ADVERTISEMENT

ಆಟಗಾರರು ದೇಶಕ್ಕಿಂತ ಐಪಿಎಲ್‌ಗೆ ಆದ್ಯತೆ ನೀಡುತ್ತಾರೆ; ಕಪಿಲ್ ದೇವ್ ಗರಂ

ಪಿಟಿಐ
Published 8 ನವೆಂಬರ್ 2021, 12:52 IST
Last Updated 8 ನವೆಂಬರ್ 2021, 12:52 IST
ಟೀಮ್ ಇಂಡಿಯಾ
ಟೀಮ್ ಇಂಡಿಯಾ   

ನವದೆಹಲಿ: ಆಟಗಾರರು ದೇಶಕ್ಕಿಂತ ಐಪಿಎಲ್‌ಗೆ ಆದ್ಯತೆ ನೀಡುತ್ತಾರೆ. ಇದನ್ನು ತಪ್ಪಿಸಲು ವೇಳಾಪಟ್ಟಿಯನ್ನು ಸರಿಯಾಗಿ ರೂಪಿಸುವ ಜವಾಬ್ದಾರಿ ಬಿಸಿಸಿಐ ಮೇಲಿದೆ ಎಂದು 1983ರ ವಿಶ್ವಕಪ್ ವಿಜೇತ ಮಾಜಿ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

ಪ್ರಸಕ್ತ ಸಾಗುತ್ತಿರುವ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸುವಲ್ಲಿ ಭಾರತ ವಿಫಲವಾಗಿದೆ.

'ಆಟಗಾರರು ದೇಶಕ್ಕಾಗಿ ಆಡುವುದಕ್ಕಿಂತ ಐಪಿಎಲ್‌ಗೆ ಆದ್ಯತೆ ನೀಡಿದಾಗ ನಾವೇನು ಹೇಳಬಲ್ಲೆವು? ದೇಶಕ್ಕಾಗಿ ಆಡುವುದಕ್ಕಾಗಿ ಆಟಗಾರರು ಹೆಮ್ಮೆಪಟ್ಟುಕೊಳ್ಳಬೇಕು. ಅವರ ಆರ್ಥಿಕ ಸ್ಥಿತಿ ಬಗ್ಗೆ ನನಗೆ ತಿಳಿದಿಲ್ಲ, ಆದ್ದರಿಂದ ಹೆಚ್ಚು ಹೇಳಲಾರೆ' ಎಂದು 'ಎಬಿಪಿ' ನ್ಯೂಸ್‌ಗೆ ತಿಳಿಸಿದ್ದಾರೆ.

'ದೇಶಕ್ಕೆ ಮೊದಲ ಆದ್ಯತೆ ನೀಡಬೇಕು. ಬಳಿಕವಷ್ಟೇ ಫ್ರಾಂಚೈಸಿ ತಂಡ ಎಂದು ನಾನು ಭಾವಿಸುತ್ತೇನೆ. ಐಪಿಎಲ್‌ನಲ್ಲಿ ಆಡಬೇಡಿ ಎಂದು ನಾನು ಹೇಳುತ್ತಿಲ್ಲ. ಆದರೆ ತನ್ನ ಕ್ರಿಕೆಟ್ ಅನ್ನು ಉತ್ತಮವಾಗಿ ಯೋಜಿಸುವ ಜವಾಬ್ದಾರಿ ಬಿಸಿಸಿಐ ಮೇಲಿದೆ' ಎಂದು ಹೇಳಿದರು.

'ಇದು ನಮಗೆ ದೊಡ್ಡ ಕಲಿಕೆಯಾಗಿದ್ದು, ಈ ಟೂರ್ನಿಯಲ್ಲಿ ಮಾಡಿದ ತಪ್ಪುಗಳನ್ನು ಪುನರಾವರ್ತಿಸಬಾರದು' ಎಂದು ಕಪಿಲ್ ದೇವ್ ಸಲಹೆ ನೀಡಿದರು.

ಇದಕ್ಕೂ ಮೊದಲು ಬಯೋಬಬಲ್ ಹಾಗೂ ಮಾನಸಿಕ ದಣಿವಿನ ಬಗ್ಗೆ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಹಾಗೂ ಬೌಲಿಂಗ್ ಕೋಚ್ ಭರತ್ ಅರುಣ್ ಉಲ್ಲೇಖ ಮಾಡಿದ್ದರು. ಐಪಿಎಲ್ ಹಾಗೂ ವಿಶ್ವಕಪ್ ನಡುವೆ ವಿರಾಮ ಬೇಕಿತ್ತು ಎಂದು ಭರತ್ ಅರುಣ್ ಪ್ರತಿಪಾದಿಸಿದ್ದರು.

'ಈಗ ಭವಿಷ್ಯದತ್ತ ದೃಷ್ಟಿ ಹಾಯಿಸಬೇಕಿದೆ. ಈಗಿನಿಂದಲೇ ಯೋಜನೆ ಸಿದ್ಧಗೊಳಿಸಬೇಕು. ವಿಶ್ವಕಪ್‌ನೊಂದಿಗೆ ಭಾರತದ ಇಡೀ ಕ್ರಿಕೆಟ್ ಮುಗಿದಿದೆ ಎಂಬುದಲ್ಲ. ಹೋಗಿ ಯೋಜನೆ ರೂಪಿಸಿಕೊಳ್ಳಿ!ಐಪಿಎಲ್ ಹಾಗೂ ವಿಶ್ವಕಪ್ ನಡುವೆ ಅಂತರ ಇರಬೇಕು ಎಂಬುದು ನನ್ನ ಅನಿಸಿಕೆಯಾಗಿದೆ. ಎಲ್ಲರೂ ಸೋಲಿನ ಹೊಣೆ ಹೊತ್ತುಕೊಳ್ಳಬೇಕು' ಎಂದು ಕಪಿಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.