ADVERTISEMENT

ರಣಜಿ ಕ್ರಿಕೆಟ್‌: ಜಯದೇವ್ ದಾಳಿಗೆ ಶ್ರೇಯಸ್-ಪಾಂಡೆ ತಿರುಗೇಟು

ಗಿರೀಶದೊಡ್ಡಮನಿ
Published 24 ಜನವರಿ 2019, 12:46 IST
Last Updated 24 ಜನವರಿ 2019, 12:46 IST
ಮನೀಷ್ ಪಾಂಡೆ, ಶ್ರೇಯಸ್ ಗೋಪಾಲ್(ಸಂಗ್ರಹ ಚಿತ್ರ)
ಮನೀಷ್ ಪಾಂಡೆ, ಶ್ರೇಯಸ್ ಗೋಪಾಲ್(ಸಂಗ್ರಹ ಚಿತ್ರ)   

ಬೆಂಗಳೂರು: ಎಡಗೈ ವೇಗಿ ಜಯದೇವ ಉನದ್ಕತ್ (46ಕ್ಕೆ4) ಸ್ವಿಂಗ್ ದಾಳಿಯಲ್ಲಿ ಕುಸಿದಿದ್ದ ಕರ್ನಾಟಕ ತಂಡಕ್ಕೆಎರಡು ಜೊತೆಯಾಟಗಳು ಚೇತರಿಕೆ ನೀಡಿದವು.

ಅದರ ಫಲವಾಗಿ ಗುರುವಾರ ಇಲ್ಲಿ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದ ಮೊದಲ ದಿನ ಗೌರವಾರ್ಹ ಮೊತ್ತ ಕಲೆಹಾಕುವಲ್ಲಿ ಸಫಲವಾಯಿತು. ಮನೀಷ್ ಪಾಂಡೆ, ಶ್ರೇಯಸ್ ಗೋಪಾಲ್ ಮತ್ತು ಶ್ರೀನಿವಾಸ್ ಶರತ್ ಅರ್ಧಶತಕಗಳ ನೆರವಿನಿಂದ ತಂಡವು ದಿನದಾಟದ ಕೊನೆಗೆ 90 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 264 ರನ್‌ ಗಳಿಸಿದೆ. ಶರತ್ (ಬ್ಯಾಟಿಂಗ್ 74; 177ಎಸೆತ, 11ಬೌಂಡರಿ) ಮತ್ತು ಖಾತೆ ತೆರೆಯದ ರೋನಿತ್ ಮೋರೆ ಕ್ರೀಸ್‌ನಲ್ಲಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕ ತಂಡಕ್ಕೆ ಜಯದೇವ್ ಮೊದಲ ಓವರ್‌ನಲ್ಲಿಆಘಾತ ನೀಡಿದರು. ತಮ್ಮ ಮೊದಲ ಸ್ಪೆಲ್‌ನಲ್ಲಿ (7–3–19–3) ಆರ್. ಸಮರ್ಥ್, ಕೆ.ವಿ. ಸಿದ್ಧಾರ್ಥ್ ಮತ್ತು ಮಯಂಕ್ ಅಗರವಾಲ್ ಅವರ ವಿಕೆಟ್‌ ಕಬಳಿಸಿದರು. ಇದರಿಂದಾಗಿ 19 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿತು.

ADVERTISEMENT

ಕ್ವಾರ್ಟರ್‌ಫೈನಲ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದ್ದ ಕರುಣ್ ನಾಯರ್ ಮತ್ತು ನಾಯಕ ಮನೀಷ್ ಪಾಂಡೆ ಇನಿಂಗ್ಸ್‌ ಕಟ್ಟುವ ಪ್ರಯತ್ನ ಮಾಡಿದರು. ಮನೀಷ್ ಪಾಂಡೆ ಎಂದಿನಂತ ತಮ್ಮ ಆಕ್ರಮಣಕಾರಿ ಆಟವನ್ನೇ ಆಡಿದರು. ಆದರೆ ನಾಯರ್ ನಿಧಾನವಾಗಿ ಆಡುತ್ತಿದ್ದರು. 15ನೇ ಓವರ್‌ನಲ್ಲಿ ಚೇತನ್ ಸಕಾರಿಯಾ ಹಾಕಿದ ಓವರ್‌ನಲ್ಲಿ ವಿಕೆಟ್‌ಕೀಪರ್‌ಗೆ ಕ್ಯಾಚಿತ್ತ ಕರುಣ್ ನಿರ್ಗಮಿಸಿದರು.

ಮನೀಷ್ ಜೊತೆಗೂಡಿದ ಶ್ರೇಯಸ್ ಗೋಪಾಲ್ ವಿಕೆಟ್ ಪತನ ತಡೆದರು. ಇದರಿಂದಾಗಿ ಊಟದ ವಿರಾಮದ ವೇಳೆಗೆ ಆತಿಥೇಯ ಬಳಗವು 36 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 128 ರನ್‌ ಗಳಿಸಿತು. ವಿರಾಮದ ನಂತರ ಮತ್ತೆ ಬೌಲಿಂಗ್‌ಗೆ ಇಳಿದ ಜಯದೇವ್ ಜೊತೆಯಾಟವನ್ನು ಮುರಿದರು. ಅವರ ಇನ್‌ಸ್ವಿಂಗರ್‌ಗೆ ಮನೀಷ್ ಪಾಂಡೆ (63) ಕ್ಲೀನ್‌ಬೌಲ್ಡ್ ಆದರು. ಶ್ರೇಯಸ್ ಗೋಪಾಲ್ ಜೊತೆಗೂಡಿದ ಶ್ರೀನಿವಾಸ್ ಶರತ್ ಭರವಸೆಯ ಇನಿಂಗ್ಸ್ ಆಡಿದರು. ಅವರು ಬಿ.ಆರ್. ಶರತ್ ಬದಲಿಗೆ ಸ್ಥಾನ ಪಡೆದುಕೊಂಡಿದ್ದಾರೆ.

ಹೋದ ಪಂದ್ಯದಲ್ಲಿ ಬಿ.ಆರ್. ಶರತ್ ಕೈಗೆ ಗಾಯವಾಗಿತ್ತು. ಈ ಋತುವಿನಲ್ಲಿ ಪದಾರ್ಪಣೆ ಮಾಡಿರುವ ಶರತ್ ಶ್ರೀನಿವಾಸ್‌ಗೆ ಇದು ನಾಲ್ಕನೇ ಪಂದ್ಯ. ಇನ್ನೊಂದು ಬದಿಯಲ್ಲಿದ್ದ ಅನುಭವಿ ಶ್ರೇಯಸ್ ಜೊತೆಗೆ ಸುಂದರ ಇನಿಂಗ್ಸ್ ಕಟ್ಟಿದರು. ಇದರಿಂದಾಗಿ ಚಹಾ ವಿರಾಮಕ್ಕೆ ತಂಡದ ಮೊತ್ತವು 200ರ ಗಡಿ ತಲುಪಿತು.

ಎಡಗೈ ವೇಗಿ ಜಯದೇವ ಉನದ್ಕತ್​

ಆದರೆ ವಿರಾಮದ ನಂತರ ಪಿಚ್‌ನಲ್ಲಿ ತಿರುವು ಪಡೆಯುತ್ತಿದ್ದ ಚೆಂಡು ಕರ್ನಾಟಕದ ದೊಡ್ಡ ಮೊತ್ತದ ಕನಸಿಗೆ ಅಡ್ಡಿಯಾಯಿತು. ಈ ಅವಧಿಯಲ್ಲಿ ಕಮಲೇಶ್ ಮಕ್ವಾನ ಮೂರು ವಿಕೆಟ್ ಗಳಿಸಿ ಮಿಂಚಿದರು. ಶತಕದತ್ತ ಹೆಜ್ಜೆ ಹಾಕಿದ್ದ ಶ್ರೇಯಸ್ (87; 9ಬೌಂಡರಿ, 1ಸಿಕ್ಸರ್) ಅವರನ್ನು ಕ್ಲೀನ್ ಬೌಲ್ಡ್‌ ಮಾಡಿದ ಮಕ್ವಾನ ಕೇಕೆ ಹಾಕಿದರು. ಇದರೊಂದಿಗೆ ಆರನೇ ವಿಕೆಟ್‌ ಜೊತೆಯಾಟ ಮುರಿಯಿತು. ಆದರೆ ಅಮೂಲ್ಯವಾದ 96 ರನ್‌ಗಳು ಸೇರಿದವು.

ನಂತರ ಬಂದ ಕೆ. ಗೌತಮ್ ಅವಸರಿಸಿ ಔಟಾದರು. ಎಂಟರ ಘಟ್ಟದ ಪಂದ್ಯದ ಜಯದ ರೂವಾರಿ ವಿನಯಕುಮಾರ್ ಎಂಟು ರನ್‌ ಗಳಿಸಿದ್ದಾಗ ಧರ್ಮೆಂದ್ರಸಿಂಹ ಜಡೇಜ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಅಭಿಮನ್ಯು ಮಿಥುನ್ ಕೂಡ ಬೇಗ ಮರಳಿದರು.

ಸಂಕ್ಷಿಪ್ತಸ್ಕೋರ್

ಕರ್ನಾಟಕ
ಮನೀಷ್ ಪಾಂಡೆ
62ರನ್‌,ಶ್ರೇಯಸ್ ಗೋಪಾಲ್ 87ರನ್‌,ಶರತ್ ಶ್ರೀನಿವಾಸ್‌ ಬ್ಯಾಟಿಂಗ್ 74ರನ್‌,ರೋನಿತ್ ಮೋರೆ ಬ್ಯಾಟಿಂಗ್ 00

ಬೌಲಿಂಗ್: ಜಯದೇವ್ ಉನದ್ಕತ್ 16–4–46–4, ಚೇತನ್ ಸಕಾರಿಯಾ 14–5–32–1 (ನೋಬಾಲ್ 1), ಪ್ರೇರಕ್ ಮಂಕಡ್ 13–4–31–0, ಧರ್ಮೇಂದ್ರಸಿಂಹ ಜಡೇಜ 27–3–75–1, ಕಮಲೇಶ್ ಮಕ್ವಾನ 20–0–73–3.

ವಿಕೆಟ್ ಪತನ: 1–0 (ಸಮರ್ಥ್; 0.3), 2–14 (ಸಿದ್ಧಾರ್ಥ್; 6.4), 3–19 (ಮಯಂಕ್;10.3), 4–30 (ಕರುಣ್; 14.1), 5– 136 (ಪಾಂಡೆ; 38.2), 6–232 (ಶ್ರೇಯಸ್; 75.1), 7–238 (ಗೌತಮ್; 77.2), 8–251 (ವಿನಯ್; 84.3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.