ADVERTISEMENT

ರಣಜಿ: ಶಿವಂ, ಸೌರಭ್ ಪರಿಣಾಮಕಾರಿ ದಾಳಿ, ಪಾಂಡೆ ಬಳಗದ ಪರದಾಟ

ಸಮರ್ಥ್ ಅರ್ಧಶತಕ

ಗಿರೀಶದೊಡ್ಡಮನಿ
Published 6 ಜೂನ್ 2022, 19:30 IST
Last Updated 6 ಜೂನ್ 2022, 19:30 IST
ಅರ್ಧಶತಕ ಗಳಿಸಿ ಕರ್ನಾಟಕ ತಂಡಕ್ಕೆ ಆಸರೆಯಾದ ಆರ್‌.ಸಮರ್ಥ್ –ಪ್ರಜಾವಾಣಿ ಚಿತ್ರ/ಬಿ.ಎಚ್. ಶಿವಕುಮಾರ್
ಅರ್ಧಶತಕ ಗಳಿಸಿ ಕರ್ನಾಟಕ ತಂಡಕ್ಕೆ ಆಸರೆಯಾದ ಆರ್‌.ಸಮರ್ಥ್ –ಪ್ರಜಾವಾಣಿ ಚಿತ್ರ/ಬಿ.ಎಚ್. ಶಿವಕುಮಾರ್   

ಬೆಂಗಳೂರು: ಕರ್ನಾಟಕದ ಬ್ಯಾಟಿಂಗ್ ಪಡೆ ತವರಿನಂಗಳದಲ್ಲಿಯೇ ತಡಬಡಾಯಿಸಿತು. ಇದರ ಲಾಭ ಪಡೆದ ಉತ್ತರಪ್ರದೇಶದ ಬೌಲರ್‌ಗಳಾದ ಸೌರಭ್ ಕುಮಾರ್ ಮತ್ತು ಶಿವಂ ಮಾವಿ ಮಿಂಚಿದರು.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿಸೋಮವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಮೊದಲ ದಿನದಾಟದಲ್ಲಿ ಸೌರಭ್ (67ಕ್ಕೆ4) ಮತ್ತು ಶಿವಂ (40ಕ್ಕೆ3) ದಾಳಿಯ ಎದುರು ಕರ್ನಾಟಕವು 72 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 213 ರನ್‌ ಗಳಿಸಿತು. ಆರ್‌. ಸಮರ್ಥ್ (57; 81ಎ, 4X10) ಅರ್ಧಶತಕ ಗಳಿಸಿ ತಂಡಕ್ಕೆ ಆಸರೆಯಾದರು.

ಉತ್ತರಪ್ರದೇಶ ತಂಡಕ್ಕೆ ಹೋಲಿಸಿದರೆ ಕರ್ನಾಟಕದ ಬ್ಯಾಟಿಂಗ್ ಪಡೆ ಬಲಿಷ್ಠವಾಗಿದೆ. ಆದರೆ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಉತ್ತರಪ್ರದೇಶ ತಂಡದ ನಾಯಕ ಕರಣ್ ಶರ್ಮಾ ಅವರ ಯೋಜನೆ ಫಲಿಸಿತು. ಅವರ ಬೌಲಿಂಗ್‌ ಪ್ರಯೋಗಗಳು ಫಲ ನೀಡಿದವು. ಆತಿಥೇಯ ಬ್ಯಾಟರ್‌ಗಳು ಉತ್ತಮ ಆರಂಭ ಕಂಡರೂ ದೊಡ್ಡ ಜೊತೆಯಾಟಗಳನ್ನು ದಾಖಲಿಸದಂತೆ ಬೌಲರ್‌ಗಳು ನೋಡಿಕೊಂಡರು.

ADVERTISEMENT

ಶನಿವಾರ ಮಧ್ಯರಾತ್ರಿ ಮಳೆ ಸುರಿದ ಕಾರಣ ಹೊರಾಂಗಣ ಒದ್ದೆಯಾಗಿತ್ತು. ಆದ್ದರಿಂದ ಪಂದ್ಯವು 9.30ರ ಬದಲಿಗೆ 11.20ಕ್ಕೆ ಆರಂಭವಾಯಿತು. ಊಟದ ವಿರಾಮದವರೆಗಿನ 40 ನಿಮಿಷಗಳ ಆಟದಲ್ಲಿ ವಿಕೆಟ್ ಪತನವಾಗದಂತೆ ಆರಂಭಿಕ ಜೋಡಿ ಮಯಂಕ್ ಅಗರವಾಲ್ ಮತ್ತು ಆರ್. ಸಮರ್ಥ್ ನೋಡಿಕೊಂಡರು. ಅಗರವಾಲ್ ಕಣಕ್ಕಿಳಿದ ಕಾರಣಕ್ಕೆ ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರಿಗೆ ವಿಶ್ರಾಂತಿ ನೀಡಲಾಯಿತು. ಮಾವಿಯ ಬೌಲಿಂಗ್‌ನಲ್ಲಿ ಒಂದು ಬಾರಿ ತಮ್ಮ ಪಕ್ಕೆಲುಬಿಗೆ ಪೆಟ್ಟು ತಿಂದ ಮಯಂಕ್, ಪ್ರಥಮ ಚಿಕಿತ್ಸೆ ಪಡೆದು ಬ್ಯಾಟಿಂಗ್ ಮುಂದುವರಿಸಿದರು.

ಚಹಾ ವಿರಾಮದ ವೇಳೆಗೆ ಮಧ್ಯಮವೇಗಿ ಶಿವಂ ಮತ್ತು ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ ಸೇರಿ ಮೂರು ವಿಕೆಟ್ ಕಬಳಿಸಿದರು. ಅದರಲ್ಲಿ ಶಿವಂ ಬೌಲಿಂಗ್‌ನಲ್ಲಿ ಅಂಪೈರ್ ನೀಡಿದ ಅನುಮಾನಾಸ್ಪದ ತೀರ್ಪಿಗೆ ಮಯಂಕ್ ಅಗರವಾಲ್ ಔಟಾದರು. ಅವರು ಬೇಸರದಿಂದಲೇ ಪೆವಿಲಿಯನ್‌ನತ್ತ ಹೆಜ್ಜೆಹಾಕಿದರು. ಅರ್ಧಶತಕ ಗಳಿಸಿದ ಸಮರ್ಥ್ 30ನೇ ಓವರ್‌ನಲ್ಲಿ ಸೌರಭ್ ಕುಮಾರ್‌ಗೆ ವಿಕೆಟ್ ಒಪ್ಪಿಸಿದರು.ಕರುಣ್ ನಾಯರ್ (29; 74ಎ) ಆಟಕ್ಕೆ ಕುದುರಿಕೊಂಡಂತೆ ಕಂಡ ಹೊತ್ತಿನಲ್ಲಿಯೇ ಶಿವಂ ಸ್ವಿಂಗ್ ಎಸೆತಕ್ಕೆ ಕ್ಲೀನ್‌ಬೌಲ್ಡ್ ಆದರು. ಆಗ ತಂಡದ ಮೊತ್ತ ನೂರು ಕೂಡ ದಾಟಿರಲಿಲ್ಲ. ಚಹಾ ನಂತರ ಸೌರಭ್ ಸ್ಪಿನ್ ಮೋಡಿ ರಂಗೇರಿತು.ಪಿಚ್‌ನಲ್ಲಿದ್ದ ಸತ್ವವನ್ನು ಬಳಸಿಕೊಂಡ ಅವರು ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು.

ಅನುಭವಿ ಮನೀಷ್ ಪಾಂಡೆ, ಶ್ರೀನಿವಾಸ್ ಶರತ್ ಮತ್ತು ಗೌತಮ್ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಇದರಿಂದಾಗಿ ರನ್‌ ಗಳಿಕೆಯ ವೇಗಕ್ಕೆ ಕಡಿವಾಣ ಬಿತ್ತು.ಕೊನೆಯ ಹಂತದಲ್ಲಿ ಆತ್ಮವಿಶ್ವಾಸ ತೋರಿದ ಶ್ರೇಯಸ್ ಗೋಪಾಲ್ ಮತ್ತು ವೈಶಾಖ ವಿಜಯಕುಮಾರ್ಕ್ರೀಸ್‌ನಲ್ಲಿದ್ದಾರೆ.

ಸ್ಕೋರ್‌ ಕಾರ್ಡ್‌

ಕರ್ನಾಟಕ ಮೊದಲ ಇನಿಂಗ್ಸ್ 7ಕ್ಕೆ213 (72 ಓವರ್‌ಗಳಲ್ಲಿ)

ಸಮರ್ಥ್ ಸಿ ಪ್ರಿನ್ಸ್ ಬಿ ಸೌರಭ್ 57 (81ಎ, 4X10), ಮಯಂಕ್ ಸಿ ಜುರೇಲ್ ಬಿ ಮಾವಿ 10 (41ಎ, 4X1), ಕರುಣ್ ಬಿ ಮಾವಿ 29 (74ಎ, 4X5), ಸಿದ್ಧಾರ್ಥ್ ಬಿ ಮಾವಿ 37 (84ಎ, 4X4), ಮನೀಷ್ ಸಿ ಧ್ರುವ ಬಿ ಸೌರಭ್ 27 (70ಎ, 4X2, 6X1), ಶರತ್ ಸಿ ಆರ್ಯನ್ ಬಿ ಸೌರಭ್ 0 (1ಎ), ಶ್ರೇಯಸ್ ಬ್ಯಾಟಿಂಗ್ 26 (47ಎ,4X3, 6X1), ಗೌತಮ್ ಸಿ ಸಿಂಗ್ ಬಿ ಸೌರಭ್ 12 (13ಎ, 6X1), ವೈಶಾಖ್ ಬ್ಯಾಟಿಂಗ್ 12 (22ಎ, 4X2)

ಇತರೆ 3 (ನೋಬಾಲ್ 1, ಲೆಗ್‌ಬೈ1, ವೈಡ್ 1)

ವಿಕೆಟ್ ಪತನ: 1–57 (ಮಯಂಕ್ ಅಗರವಾಲ್; 12.6), 2-95 (ಸಮರ್ಥ್;29.6), 3–97 (34.2; ಕರುಣ್ ನಾಯರ್), 4–160 (ಮನೀಷ್ ಪಾಂಡೆ; 55.3), 5–160 (ಶರತ್ ಶ್ರೀನಿವಾಸ್; 55.4) 6–182 (ಸಿದ್ಧಾರ್ಥ್; 62.3), 7–199 (ಗೌತಮ್ ಕೃಷ್ಣಪ್ಪ; 65.5)

ಬೌಲಿಂಗ್‌: ಯಶ್ ದಯಾಳ್ 12–2–37–0, ಅಂಕಿತ್ ರಜಪೂತ್ 11–2–34–0, ಶಿವಂ ಮಾವಿ 11–4–40–3, ಸೌರಭ್ ಕುಮಾರ್ 29–6–67–4, ಪ್ರಿನ್ಸ್‌ ಯಾದವ್ 4–015–0, ಕರಣ್ ಶರ್ಮಾ 5–0–19–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.