ADVERTISEMENT

ಆರ್‌.ಅಶ್ವಿನ್‌, ವಾಷಿಂಗ್ಟನ್ ಸುಂದರ್‌ಗೆ ಆರು ದಿನಗಳ ಕ್ವಾರಂಟೈನ್‌

ಪಿಟಿಐ
Published 22 ಜನವರಿ 2021, 12:43 IST
Last Updated 22 ಜನವರಿ 2021, 12:43 IST
ರವಿಚಂದ್ರನ್ ಅಶ್ವಿನ್‌–ಎಎಫ್‌ಪಿ ಚಿತ್ರ
ರವಿಚಂದ್ರನ್ ಅಶ್ವಿನ್‌–ಎಎಫ್‌ಪಿ ಚಿತ್ರ   

ಚೆನ್ನೈ: ಬಾರ್ಡರ್‌–ಗಾವಸ್ಕರ್ ಟೆಸ್ಟ್ ಕ್ರಿಕೆಟ್ ಸರಣಿ ವಿಜೇತ ಭಾರತ ತಂಡದ ಸದಸ್ಯರಾಗಿರುವ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ಆಲ್‌ರೌಂಡರ್‌ ವಾಷಿಂಗ್ಟನ್ ಸುಂದರ್ ಶುಕ್ರವಾರ ತವರು ರಾಜ್ಯ ತಮಿಳುನಾಡಿಗೆ ಬಂದಿಳಿದರು. ಅಲ್ಲಿಯ ರಾಜ್ಯ ಸರ್ಕಾರದ ನಿಯಮಾವಳಿಗಳ ಅನ್ವಯ ಇಬ್ಬರೂ ಆಟಗಾರರು ಆರು ದಿನಗಳ ಕ್ವಾರಂಟೈನ್‌ ಅವಧಿ ಪೂರ್ಣಗೊಳಿಸಬೇಕಿದೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅಶ್ವಿನ್‌,12 ವಿಕೆಟ್ ಗಳಿಸಿದ್ದರು. ಬ್ರಿಸ್ಬೇನ್‌ನಲ್ಲಿ ನಡೆದಿದ್ದ ನಿರ್ಣಾಯಕ ಕೊನೆಯ ಪಂದ್ಯದಲ್ಲಿ ಗಾಯದ ಹಿನ್ನೆಲೆಯಲ್ಲಿ ಆಡಿರಲಿಲ್ಲ. ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಬೆನ್ನು ನೋವಿನ ನಡುವೆಯೂ ಹನುಮ ವಿಹಾರಿ ಜೊತೆ 62 ರನ್‌ಗಳ ಜೊತೆಯಾಟವಾಡಿದ್ದರು. ಆ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಅಶ್ವಿನ್ ಪಾತ್ರವೂ ಮುಖ್ಯವಾಗಿತ್ತು.

ಬ್ರಿಸ್ಬೇನ್ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ್ದ ಸುಂದರ್‌, ಆಸ್ಟ್ರೇಲಿಯಾದ ಉರಿವೇಗದ ಬೌಲಿಂಗ್‌ ದಾಳಿಯನ್ನು ಎದುರಿಸಿ 62 ರನ್‌ ಗಳಿಸಿದ್ದರು. ಶಾರ್ದೂಲ್ ಠಾಕೂರ್ ಜೊತೆಗೂಡಿ ಮೊದಲ ಇನಿಂಗ್ಸ್‌ನಲ್ಲಿ 123 ರನ್‌ಗಳ ಕಲೆಹಾಕಿದ್ದರು. ಇದರಿಂದ ಭಾರತ ಎದುರಾಳಿಗೆ ತಿರುಗೇಟು ನೀಡಲು ಸಾಧ್ಯವಾಗಿತ್ತು. ಪಂದ್ಯದಲ್ಲಿಸುಂದರ್‌ ನಾಲ್ಕು ವಿಕೆಟ್‌ ಕೂಡ ಗಳಿಸಿದ್ದರು. ಭಾರತ ಮೂರು ವಿಕೆಟ್‌ಗಳಿಂದ ಪಂದ್ಯ ಗೆದ್ದುಕೊಂಡಿದ್ದಲ್ಲದೆ ಸರಣಿಯನ್ನು ತನ್ನದಾಗಿಸಿಕೊಂಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.