
ಜಮ್ಮು ಮತ್ತು ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಅವರು ಕರ್ನಾಟಕದ ಕೆ.ವಿ.ಅನೀಶ್
ಅವರಿಗೆ ಡಿಚ್ಚಿ ಹೊಡೆದು ಮಾತಿನ ಚಕಮಕಿಗೆ ಮುಂದಾದಾಗ ಮಯಂಕ್ ಅಗರವಾಲ್ ಮಧ್ಯಪ್ರವೇಶಿಸಿದರು
ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ: ಬುಧವಾರ ಬೆಳಿಗ್ಗೆ ಸೂರ್ಯನ ತಾಪ ಏರುತ್ತಿದ್ದ ಹೊತ್ತಿನಲ್ಲಿ ಕರ್ನಾಟಕ ತಂಡದ ಕ್ಷೇತ್ರರಕ್ಷಕ ನಿಗೆ ಡಿಚ್ಚಿ ಹೊಡೆದ ಜಮ್ಮು–ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಬಿಸಿ ಚರ್ಚೆಗೆ ಗ್ರಾಸವಾದರು. ಸಂಜೆ ಮಳೆ–ಮಂದಬೆಳಕಿನಿಂದ ಆಟ ಸ್ಥಗಿತವಾದ ನಂತರ ಪಾರಸ್ ತಮ್ಮ ಕೃತ್ಯಕ್ಕೆ ದಂಡ ತೆತ್ತರು.
ಆದರೂ ಪ್ರವಾಸಿ ತಂಡದಲ್ಲಿ ಸಂತಸ ಮತ್ತು ಆತ್ಮವಿಶ್ವಾಸಗಳು ಮನೆಮಾಡಿದ್ದವು. ಏಕೆಂದರೆ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕರ್ನಾಟಕದ ಎದುರು ಕಾಶ್ಮೀರ ತಂಡವು 156 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 527 ರನ್ ಗಳಿಸಿದೆ. ಇದರಲ್ಲಿ ಡೋಗ್ರಾ (70; 166ಎಸೆತ, 4X8) ಅರ್ಧಶತಕವೂ ಸೇರಿದೆ. ಪ್ರವಾಸಿ ತಂಡದ ಒಟ್ಟು ಐವರು ಬ್ಯಾಟರ್‌ಗಳು ಅರ್ಧಶತಕ ಗಳಿಸಿದರು. ಶುಭಂ ಪುಂದಿರ ಮಂಗಳವಾರ ಶತಕ ದಾಖಲಿಸಿದ್ದರು.
ಇದೆಲ್ಲದರ ನಡುವೆ ಡೋಗ್ರಾ ಅವರ ಇನಿಂಗ್ಸ್ ಹಲವು ನಾಟಕೀಯ ಘಟನೆಗಳಿಗೆ ಕಾರಣವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಕಿಚ್ಚು ಹಚ್ಚಿತು. ಊಟದ ವಿರಾಮಕ್ಕೂ ಮುನ್ನ ಪ್ರಸಿದ್ಧ ಕೃಷ್ಣ (101ನೇ ಓವರ್) ಹಾಕಿದ ಎಸೆತದಲ್ಲಿ ಬೌಂಡರಿ ಗಳಿಸಿದರು. ಆ ಸಂದರ್ಭದಲ್ಲಿ ಸಿಲ್ಲಿ ಪಾಯಿಂಟ್‌ನಲ್ಲಿದ್ದ ಬದಲೀ ಫೀಲ್ಡರ್ ಕೆ.ವಿ. ಅನೀಶ್ ಬಳಿ ತೆರಳಿ ಮಾತಿನ ಚಕಮಕಿ ನಡೆಸಿದರು. ಅನೀಶ್ ಹೆಲ್ಮೆಟ್‌ಗೆ ಡೋಗ್ರಾ ಡಿಚ್ಚಿ ಹೊಡೆದರು. ಮಯಂಕ್ ಅಗರವಾಲ್ ಓಡಿ ಬಂದು ಅನೀಶ್ ಬೆಂಬಲಕ್ಕೆ ನಿಂತರು. ಪರಿಸ್ಥಿತಿ ಕೈಮೀರದಂತೆ ಅಂಪೈರ್‌ಗಳು ನೋಡಿಕೊಂಡರು. ಕರ್ನಾಟಕದ ನಾಯಕ ದೇವದತ್ತ ಪಡಿಕ್ಕಲ್ ಅಂಪೈರ್ ಬಳಿ ದೂರಿದರು.
ಮಂಗಳವಾರ ಕ್ರೀಸ್‌ಗೆ ಬಂದಿದ್ದ ಡೋಗ್ರಾ ಅವರ ಕ್ಯಾಚ್ ಕೈಚೆಲ್ಲಿ ಅನೀಶ್ ಒಂದು ಜೀವದಾನ ಕೂಡ ನೀಡಿದ್ದರು. ವೈಶಾಖ ಎಸೆತದಲ್ಲಿ ಬಲಗೈ ಹೆಬ್ಬೆರಳಿಗೆ ಪೆಟ್ಟಾಗಿದ್ದರಿಂದ ಡೋಗ್ರಾ ನಿವೃತ್ತರಾಗಿ ಪೆವಿಲಿಯನ್‌ಗೆ ಮರಳಿದ್ದರು. ಆಗ 9 ರನ್ ಗಳಿಸಿದ್ದರು.
ಎರಡನೇ ದಿನದಾಟದಲ್ಲಿ ಶುಭಂ ಮತ್ತು ಅಬ್ದುಲ್ ಸಮದ್ ಅವರು ಔಟಾದ ನಂತರ ಡೋಗ್ರಾ ಕ್ರೀಸ್‌ಗೆ ಬಂದರು. ಕನ್ಹಯ್ಯಾ ವಾಧ್ವಾನ್ (70; 109ಎ) ಅವರೊಂದಿಗೆ 110 ರನ್ ಸೇರಿಸಿದರು.
ಭೋಜನ ವಿರಾಮದ ನಂತರದ ಆಟದಲ್ಲಿ ವಿದ್ಯಾಧರ್ ಪಾಟೀಲ ಎಸೆತವೊಂದು ಡೋಗ್ರಾ ಹೆಲ್ಮೆಟ್ ತಂತಿಗೆ ತಾಗಿ ಹೋಗಿ ಸ್ಟಂಪ್ ಮುಂದೆ ಪುಟಿಯಿತು. ಅದು ಸ್ಟಿಕ್‌ಗೆ ಬಡಿಯದಂತೆ ಡೋಗ್ರಾ ಕಾಲಿನಿಂದ ತಡೆದರು. ಇದಾಗಿ 12 ಓವರ್‌ಗಳ ನಂತರ ಶ್ರೇಯಸ್ ಬೌಲಿಂಗ್‌ನಲ್ಲಿಯೂ ಅವರ ಬ್ಯಾಟ್‌ಗೆ ಬಡಿದ ಚೆಂಡು ಸ್ಟಂಪ್‌ನತ್ತ ಧಾವಿಸಿತು. ಅದನ್ನೂ ತಡೆಯಲು ಅಡ್ಡಗಾಲು ಹಾಕಿದ ಡೋಗ್ರಾ ಪ್ರಯತ್ನ ವಿಫಲವಾಯಿತು.
ಕರ್ನಾಟಕ ಬೌಲರ್‌ಗಳ ಹರಸಾಹಸ: ಒಂಬತ್ತನೇ ಬಾರಿ ರಣಜಿ ಟ್ರೋಫಿ ಜಯದ ಮೇಲೆ ಕಣ್ಣಿಟ್ಟಿರುವ ಕರ್ನಾಟಕದ ಬೌಲರ್‌ಗಳಿಗೆ ಹುಬ್ಬಳ್ಳಿ ಕ್ರೀಡಾಂಗಣದ ಪಿಚ್ ಕಠಿಣ ಪರೀಕ್ಷೆಯೊಡ್ಡಿದೆ. ಸತತ ಎರಡನೇ ದಿನವೂ ಬ್ಯಾಟರ್‌ಗಳಿಗೇ ಮಣೆ ಹಾಕಿತು.
ಭಾರತ ತಂಡದ ಆಟಗಾರ ಪ್ರಸಿದ್ಧ ಕೃಷ್ಣ ಶಾರ್ಟ್ ಪಿಚ್ ಎಸೆತಗಳು, ವಿದ್ಯಾಧರ್ ಮತ್ತು ವೈಶಾಖ ಅವರ ನಿಖರ ದಾಳಿ ಹೆಚ್ಚು ಪರಿಣಾಮ ಬೀರಲಿಲ್ಲ. ಊಟಕ್ಕೂ ಮುನ್ನ ಶುಭಂ ವಿಕೆಟ್ ಪಡೆಯುವಲ್ಲಿ ವಿದ್ಯಾಧರ್ ಹಾಗೂ ಸಮದ್ ವಿಕೆಟ್ ಉರುಳಿಸುವಲ್ಲಿ ಪ್ರಸಿದ್ಧ ಯಶಸ್ವಿಯಾದರು.
ಆದರೆ ಎರಡನೇ ಅವಧಿಯಲ್ಲಿ ಪ್ರವಾಸಿ ಬಳಗದ ಖಾತೆಗೆ 98 ರನ್‌ಗಳು ಹರಿದುಬಂದವು. ಕೊನೆಯ ಅವಧಿಯಲ್ಲಿ ಕನ್ಹಯ್ಯಾ ವಿಕೆಟ್ ಪಡೆದ ಸ್ಪಿನ್ನರ್ ಶಿಖರ್ ಶೆಟ್ಟಿ ನಿಟ್ಟುಸಿರುಬಿಟ್ಟರು. ಆದರೆ ಅರ್ಧಶತಕ ಗಳಿಸಿರುವ ಸಾಹಿಲ್ ಲೂತ್ರಾ (ಬ್ಯಾಟಿಂಗ್ 57) ಮತ್ತು ಅಬೀದ್ ಮುಷ್ತಾಕ್ (ಬ್ಯಾಟಿಂಗ್ 20) ಕ್ರೀಸ್‌ನಲ್ಲಿದ್ದಾರೆ. ಮಂದ ಬೆಳಕು ಮತ್ತು ಮಳೆಯ ಕಾರಣ 4.20ರ ವೇಳೆಗೆ ದಿನದಾಟ ಸ್ಥಗಿತವಾಯಿತು.
ರಣಜಿ ಟ್ರೋಫಿ ಫೈನಲ್‌ನಲ್ಲಿ ಕರ್ನಾಟಕದ ಕೆ.ವಿ. ಅನೀಶ್ ಅವರ ತಲೆಗೆ ಡಿಚ್ಚಿ ಹೊಡೆದ ಜಮ್ಮು–ಕಾಶ್ಮೀರ ತಂಡದ ನಾಯಕ ಪಾರಸ್ ಡೋಗ್ರಾ ಅವರಿಗೆ ದಂಡ ವಿಧಿಸಲಾಗಿದೆ.
ಪಂದ್ಯದ ಸಂಭಾವನೆಯ ಶೇ 50ರಷ್ಟು ಮೊತ್ತವನ್ನು ಅವರು ದಂಡರೂಪದಲ್ಲಿ ನೀಡಬೇಕು. ಈ ಕುರಿತು ರೆಫರಿ ವಿ.ನಾರಾಯಣನ್ ಕುಟ್ಟಿ ಅವರು ಪಂದ್ಯವು ಪೂರ್ಣಗೊಂಡ ನಂತರ ಅಧಿಕೃತ ಹೇಳಿಕೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.
41 ವರ್ಷದ ಡೋಗ್ರಾ ಅವರ ನಡವಳಿಕೆ ಕ್ರಿಕೆಟ್ ನಿಯಮದ ಉಲ್ಲಂಘನೆ ಎನ್ನಲಾಗಿದೆ.
‘ಆಟದಲ್ಲಿ ಕಾವೇರಿದ ವಾತಾವರಣದಲ್ಲಿ ಇವೆಲ್ಲವೂ ಸಾಮಾನ್ಯ ಸಂಗತಿಗಳು. ಅದು ಅಷ್ಟಕ್ಕೆ ಮುಗಿದ ವಿಷಯ’ ಎಂದು ದಿನದಾಟದ ನಂತರ ಡೋಗ್ರಾ ಸುದ್ದಿಗಾರರಿಗೆ ಹೇಳಿದರು. ಡೋಗ್ರಾ ನಡವಳಿಕೆಯು ಸಾಮಾಜಿಕ ಜಾಲತಾಣ ಗಳಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.