ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಫೈನಲ್‌: ಐತಿಹಾಸಿಕ ಸಾಧನೆ ಸನಿಹ ಕಾಶ್ಮೀರ

ಕರ್ನಾಟಕ ತಂಡಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಭಾರಿ ಹಿನ್ನಡೆ– ನಬಿ ಐದು ವಿಕೆಟ್‌ –ಕಮ್ರನ್ ಉತ್ತಮ ಬ್ಯಾಟಿಂಗ್‌

ಗಿರೀಶ ದೊಡ್ಡಮನಿ
Published 27 ಫೆಬ್ರುವರಿ 2026, 23:30 IST
Last Updated 27 ಫೆಬ್ರುವರಿ 2026, 23:30 IST
<div class="paragraphs"><p>ಜಮ್ಮು ಮತ್ತು ಕಾಶ್ಮೀರ ತಂಡದ&nbsp;ಕಮ್ರನ್ ಇಕ್ಬಾಲ್</p></div>

ಜಮ್ಮು ಮತ್ತು ಕಾಶ್ಮೀರ ತಂಡದ ಕಮ್ರನ್ ಇಕ್ಬಾಲ್

   

–ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿ: ಶುಕ್ರವಾರ ಬಿಸಿಲು ಕಾವೇರುವ ಮುನ್ನವೇ ಆತಿಥೇಯ ಕರ್ನಾಟಕ ಕ್ರಿಕೆಟ್‌ ತಂಡದಲ್ಲಿ ‘ಮಂಕು’ ಕವಿಯಿತು. ಹನ್ನೊಂದು ವರ್ಷಗಳಿಂದ ಕಾದಿದ್ದ ಒಂಬತ್ತನೇ ರಣಜಿ ಟ್ರೋಫಿ ಗೆಲುವಿನ ಕನಸು ಕೈಜಾರಿದ ಹತಾಶೆ ಮನೆಮಾಡಿತು. ಆದರೆ 67 ವರ್ಷಗಳಲ್ಲಿ ಮೊದಲ ಬಾರಿ ಮಿರಿಮಿರಿ ಮಿಂಚುವ ಟ್ರೋಫಿ ಜಯದ ಹೊಸ್ತಿಲಿಗೆ ಜಮ್ಮು–ಕಾಶ್ಮೀರ ತಂಡವು ಬಂದು ನಿಂತಿದೆ.

ADVERTISEMENT

ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಫೈನಲ್‌ನಲ್ಲಿ ನಾಲ್ಕನೇ ದಿನದಾಟದ ಬೆಳಿಗ್ಗೆಯೇ 291 ರನ್‌ಗಳ ಮೊದಲ ಇನಿಂಗ್ಸ್ ಹಿನ್ನಡೆ ಅನುಭವಿಸಿತು. ಮಧ್ಯಮವೇಗಿ ಅಕೀಬ್ ನಬಿ ದಾರ್ ಐದು ವಿಕೆಟ್ ಪೂರ್ಣಗೊಳಿಸಿಕೊಂಡರು.

ದಿನದಾಟದ ಮುಕ್ತಾಯಕ್ಕೆ ಪ್ರವಾಸಿ ತಂಡವು ಎರಡನೇ ಇನಿಂಗ್ಸ್‌ನಲ್ಲಿ 57 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 186 ರನ್ ಗಳಿಸಿದೆ. ಕಮ್ರನ್ ಇಕ್ಬಾಲ್ (ಬ್ಯಾಟಿಂಗ್ 94; 160ಎ, 4X11, 6X1) ಮತ್ತು ಸಾಹಿಲ್ ಲೋತ್ರಾ (ಬ್ಯಾಟಿಂಗ್ 16; 41ಎ, 4X2) ಕ್ರೀಸ್‌ನಲ್ಲಿದ್ದಾರೆ. ಜಮ್ಮು–ಕಾಶ್ಮೀರವು ಒಟ್ಟು 477 ರನ್‌ ಮುನ್ನಡೆಯಲ್ಲಿದೆ.

ಜಮ್ಮು ಮತ್ತು ಕಾಶ್ಮೀರ ತಂಡವು ಮೊದಲ ಇನಿಂಗ್ಸ್‌ನಲ್ಲಿ 584 ರನ್ ಗಳಿಸಿತ್ತು. ಅದಕ್ಕೆ ಉತ್ತರವಾಗಿ ಗುರುವಾರ ಇನಿಂಗ್ಸ್‌ ಪ್ರಾರಂಭಿಸಿದ್ದ ಕರ್ನಾಟಕವು ಆರಂಭದಲ್ಲಿಯೇ (57ಕ್ಕೆ4) ಆಘಾತ ಅನುಭವಿಸಿತ್ತು. ಮಯಂಕ್ ಅಗರವಾಲ್ ಶತಕ ಗಳಿಸಿ ಮುನ್ನಡೆಯ ಆಸೆ ಜೀವಂತವಿರಿಸಿದ್ದರು.

ಮೂರನೇ ದಿನದಾಟದ ಅಂತ್ಯಕ್ಕೆ 69 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 220 ರನ್ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಮಯಂಕ್ ಮತ್ತು ಕೃತಿಕ್ ಶುಕ್ರವಾರ ಬೆಳಿಗ್ಗೆಯೂ ಜೊತೆಯಾಟ ಮುಂದುವರಿಸಿದರು. ಸಾಹಿಲ್ ಲೂತ್ರಾ ಬೌಲಿಂಗ್‌ನಲ್ಲಿ ಕೃತಿಕ್ (36; 101ಎ, 4X2) ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆದರೆ ಕೃತಿಕ್ ಅವರು ಅಂಪೈರ್ ತೀರ್ಪನ್ನು ಪ್ರಶ್ನಿಸಿ ಡಿಆರ್‌ಎಸ್ ಪಡೆದರು. ದೀರ್ಘ ಸಮಯ, ಎಲ್ಲ ಆಯಾಮಗಳ ವಿಡಿಯೊ ತುಣುಕುಗಳು ಮತ್ತು ಬಾಲ್ ಟ್ರ್ಯಾಕಿಂಗ್ ಪರಿಶೀಲಿಸಿದ ಮೂರನೇ ಅಂಪೈರ್ ವಿರೇಂದ್ರ ಶರ್ಮಾ ಔಟ್ ಎಂದು ತೀರ್ಪು ನೀಡಿದರು. ಚೆಂಡು ಮತ್ತು ಪ್ಯಾಡ್‌ಗೆ ಬ್ಯಾಟ್ ಅಂಚು ಏಕಕಾಲಕ್ಕೆ ತಗುಲಿದಂತೆ ಭಾಸವಾಗಿತ್ತು. ಕೃತಿಕ್ ಅಸಮಾಧಾನದಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ನಂತರ ಅಕೀಬ್ ನಬಿ ದಾರ್ ಅವರು ಮಯಂಕ್ (160; 266ಎ, 4X21) ಅವರನ್ನು ಎಲ್‌ಬಿಡಬ್ಲು ಬಲೆಗೆ  ಕೆಡವಿದರು.

ಋತುವಿನ ಕೆಲವು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ವಿದ್ಯಾಧರ್ (11 ರನ್) ಅವರಿಗೆ ಸುನಿಲ್ ಕುಮಾರ್ ಪೆವಿಲಿಯನ್ ಹಾದಿ ತೋರಿಸಿದರು. ಶಿಖರ್ ಶೆಟ್ಟಿ ಅವರು ನಬಿಗೆ ಈ ಋತುವಿನ 60ನೇ ವಿಕೆಟ್ ಆದರು. ಪ್ರಸಿದ್ಧಕೃಷ್ಣ ವಿಕೆಟ್ ಯುದ್ಧವೀರ್ ಪಾಲಾಯಿತು.

ಪ್ರಸಿದ್ಧ ವೇಗ; ಕಮ್ರನ್ ಬ್ಯಾಟಿಂಗ್

ಊಟದ ವಿರಾಮಕ್ಕೂ ಮುನ್ನ ಆರಂಭವಾದ ಎರಡನೇ ಇನಿಂಗ್ಸ್‌ನಲ್ಲಿ ಪ್ರವಾಸಿ ಬಳಗವನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿ, ಕೊನೆಯ ದಿನವಾದ ಶನಿವಾರ ಗುರಿ ಬೆನ್ನಟ್ಟುವ ಯೋಚನೆಯಲ್ಲಿತ್ತು. ಅದಕ್ಕೆ ತಕ್ಕಂತೆ ಪ್ರಸಿದ್ಧ ಕೃಷ್ಣ ಅವರು ಎರಡನೇ ಓವರ್‌ನ ಮೊದಲ ಎಸೆತದಲ್ಲಿಯೇ ಯವರ್ ಹುಸೇನ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು. ನಂತರದ ಓವರ್‌ನಲ್ಲಿ ವೈಶಾಖ್ ವಿ‌ಜಯಕುಮಾರ್ ಎಸೆತದಲ್ಲಿ ಶುಭಂ ಪುಂದೀರ ಅವರ ಕ್ಯಾಚ್ ಪಡೆದ ಬದಲೀ ವಿಕೆಟ್‌ಕೀಪರ್ ಕೆ.ಎಲ್. ಶ್ರೀಜಿತ್ ಹರ್ಷಿಸಿದರು.

ಊಟದ ನಂತರದ ಅವಧಿಯಲ್ಲಿ ಕಮ್ರನ್ ಮತ್ತು ಪಾರಸ್ ಡೋಗ್ರಾ ಅವರು 61 ರನ್‌ಗಳ ಜೊತೆಯಾಟವಾಡಿ ಬೌಲರ್‌ಗಳಿಗೆ ಬೆವರಿಳಿಸಿದರು.

21ನೇ ಓವರ್‌ನಲ್ಲಿ ಡೋಗ್ರಾ ಅವರನ್ನು ಕ್ಲೀನ್‌ ಬೌಲ್ಡ್ ಮಾಡುವಲ್ಲಿ ಪ್ರಸಿದ್ಧ ಯಶಸ್ವಿಯಾದರು. ಆದರೆ ಇನ್ನೊಂದು ಬದಿಯಲ್ಲಿ ಕಮ್ರನ್ ಮಾತ್ರ ವಿಚಿತ್ರ ರೀತಿಯ ಫುಟ್‌ವರ್ಕ್‌ ಮೂಲಕ ಬೌಲರ್‌ಗಳ ಎಸೆತಗಳನ್ನು ದಂಡಿಸಿದರು.

ಅವರು ಅಬ್ದುಲ್ ಸಮದ್ (32 ರನ್) ಜೊತೆಗೂ 73 ರನ್ ಸೇರಿಸಿದರು. ಸಮದ್ ವಿಕೆಟ್ ಗಳಿಸುವಲ್ಲಿ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಸಫಲರಾದರು. ಆದರೆ ಕ್ರಮನ್ ಜೊತೆಗೂಡಿದ ಸಾಹಿಲ್ ವಿಕೆಟ್‌ ಪತನಕ್ಕೆ ಅವಕಾಶ ಕೊಡಲಿಲ್ಲ.

ಔಟ್‌ಗಾಗಿ ಅಂಪೈರ್‌ಗೆ ಮನವಿ ಮಾಡಿದ ಕರ್ನಾಟಕ ತಂಡದ ವೇಗಿ ಪ್ರಸಿದ್ಧ ಕೃಷ್ಣ .

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಜಮ್ಮು–ಕಾಶ್ಮೀರ: 173.1 ಓವರ್‌ಗಳಲ್ಲಿ 584. ಕರ್ನಾಟಕ: 93.3 ಓವರ್‌ಗಳಲ್ಲಿ 293 (ಮಯಂಕ್ ಅಗರವಾಲ್ 160, ಕೃತಿಕ್ ಕೃಷ್ಣ 36, ವೈಶಾಖ ವಿಜಯಕುಮಾರ್ ಔಟಾಗದೇ 17; ಅಕೀಬ್ ನಬಿ ದಾರ್ 54ಕ್ಕೆ5, ಸುನಿಲ್ ಕುಮಾರ್ 51ಕ್ಕೆ2, ಯುದ್ಧವೀರ್ ಸಿಂಗ್ 55ಕ್ಕೆ2) ಎರಡನೇ ಇನಿಂಗ್ಸ್: ಜಮ್ಮು–ಕಾಶ್ಮೀರ: 57 ಓವರ್‌ಗಳಲ್ಲಿ 4ಕ್ಕೆ186 (ಕಮ್ರನ್ ಇಕ್ಬಾಲ್ ಔಟಾಗದೇ 94, ಪಾರಸ್ ಡೋಗ್ರಾ 16, ಅಬ್ದುಲ್ ಸಮದ್ 32, ಸಾಹಿಲ್ ಲೋತ್ರಾ 16,  ಪ್ರಸಿದ್ಧಕೃಷ್ಣ 42ಕ್ಕೆ2) 

ಕಾವೇರಿದ ವೈಶಾಖ್–ಕಮ್ರನ್ ಜಟಾಪಟಿ

ಫೈನಲ್ ಪಂದ್ಯದ ಎರಡನೇ ದಿನದಾಟದಲ್ಲಿ ಪಾರಸ್ ಡೋಗ್ರಾ ಅವರು ಫೀಲ್ಡರ್‌ ಕೆ.ವಿ. ಅನೀಶ್ ಅವರಿಗೆ ಡಿಚ್ಚಿ ಹೊಡೆದಿದ್ದು ದೊಡ್ಡ ಸುದ್ದಿಯಾಗಿತ್ತು.

ಶುಕ್ರವಾರ ಮತ್ತೆ ಉಭಯ ತಂಡಗಳ ಆಟಗಾರರ ನಡುವೆ ಮಾತಿನ ಚಕಮಕಿ ನಡೆದವು. ಎರಡನೇ ಇನಿಂಗ್ಸ್‌ ಆಡಿದ ಜಮ್ಮು ಕಾಶ್ಮೀರ ತಂಡದ ಬ್ಯಾಟರ್ ಕಮ್ರನ್‌ ಇಕ್ಬಾಲ್ ಹಾಗೂ ವೇಗಿ ವೈಶಾಖ್ ವಿಜಯಕುಮಾರ್ ಅವರ ನಡುವೆ ಜಟಾಪಟಿ ನಡೆಯಿತು.

49ನೇ ಓವರ್‌ನಲ್ಲಿ ವೈಶಾಖ ಎಸೆತವು ಕಮ್ರನ್ ಪ್ಯಾಡ್‌ಗೆ ಬಡಿಯಿತು. ಅವರು ವೈಶಾಖ ಅವರಿಗೆ ತಮ್ಮ ಅಂಗೈ ತಿರುವಿ ಸನ್ನೆ ಮಾಡಿದರು. ಇದರಿಂದ ಕುಪಿತರಾದ ವೈಶಾಖ ಕೂಡ ಜೋರಾಗಿಯೇ ವಾಗ್ವಾದಕ್ಕಿಳಿದರು. ಅಂಪೈರ್‌ಗೂ ದೂರಿದರು. ಉಳಿದ ಆಟಗಾರರು ಬಂದು ವೈಶಾಖ ಅವರನ್ನು ಸಮಾಧಾನ ಮಾಡಿದರು. ಇನ್ನೊಂದು ಎಸೆತದಲ್ಲಿಯೂ ಇಂತಹದೇ ಸನ್ನಿವೇಶ್ ಎದುರಾಯಿತು. ವೈಶಾಖ ಅವರು ಬೌನ್ಸರ್‌, ಲೆಗ್‌ಸೈಡ್ ಎಸೆತಗಳನ್ನು ಪ್ರಯೋಗಿಸಿದರು. ಅದೇ ಓವರ್‌ನಲ್ಲಿ ಕಮ್ರನ್ ಒಂದು ಸಿಕ್ಸರ್ ಕೂಡ ಹೊಡೆದರು.

ಇದಕ್ಕೂ ಮುನ್ನ 13 ನೇ ಓವರ್‌ನಲ್ಲಿ ಪಾರಸ್ ಡೋಗ್ರಾ ಮತ್ತು ಕಮ್ರನ್‌ ಅವರು ವಿದ್ಯಾಧರ್ ಪಾಟೀಲ ಅವರನ್ನು ಕೆಣಕಿದ್ದರು.

ಜಮ್ಮು ಮತ್ತು ಕಾಶ್ಮೀರ ತಂಡದ ಕಮ್ರನ್ ಇಕ್ಬಾಲ್

ಸ್ಟಂಪ್‌ಗೆ ತಗುಲಿದ ಚೆಂಡು:
ಕರ್ನಾಟಕ ತಂಡಕ್ಕೆ ಅದೃಷ್ಟ ಜೊತೆಗಿರಲಿಲ್ಲ. 11ನೇ ಓವರ್‌ನಲ್ಲಿ ಕಮ್ರನ್ ಅವರಿಗೆ ವಿದ್ಯಾಧರ್ ಹಾಕಿದ್ದ ಎಸೆತವು ಆಫ್‌ಸ್ಟಂಪ್‌ಗೆ ತಗುಲಿ ವಿಕೆಟ್‌ಕೀಪರ್ ಕೈಸೇರಿತ್ತು. ಆದರೆ ಬೇಲ್ಸ್‌ ಬೀಳದ ಕಾರಣ ಔಟ್ ನೀಡಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.