ಗುಜರಾತ್ ಟೈಟನ್ಸ್ ತಂಡದ ಆಟಗಾರ ಪ್ರಸಿದ್ದ ಕೃಷ್ಣ
ಪ್ರಜಾವಾಣಿ ಚಿತ್ರ/ ಕೃಷ್ಣ ಕುಮಾರ್ ಪಿ.ಎಸ್.
ಮುಂಬೈ: ಐಪಿಎಲ್ ಅಂಕಪಟ್ಟಿಯ ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮಂಗಳವಾರ ಮುಖಾಮುಖಿಯಾಗಲಿವೆ.
ಮುಂಬೈ ಮತ್ತು ಟೈಟನ್ಸ್ ಪ್ಲೇ ಆಫ್‌ಗೆ ಲಗ್ಗೆ ಇಡುವ ನೆಚ್ಚಿನ ತಂಡಗಳಾಗಿವೆ. ಸತತ ಆರು ಪಂದ್ಯಗಳಲ್ಲಿ ಗೆದ್ದಿರುವ ಮುಂಬೈ ತಂಡವು ಮೂರನೇ ಸ್ಥಾನದಲ್ಲಿದೆ. ಆರಂಭಿಕ ಹಂತದ ಪಂದ್ಯಗಳಲ್ಲಿ ಹೆಚ್ಚು ಸೋತಿದ್ದರೂ ಪುಟಿದೆದ್ದ ಮುಂಬೈ ಅಮೋಘ ಆಟವಾಡುತ್ತಿದೆ. ರೋಹಿತ್ ಶರ್ಮಾ(293 ರನ್), ರಿಯಾನ್ ರಿಕೆಲ್ಟನ್ (334), ಸೂರ್ಯಕುಮಾರ್ ಯಾದವ್ (475), ತಿಲಕ್ ವರ್ಮಾ (239), ನಮನ್ ಧೀರ್ (155) ಆಲ್‌ರೌಂಡರ್ ವಿಲ್ ಜ್ಯಾಕ್ಸ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ (157 ಮತ್ತು 13 ವಿಕೆಟ್) ಅವರು ಬ್ಯಾಟಿಂಗ್ ವಿಭಾಗವನ್ನು ಬಲಾಢ್ಯಗೊಳಿಸಿದ್ದಾರೆ. ದೊಡ್ಡ ಮೊತ್ತಗಳ ಗಳಿಕೆ ಮತ್ತು ಚೇಸಿಂಗ್ ಎರಡರಲ್ಲೂ ಯಶಸ್ಸು ಸಾಧಿಸುತ್ತಿದೆ.
ಬೌಲಿಂಗ್ ವಿಭಾಗವೂ ನಿರೀಕ್ಷೆಗೆ ತಕ್ಕ ಆಟವಾಡುತ್ತಿದೆ. ಟ್ರೆಂಟ್ ಬೌಲ್ಟ್ (16 ವಿಕೆಟ್), ಜಸ್‌ಪ್ರೀತ್ ಬೂಮ್ರಾ (11) ಮತ್ತು ದೀಪಕ್ ಚಾಹರ್ (9) ಅವರು ಎದುರಾಳಿ ಬ್ಯಾಟರ್‌ಗಳಿಗೆ ಕಠಿಣ ಸವಾಲೊಡ್ಡುತ್ತಿದ್ದಾರೆ. ಎದುರಾಳಿ ತಂಡಗಳು ದ್ವಿಶತಕದ ಗಡಿ ಮುಟ್ಟದಂತೆ ನಿಯಂತ್ರಿಸಿದ್ದಾರೆ.
ಗುಜರಾತ್ ತಂಡವೂ ಮುಂಬೈನಷ್ಟೇ ಬಲಾಢ್ಯವಾಗಿದೆ. ಸ್ಥಿರ ಪ್ರದರ್ಶನ ನೀಡುತ್ತಿರುವ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ (504 ರನ್), ಜೋಸ್ ಬಟ್ಲರ್ ಮತ್ತು ನಾಯಕ ಗಿಲ್ (465) ಉತ್ತಮ ಲಯದಲ್ಲಿದ್ದಾರೆ. ಅವರು ಮುಂಬೈ ಬೌಲರ್‌ಗಳಿಗೆ ತಿರುಗೇಟು ನೀಡುವ ಸಮರ್ಥರೂ ಹೌದು. ಟೈಟನ್ಸ್ ತಂಡದ ವೇಗಿ, ಕನ್ನಡಿಗ ಪ್ರಸಿದ್ಧ ಕೃಷ್ಣ (19 ವಿಕೆಟ್), ಮೊಹಮ್ಮದ್ ಸಿರಾಜ್ (14) ಮತ್ತು ಆರ್. ಸಾಯಿಕಿಶೋರ್ (12) ಅವರು ಉತ್ತಮ ಲಯದಲ್ಲಿದ್ದಾರೆ.
ಹೀಗಾಗಿ ಉಭಯ ತಂಡಗಳ ನಡುವಣ ಹಣಾಹಣಿಯು ರೋಚಕ ರಸದೌತಣ ನೀಡುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.
ಪಂದ್ಯ ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.