ಜೈಪುರ: ಪ್ಲೇ ಆಫ್ ಪ್ರವೇಶ ಖಚಿತಪಡಿಸಿಕೊಳ್ಳುವ ಛಲದಲ್ಲಿರುವ ಪಂಜಾಬ್ ಕಿಂಗ್ಸ್ ತಂಡವು ಭಾನುವಾರ ರಾಜಸ್ಥಾನ ರಾಯಲ್ಸ್ ಎದುರು ಕಣಕ್ಕಿಳಿಯಲಿದೆ.
ಮೇ 8ರಂದು ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಪಂದ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ಭಾರತ ಮತ್ತು ಪಾಕಿಸ್ತಾನ ಸೇನಾ ಸಂಘರ್ಷದ ಕಾರಣ ‘ಬ್ಲ್ಯಾಕ್‌ಔಟ್’ ಘೋಷಿಸಿದ್ದರಿಂದ ಪಂದ್ಯ ಕೂಡ ನಿಂತಿತ್ತು.
ಒಂದು ವಾರದ ಬಿಡುವಿನ ನಂತರ ಐಪಿಎಲ್ ಶುರುವಾಗಿದೆ. ಆದರೆ ಪಂಜಾಬ್ ತಂಡವು ತನ್ನ ತವರು ತಾಣಗಳಾದ ಚಂಡೀಗಡ ಮತ್ತು ಧರ್ಮಶಾಲಾದಲ್ಲಿ ಇನ್ನುಳಿದಿರುವ ಪಂದ್ಯಗಳನ್ನು ಆಡುತ್ತಿಲ್ಲ. ಜೈಪುರದಲ್ಲಿಯೇ ಉಳಿದೆಲ್ಲ ಪಂದ್ಯಗಳನ್ನು ಆಡುತ್ತಿದೆ.
ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡವು ಈಗಾಗಲೇ ಪ್ಲೇ ಆಫ್ ಹಾದಿಯಿಂದ ಹೊರಬಿದ್ದಾಗಿದೆ. ತಂಡದಲ್ಲಿರುವ 14 ವರ್ಷದ ಬಾಲಪ್ರತಿಭೆ ವೈಭವ್ ಸೂರ್ಯವಂಶಿ ಅವರ ಆಟದ ಮೇಲೆ ಎಲ್ಲರ ನೋಡ ನೆಟ್ಟಿದೆ. ವೈಭವ್ ಟೂರ್ನಿಯಲ್ಲಿ ಈಗಾಗಲೇ ಒಂದು ಶತಕ ಹೊಡೆದು ಗಮನ ಸೆಳೆದಿದ್ದಾರೆ.
ಆದರೆ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ತಂಡವು 11 ಪಂದ್ಯಗಳಿಂದ 15 ಅಂಕ ಗಳಿಸಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಬಿಡುವಿನ ಸಂದರ್ಭದಲ್ಲಿ ತಮ್ಮ ತವರಿಗೆ ತೆರಳಿದ್ದ ಕೆಲವು ವಿದೇಶಿ ಆಟಗಾರರು ಮರಳದ ಕಾರಣ ಪಂಜಾಬ್ ತಂಡವು ತಂಡದ ಸಂಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ. ಪ್ರಮುಖವಾಗಿ ಆಸ್ಟ್ರೇಲಿಯಾದ ಮಾರ್ಕಸ್ ಸ್ಟೋಯಿನಿಸ್ ಮತ್ತು ಜೋಶ್ ಇಂಗ್ಲಿಸ್ ಅವರು ರಾಜಸ್ಥಾನ ಎದುರಿನ ಪಂದ್ಯಕ್ಕೆ ಲಭ್ಯರಿಲ್ಲ. ನಂತರದ ಪಂದ್ಯದಲ್ಲಿ ಅವರು ಆಡುವರು. ಇದರಿಂದಾಗಿ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆ ಅಗತ್ಯವಾಗಿದೆ.
ತಂಡದ ಬ್ಯಾಟಿಂಗ್ ವಿಭಾಗವು ಉತ್ತಮವಾಗಿದೆ. ನಾಯಕ ಶ್ರೇಯಸ್, ಪ್ರಿಯಾಂಶ್ ಆರ್ಯ, ಪ್ರಭಸಿಮ್ರನ್ ಸಿಂಗ್ ಮತ್ತು ನೇಹಲ್ ವಧೇರಾ ಅವರು ಉತ್ತಮ ಲಯದಲ್ಲಿದ್ದಾರೆ. ರಾಜಸ್ಥಾನ ವೇಗಿ ಜೋಫ್ರಾ ಆರ್ಚರ್ ಅವರನ್ನು ಎದುರಿಸುವ ಸವಾಲು ಬ್ಯಾಟರ್‌ಗಳ ಮುಂದಿದೆ.
ವೇಗಿ, ದಕ್ಷಿಣ ಆಫ್ರಿಕಾದ ಮಾರ್ಕೊ ಯಾನ್ಸೆನ್ ಅವರು ಲಭ್ಯರಿಲ್ಲ. 11 ವಿಕೆಟ್ ಪಡೆದಿರುವ ಮಾರ್ಕೊ ಪರಿಣಾಮಕಾರಿ ಬೌಲರ್ ಎನಿಸಿದ್ದಾರೆ. ನ್ಯೂಜಿಲೆಂಡ್ ವೇಗಿ ಕೈಲ್ ಜೆಮಿಸನ್, ಎಡಗೈವೇಗಿ ಅರ್ಷದೀಪ್ ಸಿಂಗ್ ಹಾಗೂ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ (14 ವಿಕೆಟ್) ಅವರು ತಂಡಕ್ಕೆ ಜಯಕ್ಕೆ ಕಾಣಿಕೆ ನೀಡುವ ಸಮರ್ಥರಾಗಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.