ADVERTISEMENT

IPL-2020 | ಚೆನ್ನೈಗೆ ಮತ್ತೆ ಸೋಲು; ಅಗ್ರಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್

ಪೃಥ್ವಿ ಅರ್ಧಶತಕ: ಶ್ರೇಯಸ್ ಅಯ್ಯರ್‌ ಬಳಗದ ಶಿಸ್ತಿನ ದಾಳಿಗೆ ಪರದಾಡಿದ ಧೋನಿ ‍ಪಡೆ

ಪಿಟಿಐ
Published 25 ಸೆಪ್ಟೆಂಬರ್ 2020, 20:09 IST
Last Updated 25 ಸೆಪ್ಟೆಂಬರ್ 2020, 20:09 IST
ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪೃಥ್ವಿ ಶಾ ಬ್ಯಾಟಿಂಗ್ ವೈಖರಿ  –ಪಿಟಿಐ
ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪೃಥ್ವಿ ಶಾ ಬ್ಯಾಟಿಂಗ್ ವೈಖರಿ –ಪಿಟಿಐ   
""
""

ದುಬೈ: ಮಹೇಂದ್ರ ಸಿಂಗ್ ಧೋನಿ ಅವರ ತಂತ್ರಗಳು ಮತ್ತೊಮ್ಮೆ ವಿಫಲಗೊಂಡವು. ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ಮುಂದೆ ಹೋರಾಡಿ ಸೋತ ಚೆನ್ನೈ ಸೂಪರ್ ಕಿಂಗ್ಸ್ ತಂಡಶುಕ್ರವಾರ ಮೂರನೇ ಪಂದ್ಯದಲ್ಲೂ ಸೋಲಿಗೆ ಶರಣಾಯಿತು. ಡೆಲ್ಲಿ ಕ್ಯಾಪಿಟಲ್ಸ್ ತಂಡ 44 ರನ್‌ಗಳಿಂದ ಗೆಲುವು ಸಾಧಿಸಿತು.

ರಾಜಸ್ಥಾನ್ ವಿರುದ್ಧ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ಧೋನಿ,ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಡೆಲ್ಲಿ ವಿರುದ್ಧವೂ ಅದೇ ತಂತ್ರ ಅನುಸರಿಸಿದರು. ರಾಜಸ್ಥಾನ್ ಎದುರಿನ ಪಂದ್ಯದಲ್ಲಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಧೋನಿ ಟೀಕೆಗೆ ಗುರಿಯಾಗಿದ್ದರು. ಡೆಲ್ಲಿ ವಿರುದ್ಧ ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದರೂ ಫಲಿತಾಂಶದಲ್ಲಿ ವ್ಯತ್ಯಾಸವೇನೂ ಆಗಲಿಲ್ಲ.

ಪೃಥ್ವಿ ಶಾ (64; 43 ಎಸೆತ, 1 ಸಿಕ್ಸರ್, 9 ಬೌಂಡರಿ) ಮತ್ತು ಶಿಖರ್ ಧವನ್ (35; 27 ಎ, 1 ಸಿ, 3 ಬೌಂ) ಜೋಡಿ ಮೊದಲ ವಿಕೆಟ್‌ಗೆ ಕಲೆ ಹಾಕಿದ 94 ರನ್‌ಗಳ ಭದ್ರ ಬುನಾದಿಯ ಮೇಲೆ ಇನಿಂಗ್ಸ್ ಕಟ್ಟಿದ ರಿಷಭ್ ಪಂತ್ (ಔಟಾಗದೆ 37; 25 ಎ, 5 ಬೌಂ) ಮತ್ತು ಶ್ರೇಯಸ್ ಅಯ್ಯರ್ (26; 22 ಎ) ಡೆಲ್ಲಿ ತಂಡ 3ಕ್ಕೆ 175 ರನ್ ಗಳಿಸಲು ನೆರವಾದರು. ಗುರಿ ಬೆನ್ನತ್ತಿದ ಚೆನ್ನೈ ಪರ ಫಾಫ್ ಡು ಪ್ಲೆಸಿ (43; 35 ಎ, 4 ಬೌಂ) ಏಕಾಂಗಿ ಹೋರಾಟ ನಡೆಸಿದರು. ಆದರೆ ಕಳೆದ ಪಂದ್ಯದಂತೆ ಅವರ ಇನಿಂಗ್ಸ್‌ನಲ್ಲಿ ಸಿಕ್ಸರ್‌ಗಳ ಅಬ್ಬರವಿರಲಿಲ್ಲ.

ADVERTISEMENT

ಶಿಸ್ತಿನ ಬೌಲಿಂಗ್ ನಡೆಸಿದ ಡೆಲ್ಲಿ ಆರಂಭದಲ್ಲೇ ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳ ಮೇಲೆ ಒತ್ತಡ ಹೇರಿತು. ವಿಕೆಟ್‌ಗಳು ಉರುಳುತ್ತಿದ್ದಂತೆ ಜಯಕ್ಕೆ ಬೇಕಾದ ಮೊತ್ತ ಬೆಳೆಯುತ್ತ ಸಾಗಿತು. 18ನೇ ಓವರ್‌ನಲ್ಲಿ ಫಾಫ್ ಡು ಪ್ಲೆಸಿ ಔಟಾಗುತ್ತಿದ್ದಂತೆ ತಂಡ ಭರವಸೆಯನ್ನೇ ಕೈಚೆಲ್ಲಿತು.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡದ ಆರಂಭಿಕ ಜೋಡಿ ಚೆನ್ನೈ ಬೌಲರ್‌ಗಳನ್ನು ನಿರಾತಂಕವಾಗಿ ಎದುರಿಸಿದರು.11ನೇ ಓವರ್‌ನಲ್ಲಿ ಸ್ಪಿನ್ನರ್ ಪೀಯೂಷ್ ಚಾವ್ಲಾ ಮೇಲುಗೈ ಸಾಧಿಸಿದರು. ಅವರು ಹೆಣೆದ ಎಲ್‌ಬಿಡಬ್ಲ್ಯು ಬಲೆಯಲ್ಲಿ ಶಿಖರ್ ಧವನ್ ಬಿದ್ದರು. ಪೃಥ್ವಿ ಶಾ ವಿಕೆಟ್ ಕೂಡ ಪೀಯೂಷ್‌ ಕಬಳಿಸಿದರು.ಆಗ ಜೊತೆಗೂಡಿದ ರಿಷಭ್ ಮತ್ತು ಶ್ರೇಯಸ್ ಅಯ್ಯರ್ ಮೂರನೇ ವಿಕೆಟ್‌ಗೆ 58 ರನ್‌ ಸೇರಿಸಿದರು. ಮೊದಲ ಪಂದ್ಯದಲ್ಲಿ ಡೆಲ್ಲಿ ಸೂಪರ್ ಓವರ್‌ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಜಯಿಸಿತ್ತು. ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ತಂಡ ಇದೀಗ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.