ADVERTISEMENT

ಹಾಗಾಗಬಾರದಿತ್ತು; ಕ್ಯಾಪ್ ನೆಲಕ್ಕೆ ಎಸೆದ ಘಟನೆ ನೆನಪಿಸಿದ ರಾಹುಲ್ ದ್ರಾವಿಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಅಕ್ಟೋಬರ್ 2021, 13:09 IST
Last Updated 15 ಅಕ್ಟೋಬರ್ 2021, 13:09 IST
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್   

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಎಂದಿಗೂ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ. ಮೈದಾನದ ಒಳಗೂ ಹೊರಗೂ ಶಾಂತಚಿತ್ತರಾಗಿ ವರ್ತಿಸುತ್ತಾರೆ. ಈ ಮೂಲಕ ಯುವ ಕ್ರಿಕೆಟಿಗರಿಗೂ ಮಾದರಿಯಾಗಿದ್ದಾರೆ.

ಆದರೆ ಅತಿ ವಿರಳ ಘಟನೆ ಎಂಬಂತೆ ಐಪಿಎಲ್ 2014ನೇ ಆವೃತ್ತಿಯಲ್ಲಿ ತಮ್ಮ ತಾಳ್ಮೆಯನ್ನು ಕಳೆದುಕೊಂಡ ದ್ರಾವಿಡ್, ಕ್ಯಾಪ್ ನೆಲಕ್ಕೆ ಎಸೆದಿರುವುದು ಅಭಿಮಾನಿಗಳು ಸೇರಿದಂತೆ ಕ್ರಿಕೆಟ್ ಲೋಕದ ಅಚ್ಚರಿಗೆ ಕಾರಣವಾಗಿತ್ತು.

ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆಯಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಸೋಲನುಭವಿಸಿದಾಗ ಡಗೌಟ್‌ನಲ್ಲಿದ್ದ ಮಾರ್ಗದರ್ಶಕ ದ್ರಾವಿಡ್‌ಗೆ ತಮ್ಮ ಭಾವನೆಗಳನ್ನು ತಡೆದುಕೊಳ್ಳಲಾಗಲಿಲ್ಲ. ಕ್ಯಾಪ್ ನೆಲಕ್ಕೆಸೆದು ನೇರವಾಗಿ ಡ್ರೆಸ್ಸಿಂಗ್ ಕೊಠಡಿಯತ್ತ ಹೆಜ್ಜೆ ಹಾಕಿದ್ದರು.

ಕ್ರೆಡ್ ಯೂಟ್ಯೂಬ್ ಚಾನೆಲ್‌ನಲ್ಲಿ ಘಟನೆಯನ್ನು ನೆನಪಿಸಿರುವ ದ್ರಾವಿಡ್, 'ನನ್ನ ಪಾಲಿಗೆ ಆ ಘಟನೆ ಹೆಮ್ಮೆಯ ಕ್ಷಣವಾಗಿರಲಿಲ್ಲ. ಆದರೆ ಯಾವತ್ತೂ ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿದ್ದೆ' ಎಂದು ಹೇಳಿದ್ದಾರೆ.

'ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಯಾವತ್ತೂ ನಿಮ್ಮ ಮೇಲೆ ಹೆಚ್ಚಿನ ಒತ್ತಡವಿರುತ್ತದೆ. ಮೈದಾನದಲ್ಲಿ ಹಾಗೂ ಹೊರಗಡೆಯೂ ನಿಮ್ಮತ್ತ ಹೆಚ್ಚಿನ ಗಮನ ಇರುತ್ತದೆ. ನಾನು ತಾಳ್ಮೆಯಿಂದಿರುವಾಗ ಉತ್ತಮ ಪ್ರದರ್ಶನ ನೀಡಲು ಸಾಧ್ಯ ಎಂಬುದನ್ನು ಮನಗಂಡಿದ್ದೇನೆ' ಎಂದು ಹೇಳಿದ್ದಾರೆ.

'ಆ ಘಟನೆಯಲ್ಲಿ ನಾನು ನಿಯಂತ್ರಣ ಕಳೆದುಕೊಂಡಿದ್ದೆ. ಹಾಗಾಗಬಾರದಿತ್ತು. ಆದರೆ ಕೆಲವೊಮ್ಮೆ ಹಾಗೆ ಸಂಭವಿಸುತ್ತದೆ. ಆ ರೀತಿ ಸಂಭವಿಸಿರುವುದು ಮೊದಲ ಬಾರಿಯೇನಲ್ಲ. ಸಾರ್ವಜನಿಕವಾಗಿ ಮೊದಲ ಬಾರಿ ಹಾಗಾಗಿದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಯಾರೂ ಕಾಣದೆ ಹಲವು ಬಾರಿ ಸಂಭವಿಸಿದೆ' ಎಂದು ನಗುತ್ತಲೇ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.