆ.

ವಿಲಿಯರ್ಸ್ ಸದ್ಯ ನಡೆಯುತ್ತಿರುವ ಐಪಿಎಲ್‌–2020 ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಿಂದ 230 ರನ್‌ ಗಳಿಸಿದ್ದಾರೆ. ಇದರೊಂದಿಗೆ 200ಕ್ಕಿಂತ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ವಿಲಿಯರ್ಸ್‌ ಕುರಿತು ಟ್ವೀಟ್‌ ಮಾಡಿರುವ ಪೀಟರ್‌,‘ನೀವು ಸ್ಟೀವ್‌ ಸ್ಮಿತ್‌, ಕೇನ್‌ ವಿಲಿಯಮ್ಸನ್‌, ಕೊಹ್ಲಿ ಮತ್ತು ಬಾಬರ್‌ ಅಜಂ/ಜೋ ರೂಟ್‌ ಅವರನ್ನು ಪ್ರಮುಖ ನಾಲ್ವರು ಬ್ಯಾಟ್ಸ್‌ಮನ್‌ಗಳು ಎನ್ನುವುದನ್ನು ಕೇಳಿದರೆ ತಮಾಷೆ ಎನಿಸುತ್ತದೆ. ಏಕೆಂದರೆ ವಿಲಿಯರ್ಸ್‌ ಅವರೆಲ್ಲರಿಗಿಂತಲೂ ಅತ್ಯುತ್ತಮ ಬ್ಯಾಟ್ಸ್‌ಮನ್‌’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ವಿಲಿಯರ್ಸ್‌ 114 ಟೆಸ್ಟ್‌ ಪಂದ್ಯಗಳಿಂದ 50.66ರ ಸರಾಸರಿಯಲ್ಲಿ 8,765 ರನ್‌ ಗಳಿಸಿದ್ದಾರೆ. 228 ಏಕದಿನ ಪಂದ್ಯಗಳಿಂದ 53.5ರ ಸರಾಸರಿಯಲ್ಲಿ 9,577 ರನ್‌ ಕಲೆಹಾಕಿದ್ದಾರೆ. ಮಾತ್ರವಲ್ಲದೆದಕ್ಷಿಣ ಆಫ್ರಿಕಾದ ಈ ಆಟಗಾರ ವಿಶ್ವದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರೆನಿಸಿದ್ದಾರೆ.

ಸಾಮಾನ್ಯವಾಗಿ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿಯುವ ವಿಲಿಯರ್ಸ್,‌ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡದ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ 6ನೇ ಕ್ರಮಾಂಕದಲ್ಲಿ ಆಡಿದ್ದರು. ಇದು ಅಚ್ಚರಿಗೆ ಕಾರಣವಾಗಿತ್ತು. ವಾಷಿಂಗ್ಟನ್‌ ಸುಂದರ್‌ ಮತ್ತು ಶಿವಂ ದುಬೆ ಅವರು ವಿಲಿಯರ್ಸ್‌ಗಿಂತ ಮೊದಲು ಕ್ರೀಸ್‌ಗೆ ಬಂದಿದ್ದರು.

ಆದರೆ,ಸುಂದರ್‌ ಹಾಗೂ ದುಬೆ ದೊಡ್ಡ ಇನಿಂಗ್ಸ್‌ ಆಡುವಲ್ಲಿ ವಿಫವಾಗಿದ್ದರು. ಕೊನೆಯಲ್ಲಿ ಬಂದ ವಿಲಿಯರ್ಸ್‌ ಹೆಚ್ಚು ರನ್‌ ಗಳಿಸಲಾಗದೆ ಔಟಾಗಿದ್ದರು. ಇದರಿಂದಾಗಿ ಶಾರ್ಜಾದಂತಹ ಚಿಕ್ಕ ಕ್ರಿಡಾಂಗಣದಲ್ಲಿ ಬೃಹತ್‌ ಮೊತ್ತ ಕಲೆಹಾಕುವ ಆರ್‌ಸಿಬಿಯ ಯೋಜನೆ ಉಲ್ಟಾ ಆಗಿತ್ತು. ಆರ್‌ಸಿಬಿ ನೀಡಿದ್ದ 172 ರನ್‌ ಗುರಿಯನ್ನು ಕಿಂಗ್ಸ್ ಪಡೆ ಕೇವಲ 2 ವಿಕೆಟ್‌ ಕಳೆದುಕೊಂಡು ತಲುಪಿತ್ತು.

ಕೊಹ್ಲಿಯ ಈ ನಿರ್ಧಾರಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಸ್ಪಷ್ಟನೆ ನೀಡಿದ್ದ ಕೊಹ್ಲಿ, ಕ್ರೀಸ್‌ನಲ್ಲಿ ಎಡ-ಬಲ ಬ್ಯಾಟ್ಸ್‌ಮನ್‌ಗಳ ಸಂಯೋಜನೆ ಕಾಪಾಡಿಕೊಳ್ಳಲು ಸುಂದರ್‌ ಮತ್ತು ದುಬೆಗೆ ಬಡ್ತಿ ನೀಡಲಾಗಿತ್ತು ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.