ವಿದರ್ಭ ತಂಡದ ಆಟಗಾರರು
ಪಿಟಿಐ ಚಿತ್ರ
ಬೆಂಗಳೂರು: ರಣಜಿ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಗುಜರಾತ್ ಎದುರು ಡ್ರಾ ಮಾಡಿಕೊಂಡಿರುವ ಕೇರಳ, ಎರಡನೇ ಸೆಮಿಫೈನಲ್‌ನಲ್ಲಿ ಬಲಿಷ್ಠ ಮುಂಬೈ ಎದುರು ಗೆದ್ದಿರುವ ವಿದರ್ಭ, ಫೈನಲ್‌ಗೆ ಲಗ್ಗೆ ಇಟ್ಟಿವೆ.
ಕೇರಳ ತಂಡ ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದರೆ, ವಿದರ್ಭ ಮೂರನೇ ಪ್ರಶಸ್ತಿಯನ್ನು ಎದುರು ನೋಡುತ್ತಿದೆ.
ಕೇರಳ vs ಗುಜರಾತ್
ಅಹಮದಾಬಾದ್: ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶುಕ್ರವಾರ ಮುಕ್ತಾಯವಾದ ಕೇರಳ ಮತ್ತು ಗುಜರಾತ್ ನಡುವಣ ಸೆಮಿಫೈನಲ್ ಪಂದ್ಯವು ರೋಚಕ ಡ್ರಾ ಆಯಿತು. ಆದರೆ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಲು ನಡೆದ ಹಣಾಹಣಿಯು ಕ್ರಿಕೆಟ್‌ಪ್ರಿಯರ ಮೈನವಿರೇಳಿಸಿತು. ಹತ್ತಾರು ನಾಟಕೀಯ ತಿರುವುಗಳನ್ನು ಕಂಡ ಆಟದಲ್ಲಿ ಕೇರಳವು ಕೇವಲ 2 ರನ್ ಮುನ್ನಡೆ ಸಾಧಿಸಿತು.
ಕೇರಳ ತಂಡವು ದೇಶಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 68 ವರ್ಷಗಳ ನಂತರ ಇದೇ ಮೊದಲ ಸಲ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿತು. ಕೇರಳ ತಂಡವು ಮೊದಲ ಇನಿಂಗ್ಸ್‌ನಲ್ಲಿ 457 ರನ್ ಗಳಿಸಿತ್ತು. ಅದಕ್ಕುತ್ತರವಾಗಿ ನಾಲ್ಕನೇ ದಿನವಾದ ಗುರುವಾರದ ಅಂತ್ಯಕ್ಕೆ ಆತಿಥೇಯ ತಂಡವು 7 ವಿಕೆಟ್‌ಗಳಿಗೆ 429 ರನ್ ಗಳಿಸಿತ್ತು. ಪಂದ್ಯದ ಐದನೇ ಮತ್ತು ಕೊನೆಯ ದಿನದಂದು ಗುಜರಾತ್ ತಂಡಕ್ಕೆ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಲು 29 ರನ್ ಮತ್ತು ಕೇರಳಕ್ಕೆ 3 ವಿಕೆಟ್ ಗಳಿಸುವ ಅಗತ್ಯವಿತ್ತು.
ಗುಜರಾತ್ ತಂಡದ ಬಾಲಂಗೋಚಿ ಬ್ಯಾಟರ್‌ಗಳು ಕೇರಳ ಬೌಲರ್‌ಗಳಿಗೆ ಕಠಿಣ ಪರೀಕ್ಷೆಯೊಡ್ಡಿದರು. ಕ್ರೀಸ್‌ನಲ್ಲಿ ಉಳಿದಿದ್ದ ಜಯಮೀತ್ ಪಟೇಲ್ ಮತ್ತು ಸಿದ್ಧಾರ್ಥ್ ದೇಸಾಯಿ ಅವರಿಬ್ಬರೂ ತಾಳ್ಮೆಯಿಂದ ಒಂದೊಂದೇ ರನ್ ಹೆಕ್ಕುತ್ತ ಆಡಿದರು. ಗುರುವಾರದ ಮೊತ್ತಕ್ಕೆ 17 ರನ್ ಸೇರುವಷ್ಟರಲ್ಲಿ ಇಬ್ಬರೂ ಬ್ಯಾಟರ್‌ಗಳಿಗೆ ಪೆವಿಲಿಯನ್ ದಾರಿ ತೋರುವಲ್ಲಿ ಕೇರಳದ ಎಡಗೈ ಸ್ಪಿನ್ನರ್ ಆದಿತ್ಯ ಸರವಟೆ ಯಶಸ್ವಿಯಾದರು.
ಆದರೆ ಕೊನೆಯ ವಿಕೆಟ್ ಜೊತೆಯಾಟದಲ್ಲಿ 9 ರನ್ ಗಳಿಸಿದ ಅರ್ಜನ್ ನಾಗವಸ್ವಲ್ಲಾ (10; 48ಎ, 4X1) ಮತ್ತು ಪ್ರಿಯಜೀತ್‌ಸಿಂಗ್ ಜಡೇಜ (ಔಟಾಗದೇ 3; 30ಎ) ಅವರು ಜಿಗುಟುತನದ ಆಟವಾಡಿದರು. ಇವರಿಬ್ಬರೂ ಸೇರಿ 10 ಓವರ್‌ಗಳನ್ನು ಆಡಿದರು. ಬಿಗಿಯಾದ ಕ್ಷೇತ್ರರಕ್ಷಣೆಯ ನಡುವೆಯೂ ತಾಳ್ಮೆಯಿಂದ ಆಡಿ ರನ್ ಗಳಿಸಿದರು.
2 ರನ್ ಅಗತ್ಯವಿದ್ದ ಸಂದರ್ಭದಲ್ಲಿ ನಾಗಸ್ವಲ್ಲಾ ಅವರು ಬೀಸಿ ಹೊಡೆಯುವ ಯತ್ನದಲ್ಲಿ ಚೆಂಡು ಶಾರ್ಟ್ ಲೆಗ್ ಫೀಲ್ಡರ್ ನಿಜರ್ ಅವರ ಹೆಲ್ಮೆಟ್‌ಗೆ ಅಪ್ಪಳಿಸಿ ಮೇಲಕ್ಕೆ ಹಾರಿತು. ಮೊದಲ ಸ್ಲಿಪ್‌ನಲ್ಲಿದ್ದ ನಾಯಕ ಸಚಿನ್ ಬೇಬಿ ಕ್ಯಾಚ್ ಕೈತುಂಬಿಕೊಂಡರು. ಕೇರಳದ ಪಾಳೆಯದಲ್ಲಿ ಸಂಭ್ರಮ ಮುಗಿಲುಮುಟ್ಟಿತು. ಗುಜರಾತ್ ಬಳಗದಲ್ಲಿ ಮಂಕು ಕವಿಯಿತು.
ಕ್ವಾರ್ಟರ್‌ಫೈನಲ್‌ನಲ್ಲಿಯೂ ಕೇರಳ ತಂಡವು ಜಮ್ಮು–ಕಾಶ್ಮೀರದ ಎದುರು 1 ರನ್ ನಿಂದ ಇನಿಂಗ್ಸ್ ಮುನ್ನಡೆ ಸಾಧಿಸಿತ್ತು.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ಕೇರಳ: 187 ಓವರ್‌ಗಳಲ್ಲಿ 457. ಗುಜರಾತ್: 174.4 ಓವರ್‌ಗಳಲ್ಲಿ 455 (ಜಯಮೀತ್ ಪಟೇಲ್ 79, ಸಿದ್ಧಾರ್ಥ್ ದೇಸಾಯಿ 30, ಅರ್ಜನ್ ನಾಗವಸವಲ್ಲಾ 10, ಪ್ರಿಯಜೀತ್ ಸಿಂಗ್ ಜಡೇಜ ಔಟಾಗದೆ 3, ಜಲಜ್ ಸಕ್ಸೆನಾ 149ಕ್ಕೆ4, ಆದಿತ್ಯ ಸರವಟೆ 111ಕ್ಕೆ4)
ಫಲಿತಾಂಶ: ಡ್ರಾ. ಮೊದಲ ಇನಿಂಗ್ಸ್‌ನಲ್ಲಿ 2 ರನ್ ಮುನ್ನಡೆ ಗಳಿಸಿದ ಕೇರಳ ಫೈನಲ್‌ಗೆ.
ಪಂದ್ಯದ ಆಟಗಾರ: ಮೊಹಮ್ಮದ್ ಅಜರುದ್ದೀನ್.
ವಿದರ್ಭ vs ಮುಂಬೈ
ನಾಗಪುರ: ವಿದರ್ಭ ಎದುರಿನ ಸೆಮಿಫೈನಲ್‌ನಲ್ಲಿ ಬೆಟ್ಟದಂತಹ ಗುರಿಯನ್ನು ಬೆನ್ನಟ್ಟಿದ್ದ ಮುಂಬೈ ತಂಡದ ಹೋರಾಟಕ್ಕೆ ಫಲ ಸಿಗಲಿಲ್ಲ.
ಮುಂಬೈ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ (66; 124ಎ 4X5 6X1) ಅವರು ಅರ್ಧಶತಕ ಗಳಿಸಿದರು. ಅಕ್ಷಯ್ ವಾಡಕರ್ ನಾಯಕತ್ವದ ವಿದರ್ಭ ತಂಡವು 80 ರನ್‌ಗಳಿಂದ ಜಯಿಸಿ ಫೈನಲ್ ಪ್ರವೇಶಿಸಿತು.
ಇದೇ 26ರಂದು ಪ್ರಶಸ್ತಿಗಾಗಿ ಆರಂಭವಾಗುವ ಅಂತಿಮ ಹಣಾಹಣಿಯಲ್ಲಿ ವಿದರ್ಭವು ಕೇರಳವನ್ನು ಎದುರಿಸಲಿದೆ.
ನಾಲ್ಕರ ಘಟ್ಟದ ಪಂದ್ಯದಲ್ಲಿ 406 ಪಂದ್ಯಗಳ ಗೆಲುವಿನ ಗುರಿಯನ್ನು ಮುಂಬೈ ಬೆನ್ನಟ್ಟಿತ್ತು. ಆದರೆ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಮತ್ತೆ ವೈಫಲ್ಯ ಅನುಭವಿಸಿದರು. ಆಕಾಶ್ ಆನಂದ್ ಬಿಟ್ಟರೆ ಉಳಿದವರು ಹೆಚ್ಚು ಹೊತ್ತು ನಿಲ್ಲಲಿಲ್ಲ. ಎಂದಿನಂತೆ ಕೆಳಕ್ರಮಾಂಕದ ಬ್ಯಾಟರ್‌ಗಳೇ ಹೆಚ್ಚು ಹೋರಾಟ ಮಾಡಿದರು. ಅದರಲ್ಲೂ ಶಾರ್ದೂಲ್ ಠಾಕೂರ್ ಹಾಗೂ ಶಮ್ಸ್ ಮುಲಾನಿ (46; 94ಎ) ತಂಡದ ಗೆಲುವಿಗಾಗಿ ಹೋರಾಡಿದರು.
ಕೊನೆಯಲ್ಲಿ ಮೋಃಇತ್ ಅವಸ್ಥಿ (34; 43ಎ) ಮತ್ತು ರಾಯ್ಸಟನ್ ದಿಯಾಸ್ (ಔಟಾಗದೆ 23) ಅವರ ಆಟವೂ ಗಮನ ಸೆಳೆಯಿತು. ಆದರೆ ವಿದರ್ಭ ತಂಡದ ಹರ್ಷ ದುಬೆ (127ಕ್ಕೆ5) ಅವರ ದಾಳಿಯ ಮುಂದೆ ಮುಂಬೈ ಕುಸಿಯಿತು. 42 ಬಾರಿಯ ಚಾಂಪಿಯನ್ ತಂಡವು ನಾಲ್ಕರ ಘಟ್ಟದಲ್ಲಿಯೇ ಹೊರಬಿತ್ತು.
ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್: ವಿದರ್ಭ 383, ಮುಂಬೈ: 270.
ಎರಡನೇ ಇನಿಂಗ್ಸ್: ವಿದರ್ಭ 292. ಮುಂಬೈ: 97.5 ಓವರ್‌ಗಳಲ್ಲಿ 325 (ಆಕಾಶ್ ಆನಂದ್ 39 ಶಮ್ಸ್ ಮುಲಾನಿ 46 ಶಾರ್ದೂಲ್ ಠಾಕೂರ್ 66 ತನುಷ್ ಕೋಟ್ಯಾನ್ 26 ಮೋಹಿತ್ ಅವಸ್ಥಿ 34 ರಾಯಸ್ಟನ್ ದಿಯಾಸ್ ಔಟಾಗದೆ 23 ಹರ್ಷ ದುಬೆ 127ಕ್ಕೆ5 ಯಶ್ ಠಾಕೂರ್ 43ಕ್ಕೆ2 ಪಾರ್ಥ್ ರೇಖಡೆ 70ಕ್ಕೆ2)
ಫಲಿತಾಂಶ: ವಿದರ್ಭ ತಂಡಕ್ಕೆ 80 ರನ್ ಜಯ. ಪಂದ್ಯದ ಆಟಗಾರ: ಯಶ್ ರಾಥೋಡ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.