ADVERTISEMENT

Ranji Trophy Final: ‘ರಾಜನಗರ’ದಲ್ಲಿ ವೇಗಿಗಳ ಮಿಂಚು

ಸತೀಶ ಬಿ.
Published 27 ಫೆಬ್ರುವರಿ 2026, 23:30 IST
Last Updated 27 ಫೆಬ್ರುವರಿ 2026, 23:30 IST
ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್ ಪಂದ್ಯ ವೀಕ್ಷಿಸಲು ಶುಕ್ರವಾರ ಹುಬ್ಬಳ್ಳಿಗೆ ಬಂದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರನ್ನು ಕೆಎಸ್‌ಸಿಎ ಧಾರವಾಡ ವಲಯದ ಚೇರ್ಮನ್ ಅಲ್ತಾಫ್ ಕಿತ್ತೂರು, ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿ ಸದಸ್ಯ ಅವಿನಾಶ ವೈದ್ಯ ಸ್ವಾಗತಿಸಿದರು 
ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಫೈನಲ್ ಪಂದ್ಯ ವೀಕ್ಷಿಸಲು ಶುಕ್ರವಾರ ಹುಬ್ಬಳ್ಳಿಗೆ ಬಂದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರನ್ನು ಕೆಎಸ್‌ಸಿಎ ಧಾರವಾಡ ವಲಯದ ಚೇರ್ಮನ್ ಅಲ್ತಾಫ್ ಕಿತ್ತೂರು, ಕೆಎಸ್‌ಸಿಎ ವ್ಯವಸ್ಥಾಪನಾ ಸಮಿತಿ ಸದಸ್ಯ ಅವಿನಾಶ ವೈದ್ಯ ಸ್ವಾಗತಿಸಿದರು    

ಹುಬ್ಬಳ್ಳಿ: ಇಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಎರಡೂ ತಂಡಗಳ ವೇಗಿಗಳು ಮಿಂಚು ಹರಿಸಿದರು. ಲೈನ್ ಮತ್ತು ಲೆಂತ್‌ ಕಾಪಾಡಿಕೊಂಡು ನಿಖರ ದಾಳಿ ನಡೆಸಿದ ವೇಗಿಗಳು ಯಶಸ್ಸು ಕಂಡರು.

ಈ ಋತುವಿನಲ್ಲಿ ಅಮೋಘ ಲಯದಲ್ಲಿರುವ ಜಮ್ಮು– ಕಾಶ್ಮೀರ ತಂಡದ 29 ವರ್ಷದ ವೇಗಿ ಅಕೀಬ್ ನಬಿ ದಾರ್ ಐದು ವಿಕೆಟ್ ಗೊಂಚಲು (54ಕ್ಕೆ 5) ಗಳಿಸಿದರು‌. ಪ್ರಮುಖ ಬ್ಯಾಟರ್‌ಗಳಾದ ಕೆ.ಎಲ್.ರಾಹುಲ್, ಮಯಂಕ್ ಅಗರವಾಲ್, ಕರುಣ್ ನಾಯರ್, ಸ್ಮರಣ್ ಆರ್.‌,ಮತ್ತು ಶಿಖರ್ ಶೆಟ್ಟಿ ಅವರ ವಿಕೆಟ್‌ಗಳು ನಬಿ ಪಾಲಾದವು. ಈ ಋತುವಿನಲ್ಲಿ ಒಟ್ಟು ಏಳನೇ ಬಾರಿ ಐದು ವಿಕೆಟ್ ಗುಚ್ಛ ಗಳಿಸಿದ ನಬಿ, ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ (60) ಬೌಲರ್ ಎನಿಸಿದರು‌.

ವೇಗಿ ಪ್ರಸಿದ್ಧ ಕೃಷ್ಣ ಅವರೂ 98 ಕ್ಕೆ5 ವಿಕೆಟ್ ಪಡೆದು ಆತಿಥೇಯ ತಂಡದ ಪರ ಯಶಸ್ವಿ ಬೌಲರ್ ಎನಿಸಿದ್ದರು. ಎರಡನೇ ಇನಿಂಗ್ಸ್‌ನಲ್ಲಿಯೂ ಅವರು ಎರಡು ವಿಕೆಟ್‌ ಗಳಿಸಿದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಒಟ್ಟು 19 ವಿಕೆಟ್‌ಗಳು ವೇಗಿಗಳ ಪಾಲಾದರೆ, ಸ್ಪಿನ್ನರ್‌ಗಳು 4 ವಿಕೆಟ್ ಪಡೆದರು‌.

ADVERTISEMENT

ನವೆಂಬರ್‌ನಲ್ಲಿ‌ ಇದೇ ಮೈದಾನದಲ್ಲಿ ನಡೆದಿದ್ದ‌ ಚಂಡೀಗಡ ಎದುರಿನ ರಣಜಿ ಪಂದ್ಯದಲ್ಲಿ ಶ್ರೇಯಸ್ ಗೋಪಾಲ್ (73ಕ್ಕೆ 7) ಮತ್ತು ಶಿಖರ್ ಶೆಟ್ಟಿ (61ಕ್ಕೆ 5) ಮಿಂಚಿದ್ದರು.

2024ರಲ್ಲಿ ನಡೆದಿದ್ದ ಪಂಜಾಬ್‌ ಎದುರಿನ ಪಂದ್ಯದಲ್ಲಿ ಬಲಗೈ ಮಧ್ಯಮ ವೇಗಿ ವಿ.ಕೌಶಿಕ್‌ (ಈಗ ಗೋವಾ ತಂಡ) 41ಕ್ಕೆ 7 ವಿಕೆಟ್ ಪಡೆದಿದ್ದರು. 2023ರ ಡಿಸೆಂಬರ್‌ನಲ್ಲಿ ನಡೆದಿದ್ದ ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಮಧ್ಯಪ್ರದೇಶ ಎದುರಿನ ಕ್ವಾರ್ಟರ್ ಫೈನಲ್‌ನಲ್ಲಿ ಕರ್ನಾಟಕ ತಂಡದ ಧೀರಜ್‌ ಗೌಡ 77ಕ್ಕೆ 6 ವಿಕೆಟ್ ಕಬಳಿಸಿದ್ದರು. 

ಗೆಲುವಿಗೆ ಪ್ರಯತ್ನಿಸುತ್ತೇವೆ: ಮಯಂಕ್
‘ಫೈನಲ್‌ನಲ್ಲಿ ಶತಕ ಗಳಿಸುವುದು ಖುಷಿ ನೀಡುತ್ತದೆ. ಆದರೆ ಅಕೀಬ್‌ ನಬಿ ದಾರ್‌ ಸೇರಿದಂತೆ ಜಮ್ಮು ಮತ್ತು ಕಾಶ್ಮೀರ ತಂಡದ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್‌ ಮಾಡಿ ಈ ಪಂದ್ಯದಲ್ಲಿ ನಮ್ಮ ಮೇಲೆ ಒತ್ತಡ ಹೇರಿದರು’ ಎಂದು ಕರ್ನಾಟಕ ತಂಡದ ಆರಂಭಿಕ ಬ್ಯಾಟರ್‌ ಮಯಂಕ್ ಅಗರವಾಲ್‌ ಹೇಳಿದರು. ‘ಈ ಪಂದ್ಯದಲ್ಲಿ ನಾವು ಬಹಳ ಹಿಂದೆ ಇದ್ದೇವೆ. ಕೊನೆಯ ದಿನದ ಆಟ ಬಾಕಿ ಇದೆ. ಜಮ್ಮು-ಕಾಶ್ಮೀರ ತಂಡದ ಉಳಿದ ವಿಕೆಟ್‌ಗಳನ್ನು ಬೇಗನೇ ಪಡೆದು ಲೀಗ್ ಹಂತದಲ್ಲಿ ಪಂಜಾಬ್ ವಿರುದ್ಧ ಆಡಿದ ರೀತಿ ಆಡಿದರೆ ಗೆಲ್ಲುವ ಅವಕಾಶವಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇವೆ’ ಎಂದರು.

‘ಟ್ರೋಫಿಯೊಂದಿಗೆ ಹೋಗುತ್ತೇವೆ’

‘ನಮ್ಮ ತಂಡ ಮೊದಲ ಬಾರಿಗೆ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿದ್ದು ಹೆಮ್ಮೆಯ ಸಂಗತಿ. ನಾವು ಇಲ್ಲಿಂದ ಟ್ರೋಫಿಯೊಂದಿಗೆ ಹೋಗುತ್ತೇವೆ’ ಎಂದು ಜಮ್ಮು– ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದರು.  ‘ಫೈನಲ್‌ನಲ್ಲಿ ನಮ್ಮ ತಂಡ ಗೆಲ್ಲುವುದು ಕಷ್ಟ ಎಂಬಂತೆ ಬಿಂಬಿಸಲಾಗಿತ್ತು. ಆದರೆ ತಂಡ ಉತ್ತಮವಾಗಿ ಆಡಿದೆ. ರಣಜಿ ಫೈನಲ್ ಪ್ರವೇಶಿಸುವ ಮೂಲಕ ಜಮ್ಮು ಕಾಶ್ಮೀರದಲ್ಲೂ ಉತ್ತಮ ಕ್ರಿಕೆಟಿಗರು ಇದ್ದಾರೆ ಎಂಬುದು ಜನರಿಗೆ ಗೊತ್ತಾಗುತ್ತಿದೆ. ಅವಕಾಶಗಳ ಕೊರತೆಯಿಂದ ನಮ್ಮ ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿಲ್ಲ. ಫೈನಲ್ ಪಂದ್ಯದ ಬಳಿಕ ತಂಡದ ಒಂದಿಬ್ಬರಾದರೂ ಭಾರತ ತಂಡಕ್ಕೆ ಆಡುವ ವಿಶ್ವಾಸ ಇದೆ’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.