ADVERTISEMENT

ಪ್ರಿಯಾಂಕ್‌, ಅಭಿಮನ್ಯು 350 ರನ್ ಜೊತೆಯಾಟ: ಭಾರತ ’ಎ’ ತಂಡದ ಶುಭಾರಂಭ

ಶ್ರೀಲಂಕಾ ‘ಎ’ ವಿರುದ್ಧದ ಪಂದ್ಯ

ಎಂ.ಮಹೇಶ
Published 25 ಮೇ 2019, 19:45 IST
Last Updated 25 ಮೇ 2019, 19:45 IST
ಅಭಿಮನ್ಯು ಈಶ್ವರನ್ ಶತಕದ ಸಂಭ್ರಮಪ್ರಜಾವಾಣಿ ಚಿತ್ರ: ಚೇತನ್ ಕುಲಕರ್ಣಿ
ಅಭಿಮನ್ಯು ಈಶ್ವರನ್ ಶತಕದ ಸಂಭ್ರಮಪ್ರಜಾವಾಣಿ ಚಿತ್ರ: ಚೇತನ್ ಕುಲಕರ್ಣಿ   

ಬೆಳಗಾವಿ: ಇಲ್ಲಿ ಬಿಸಿಲಿನ ಝಳ ಏರುತ್ತಿದ್ದಂತೆಯೇ ನಾಯಕ ಪ್ರಿಯಾಂಕ್ ಪಾಂಚಾಲ್‌ (160; 261 ಎಸೆತ, 9ಬೌಂಡರಿ, 2ಸಿಕ್ಸರ್) ಮತ್ತು ಅಭಿಮನ್ಯು ಈಶ್ವರನ್ (ಬ್ಯಾಟಿಂಗ್ 189; 250ಎಸೆತ, 17ಬೌಂಡರಿ, 3ಸಿಕ್ಸರ್‌) ಭಾರತ ‘ಎ’ ತಂಡದ ರನ್‌ ಗಳಿಕೆಯನ್ನು ಹೆಚ್ಚಿಸುತ್ತಲೇ ಹೋದರು. ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಇವರು ಬರೋಬ್ಬರಿ 350 ರನ್‌ಗಳ ಜೊತೆಯಾಟವಾಡಿ ಎದುರಾಳಿ ಶ್ರೀಲಂಕಾ ‘ಎ’ ತಂಡದ ಆಟಗಾರರ ಬೆವರಿಳಿಸಿದರು.

ಆಟೊ ನಗರದ ಕೆಎಸ್‌ಸಿಎ ಮೈದಾನದಲ್ಲಿ ಶನಿವಾರದಿಂದ ಆರಂಭವಾದ ಚೊಚ್ಚಲ ಅಂತರರಾಷ್ಟ್ರೀಯ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ‘ಎ’ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 87 ಓವರ್‌ಗಳಲ್ಲಿ ಕೇವಲ 1 ವಿಕೆಟ್ ನಷ್ಟಕ್ಕೆ 376 ರನ್‌ ಗಳಿಸಿ ಭಾರಿ ಮೊತ್ತದತ್ತ ದಾಪುಗಾಲು ಹಾಕಿ, ದಿನದ ಶ್ರೇಯವನ್ನು ತನ್ನದಾಗಿಸಿಕೊಂಡಿತು.

ಪ್ರಿಯಾಂಕ್–ಅಭಿಮನ್ಯು ಸೊಗಸಾದ ಬ್ಯಾಟಿಂಗ್‌ ವೈಭವ ಪ್ರದರ್ಶಿಸಿ, ಎದುರಾಳಿ ತಂಡದ ಬೌಲರ್‌ಗಳನ್ನು ದಂಡಿಸಿದರು. ಆರಂಭದಿಂದಲೂ ಬೌಂಡರಿಯತ್ತ ಬ್ಯಾಟ್ ಬೀಸುತ್ತಿದ್ದ ಅಭಿಮನ್ಯು 63 ಎಸೆತದಲ್ಲೇ ಅರ್ಧಶತಕ ಬಾರಿಸಿದರು. ಇವರೊಂದಿಗೆ ಪಾಂಚಾಲ್‌ ಕೂಡ ರನ್‌ ಸೌಧ ಕಟ್ಟುತ್ತಿದ್ದರು. ಚಹಾ ವಿರಾಮದ ವೇಳೆಗೆ, ಇಬ್ಬರೂ ಆಕರ್ಷಕ ಶತಕಗಳನ್ನು ಸಿಡಿಸಿ, ನೆರೆದಿದ್ದ ಕ್ರಿಕೆಟ್‌ ಪ್ರೇಮಿಗಳಿಗೆ ರಸದೌತಣ ಉಣಬಡಿಸಿದರು. ಒಬ್ಬರ ನಂತರ ಒಬ್ಬರು ಶತಕ ಬಾರಿಸಿದ್ದಕ್ಕೆ ವಿದ್ಯುನ್ಮಾನ ಸ್ಕೋರ್‌ ಬೋರ್ಡ್‌ನಲ್ಲಿ ಶುಭಾಶಯ ಪ್ರಕಟವಾಗುತ್ತಿದ್ದುದ್ದಕ್ಕೆ ಪ್ರೇಕ್ಷಕರು ಚಪ್ಪಾಳೆಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿ ಹುರಿದುಂಬಿಸಿದರು.

ADVERTISEMENT

ಈ ಜೋಡಿಗೆ ಕಡಿವಾಣ ಹಾಕಲು ಶ್ರೀಲಂಕಾ ತಂಡದವರು ಪರದಾಡಬೇಕಾಯಿತು. ಲಹಿರು ಕುಮಾರ, ಲಕ್ಷಣ ಸಂದಕನ್ ಹಾಗೂ ಅಖಿಲ್ ಧನಂಜಯ ಸೇರಿದಂತೆ ಅನುಭವಿ ಬೌಲರ್‌ಗಳ ತಂತ್ರ ಫಲಿಸಲಿಲ್ಲ. ಸಿಂಹಳೀಯರ ತಂಡದ ನಾಯಕ ಆಶನ್ ಪ್ರಿಯಂಜನ್ ಬರೋಬ್ಬರಿ 8 ಬೌಲರ್‌ಗಳನ್ನು ಪ್ರಯೋಗಿಸಿದ್ದೂ ಪ‍್ರಯೋಜನಕ್ಕೆ ಬರಲಿಲ್ಲ. ಇವರಿಬ್ಬರ ಜೊತೆಯಾಟ 83 ಓವರ್‌ಗಳವರೆಗೂ ನಡೆಯಿತು.

2 ಸಿಕ್ಸರ್‌, 9 ಬೌಂಡರಿಗಳನ್ನು ಬಾರಿಸಿದ್ದ ಪ್ರಿಯಾಂಕ್ ದ್ವಿಶತಕ ಗಳಿಸಲು ವಿಶ್ವ ಫರ್ನಾಂಡೋ ಅಡ್ಡಿಯಾದರು. 83.1ನೇ ಓವರ್‌ನಲ್ಲಿ ಅತಿಥೇಯ ತಂಡದ ಮೊದಲನೇ ವಿಕೆಟ್ ಪತನಕ್ಕೆ ಕಾರಣವಾದರು. ಇನ್ನೊಂದೆಡೆ, 189 ರನ್‌ ಗಳಿಸಿರುವ ಅಭಿಮನ್ಯು ದ್ವಿಶತಕ ಸಾಧನೆಯ ನಿರೀಕ್ಷೆ ಮೂಡಿಸಿದ್ದಾರೆ. ಇನ್ನೂ 9 ವಿಕೆಟ್‌ಗಳಿರುವುದರಿಂದ ಭಾರತ ತಂಡ ಭಾರಿ ಮೊತ್ತ ಗಳಿಸುವ ಸಾಧ್ಯತೆ ಇದೆ.

ತಂಡದ ಕೋಚ್‌, ಹಿರಿಯ ಕ್ರಿಕೆಟಿಗ ರಾಹುಲ್‌ ದ್ರಾವಿಡ್ ಕಣ್ತುಂಬಿಕೊಳ್ಳುವ ಆಸೆಯಿಂದ ಬಂದಿದ್ದ ಅಭಿಮಾನಿಗಳು ನಿರಾಸೆ ಅನುಭವಿಸಬೇಕಾಯಿತು. 2 ದಿನ ಇಲ್ಲಿದ್ದು ತಂಡಕ್ಕೆ ತರಬೇತಿ ನೀಡಿದ್ದ ಅವರು, ಶುಕ್ರವಾರ ಸಂಜೆಯೇ ತೆರಳಿದ್ದಾರೆ. ಏಕದಿನ ಪಂದ್ಯ ಆರಂಭಕ್ಕೆ ಮುನ್ನ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆ ಇದೆ.

ಸಂಕ್ಷಿಪ್ತ ಸ್ಕೋರು:

ಭಾರತ ‘ಎ’ ಮೊದಲ ಇನ್ನಿಂಗ್ಸ್‌: 87 ಓವರ್‌ಗಳಲ್ಲಿ 1ಕ್ಕೆ 376 (ಪ್ರಿಯಾಂಕ್ ಪಾಂಚಾಲ್ 160, ಎ.ಆರ್. ಈಶ್ವರನ್ ಬ್ಯಾಟಿಂಗ್ 189, ಜಯಂತ್ ಯಾದವ್ ಬ್ಯಾಟಿಂಗ್ 6); ವಿಶ್ವ ಫರ್ನಾಂಡೊ 1ಕ್ಕೆ 64.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.