ADVERTISEMENT

IPL Auction 2025: ಐಪಿಎಲ್ ಬಿಡ್ ಕಾಮೆಂಟ್ರಿಗೆ ಪಾಂಟಿಂಗ್, ಲ್ಯಾಂಗರ್

ಪಿಟಿಐ
Published 14 ನವೆಂಬರ್ 2024, 0:20 IST
Last Updated 14 ನವೆಂಬರ್ 2024, 0:20 IST
ರಿಕಿ ಪಾಂಟಿಂಗ್
ರಿಕಿ ಪಾಂಟಿಂಗ್   

ಮೆಲ್ಬರ್ನ್: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಮತ್ತು ಜಸ್ಟಿನ್ ಲ್ಯಾಂಗರ್  ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಆಟಗಾರರ ಬಿಡ್‌ನಲ್ಲಿ ಕಾಮೆಂಟ್ರಿ ಮಾಡಲಿದ್ದಾರೆ. ಅದಕ್ಕಾಗಿ ಅವರು ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಸರಣಿಯ ಮೊದಲ ಪಂದ್ಯದ ವೀಕ್ಷಕ ವಿವರಣೆಗೆ ಅಲಭ್ಯರಾಗಿದ್ದಾರೆ. 

ಸೌದಿ ಅರೇಬಿಯಾದ ಜೆದಾದಲ್ಲಿ ಇದೇ 24 ಮತ್ತು 25ರಂದು ಮೆಗಾ ಹರಾಜು ನಡೆಯಲಿದೆ. ಇದೇ 22ರಿಂದ ಪರ್ತ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮೊದಲ ಟೆಸ್ಟ್ ಆರಂಭವಾಗಲಿದೆ. 

ಆಸ್ಟ್ರೇಲಿಯಾ ಟೆಸ್ಟ್ ಪಂದ್ಯದ ಪ್ರಸಾರ ಮಾಡಲಿರುವ ಚಾನೆಲ್ ಸೆವೆನ್‌ ವಾಹಿನಿಯಲ್ಲಿ  ರಿಕಿ ಪಾಂಟಿಂಗ್ ಮತ್ತು ಲ್ಯಾಂಗರ್ ಅವರ ಕಾಮೆಂಟ್ರಿ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳದಿರುವ ಸಾಧ್ಯತೆ ಇದೆ ಎಂದು ‘ದ ಏಜ್’ ಪತ್ರಿಕೆ ವರದಿ ಮಾಡಿದೆ. 

ಗಂಭೀರ್‌ಗೆ ರಿಕಿ ತಿರುಗೇಟು:

‘ವಿರಾಟ್ ಕೊಹ್ಲಿ ಕುರಿತ ನನ್ನ ಹೇಳಿಕೆಗೆ ಪ್ರತಿಕ್ರಿಯೆ ನೋಡಿ ಅಚ್ಚರಿಗೊಂಡೆ. ಆದರೆ ಅದನ್ನು ನೀಡಿದ್ದು ಗೌತಮ್ ಗಂಭೀರ್ ಎಂಬುದನ್ನು ನೋಡಿ ಅಚ್ಚರಿಯಾಗಲಿಲ್ಲ. ಅವರದ್ದು ವಿಚಿತ್ರ ಮನೋಭಾವ. ನಮ್ಮಿಬ್ಬರ ನಡುವಿನ ‘ಬಾಂಧವ್ಯ’ಗೆ ಇತಿಹಾಸವಿದೆ. ಡೆಲ್ಲಿ ಕ್ಯಾಪಿಟಲ್ಸ್‌ ನಲ್ಲಿ ಅವರಿಗೆ ನಾನು ಕೋಚ್ ಆಗಿದ್ದೆ’ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. 

'ಕೊಹ್ಲಿ ಅವರ ಬಗ್ಗೆ ನಾನು ಹೇಳಿಕೆ ನೀಡಿದ್ದು ಅವರ ಫಾರ್ಮ್‌ ಕುರಿತ ಕಾಳಜಿಯಿಂದಾಗಿ. ಕೊಹ್ಲಿಯನ್ನು ಟೀಕಿಸುವ ಯಾವುದೇ ಉದ್ಧೇಶ ನನಗಿರಲಿಲ್ಲ’ ಎಂದೂ ಪಾಂಟಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.