ವಿರಾಟ್ ಕೊಹ್ಲಿ
(ಪಿಟಿಐ ಚಿತ್ರ)
ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ಸುಮಾರು 12 ವರ್ಷಗಳ ಬಳಿಕ ರಣಜಿ ಟ್ರೋಫಿ ಟೂರ್ನಿಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ.
ದೆಹಲಿ ತಂಡವನ್ನು ಪ್ರತಿನಿಧಿಸುತ್ತಿರುವ ಕೊಹ್ಲಿ, ಅರುಣ್ ಜೇಟ್ಲಿ ಮೈದಾನದಲ್ಲಿ ರೈಲ್ವೇಸ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಮೈದಾನಕ್ಕಿಳಿದಿದ್ದಾರೆ.
ಈ ವೇಳೆ ಸ್ಟೇಡಿಯಂ ಹೊರಗಡೆ ಕೊಹ್ಲಿ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದು, ನೂಕುನುಗ್ಗಲು ಉಂಟಾಗಿದೆ ಎಂದು ವರದಿಯಾಗಿದೆ.
ಇಂದು (ಗುರುವಾರ) ನಸುಕಿನ ಜಾವ 3 ಗಂಟೆಯಿಂದಲೇ ಅಭಿಮಾನಿಗಳು ಮೈದಾನದತ್ತ ಹೆಜ್ಜೆ ಹಾಕಿದ್ದಾರೆ. ಗೇಟ್ 16ರಲ್ಲಿ ಪ್ರೇಕ್ಷಕರು ಒಬ್ಬರನ್ನೊಬ್ಬರು ತಳ್ಳಲು ಆರಂಭಿಸಿದರು. ಈ ವೇಳೆ ಒಂದಿಬ್ಬರು ಕೆಳಕ್ಕೆ ಬಿದ್ದು, ಗಾಯಗಳಾಗಿವೆ. ಈ ಪರಿಸ್ಥಿತಿಯನ್ನು ನಿಯಂತ್ರಿಸುವ ವೇಳೆ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು 'ಎನ್‌ಡಿಟಿವಿ' ವರದಿ ಮಾಡಿದೆ.
ತವರಿನ ಮೈದಾನದಲ್ಲಿ ಕೊಹ್ಲಿ ಅವರ ರಣಜಿ ಪಂದ್ಯವನ್ನು ವೀಕ್ಷಿಸಲು 10,000 ಮಂದಿ ಆಗಮಿಸುವ ನಿರೀಕ್ಷೆಯಿದೆ ಎಂದು ಡಿಡಿಸಿಎ ಹೇಳಿತ್ತು.
'ನಾನು 30 ವರ್ಷಗಳಿಂದ ದೆಹಲಿ ಕ್ರಿಕೆಟ್‌ನಲ್ಲಿ ಸಕ್ರಿಯವಾಗಿದ್ದೇನೆ. ಆದರೆ ರಣಜಿ ಪಂದ್ಯವೊಂದರಲ್ಲಿ ಇಂತಹ ದೃಶ್ಯಗಳನ್ನು ನೋಡಿಲ್ಲ. ಇದು ಕೊಹ್ಲಿ ಜನಪ್ರಿಯತೆಗೆ ಸಾಟಿಯಿಲ್ಲ ಎಂಬುದನ್ನು ತೋರಿಸುತ್ತದೆ' ಎಂದು ಡಿಡಿಸಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂದು ಪಂದ್ಯ ಆರಂಭವಾಗುತ್ತಿದ್ದಂತೆಯೇ ಅಭಿಮಾನಿಗಳು 'ಕೊಹ್ಲಿ, ಕೊಹ್ಲಿ' ಎಂದು ಜೈಕಾರ ಕೂಗಿದರು.
'ಚೀಕೂ' ಎಂದಿಗೂ ಬದಲಾಗಲಿಲ್ಲ. ಅವರಿಗೆ ಚೋಲೆ-ಪೂರಿ ಇಷ್ಟವಾದ ಖಾದ್ಯ. ನಾವದನ್ನು ತರಿಸಿದ್ದೆವು. ಆದರೆ ಈಗ ತಿನ್ನುವುದಿಲ್ಲ ಎಂದು ತಿಳಿಸಿದ್ದಾರೆ. ಅಭ್ಯಾಸದ ಬಳಿಕ 'ಕಢಿ ಚಾವಲ್' ಸೇವಿಸಿದ್ದಾರೆ ಎಂದು ಡಿಡಿಸಿಎ ಅಧಿಕಾರಿ ತಿಳಿಸಿದ್ದಾರೆ.
ಕೊಹ್ಲಿ ಕೊನೆಯದಾಗಿ 2012ರಲ್ಲಿ ಉತ್ತರ ಪ್ರದೇಶದ ವಿರುದ್ಧ ರಣಜಿ ಪಂದ್ಯ ಆಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.