ADVERTISEMENT

ಶ್ರೇಯಸ್‌ ಗೋಪಾಲ ತಾಳ್ಮೆಯ ಬ್ಯಾಟಿಂಗ್‌: ಕರ್ನಾಟಕಕ್ಕೆ ಇನಿಂಗ್ಸ್‌ ಮುನ್ನಡೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 9:32 IST
Last Updated 19 ಡಿಸೆಂಬರ್ 2019, 9:32 IST
ಶ್ರೇಯಸ್ ಗೋಪಾಲ್
ಶ್ರೇಯಸ್ ಗೋಪಾಲ್   

ಹುಬ್ಬಳ್ಳಿ: ಉತ್ತರ ಪ್ರದೇಶ ತಂಡವನ್ನು ಬೇಗನೆ ಕಟ್ಟಿಹಾಕಿ, ಅಷ್ಟೇ ವೇಗದಲ್ಲಿ ಕರ್ನಾಟಕದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಔಟಾಗಿದ್ದರಿಂದ ರಣಜಿ ಕ್ರಿಕೆಟ್‌ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಇನಿಂಗ್ಸ್‌ ಮುನ್ನಡೆ ಯಾರಿಗೆ ಎನ್ನುವ ಪ್ರಶ್ನೆ ಭಾರಿ ಕುತೂಹಲ ಮೂಡಿಸಿತ್ತು. ಭರವಸೆಯ ಆಟಗಾರ ಶ್ರೇಯಸ್ ಗೋಪಾಲ ತಾಳ್ಮೆಯ ಇನಿಂಗ್ಸ್‌ ಕಟ್ಟಿ ರಾಜ್ಯ ತಂಡಕ್ಕೆ ಇನಿಂಗ್ಸ್‌ ಮುನ್ನಡೆ ತಂದುಕೊಟ್ಟರು.

ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಉತ್ತರ ಪ್ರದೇಶ ಮೊದಲ ಇನಿಂಗ್ಸ್‌ನಲ್ಲಿ 281 ರನ್ ಕಲೆಹಾಕಿತ್ತು. ಕರ್ನಾಟಕ ಬುಧವಾರದ ಅಂತ್ಯಕ್ಕೆ ನಾಲ್ಕು ವಿಕೆಟ್‌ ಕಳೆದುಕೊಂಡು 168 ರನ್ ಗಳಿಸಿತ್ತು. ಇನಿಂಗ್ಸ್‌ ಮುನ್ನಡೆಗೆ 114 ರನ್‌ ಅಗತ್ಯವಿತ್ತು.

ರಾಜ್ಯ ತಂಡ 117.5 ಓವರ್‌ಗಳಲ್ಲಿ ಎಂಟು ವಿಕೆಟ್‌ ಕಳೆದುಕೊಂಡು ಮುನ್ನಡೆ ಪಡೆದುಕೊಂಡಿತು. ಶ್ರೇಯಸ್ ಗೋಪಾಲ ಔಟಾದ ಬಳಿಕ ಕ್ರೀಸ್‌ಗೆ ಬಂದ ಅಭಿಮನ್ಯು ಮಿಥುನ್‌ ಎದುರಿಸಿದ ಮೊದಲ ಎಸೆತವನ್ನು ಬೌಂಡರಿಗೆ ಬಾರಿಸಿ ಮುನ್ನಡೆ ತಂದುಕೊಟ್ಟರು.

ADVERTISEMENT

ಬಲಗೈ ಬ್ಯಾಟ್ಸ್‌ಮನ್‌ ಶ್ರೇಯಸ್‌ 180 ಎಸೆತಗಳನ್ನು ತಾಳ್ಮೆಯಿಂದ ಎದುರಿಸಿ 58 ರನ್‌ ಗಳಿಸಿದರು. ಜೆ, ಸುಚಿತ್‌ (ಬ್ಯಾಟಿಂಗ್‌ 27 ), ಬಿ.ಆರ್. ಶರತ್‌ (16) ಮತ್ತು ಅಭಿಷೇಕ ರೆಡ್ಡಿ (32) ರನ್‌ ಹಾಕಿ ಮುನ್ನಡೆಗೆ ಕಾರಣರಾದರು. ಶುಕ್ರವಾರ ಪಂದ್ಯದ ಕೊನೆಯ ದಿನವಾಗಿದ್ದು ಪಂದ್ಯ ಡ್ರಾ ಆದರೆ, ಇನಿಂಗ್ಸ್‌ ಮುನ್ನಡೆ ಪಡೆದ ತಂಡಕ್ಕೆ ಮೂರು ಅಂಕಗಳು ಲಭಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.