ಚಂಡೀಗಡ: ಭಾರತ ತಂಡದ ಮಾಜಿ ಆಟಗಾರ ಸಾಯಿರಾಜ್ ಬಹುತುಳೆ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಆಡುವ ಪಂಜಾಬ್ ಕಿಂಗ್ಸ್ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.
ಸಾಯಿರಾಜ್ ಅವರು ಭಾರತದ ಪರ ಎರಡು ಟೆಸ್ಟ್ ಮತ್ತು ಎಂಟು ಏಕದಿನ ಪಂದ್ಯಗಳನ್ನು ಆಡಿದ್ದಾರೆ. 52 ವರ್ಷದ ಅವರು ಕರ್ನಾಟಕದ ಸುನಿಲ್ ಜೋಶಿ ಅವರಿಂದ ತೆರವಾದ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಜೋಶಿ ಅವರು 2023ರಿಂದ ಕಿಂಗ್ಸ್ ತಂಡದಲ್ಲಿ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದರು.
ಸ್ಪಿನ್ ಆಲ್‌ರೌಂಡರ್ ಆಗಿರುವ ಬಹುತುಳೆ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಕೇರಳ, ಗುಜರಾತ್, ವಿದರ್ಭ ಮತ್ತು ಬಂಗಾಲದಂತಹ ದೇಶೀಯ ತಂಡಗಳಿಗೆ ಮಾರ್ಗದರ್ಶನ ನೀಡಿದ್ದ ಮುಂಬೈನ ಬಹುತುಳೆ, 2018ರಲ್ಲಿ ಐಪಿಎಲ್‌ನ ಫ್ರಾಂಚೈಸಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು.
‘ಸುನಿಲ್ ಜೋಶಿ ಅವರು ಪಂಜಾಬ್ ಕಿಂಗ್ಸ್ ತಂಡಕ್ಕೆ ನೀಡಿದ ಕೊಡುಗೆಗಾಗಿ ಕೃತಜ್ಞತೆಯನ್ನು ಅರ್ಪಿಸುತ್ತೇವೆ. ಸಾಯಿರಾಜ್ ಬಹುತುಳೆ ಅವರನ್ನು ತಂಡಕ್ಕೆ ಸ್ವಾಗತಿಸಲು ಸಂತೋಷ ಪಡುತ್ತೇವೆ’ ಎಂದು ಕಿಂಗ್ಸ್‌ನ ಸಿಇಒ ಸತೀಶ್ ಮೆನನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.