ADVERTISEMENT

ರಣಜಿ ಟ್ರೋಫಿ: ಇಂದು ಕರ್ನಾಟಕ–ಕೇರಳ ಮುಖಾಮುಖಿ; ಮಯಂಕ್ ಪಡೆಗೆ ಮೊದಲ ಜಯದ ಕನಸು

ರಣಜಿ ಟ್ರೋಫಿ ಪಂದ್ಯ ಇಂದಿನಿಂದ: ಕರ್ನಾಟಕ –ಕೇರಳ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 23:30 IST
Last Updated 31 ಅಕ್ಟೋಬರ್ 2025, 23:30 IST
ಕರುಣ್ ನಾಯರ್ ಕಸರತ್ತು   –ಪಿಟಿಐ ಚಿತ್ರ
ಕರುಣ್ ನಾಯರ್ ಕಸರತ್ತು   –ಪಿಟಿಐ ಚಿತ್ರ   

ಮಂಗಳಪುರಂ (ಕೇರಳ): ಕರ್ನಾಟಕ ರಾಜ್ಯೋತ್ಸವ ದಿನವಾದ ಶನಿವಾರ ಮಯಂಕ್ ಅಗರವಾಲ್ ಬಳಗವು ರಣಜಿ ಟ್ರೋಫಿ ಟೂರ್ನಿಯ ಮೂರನೇ ಪಂದ್ಯದಲ್ಲಿ ಮೊದಲ ಗೆಲುವಿನ ಕನಸಿನೊಂದಿಗೆ ಕಣಕ್ಕಿಳಿಯಲಿದೆ. ಕೇರಳ ತಂಡವನ್ನು ಎದುರಿಸಲಿದೆ. 

ಬಿ ಗುಂಪಿನಲ್ಲಿ ಕರ್ನಾಟಕ ತಂಡವು ಆಡಿರುವ ಮೊದಲೆರಡು ಪಂದ್ಯಗಳೂ ಡ್ರಾ ಆಗಿದ್ದವು.  ರಾಜ್‌ಕೋಟ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ 4 ರನ್‌ಗಳ ಇನಿಂಗ್ಸ್‌ ಹಿನ್ನಡೆ ಅನುಭವಿಸಿದ್ದು ಒಂದು ಅಂಕ ಮಾತ್ರ ಪಡೆದಿತ್ತು. ಶಿವಮೊಗ್ಗದಲ್ಲಿ ಗೋವಾ ವಿರುದ್ಧ ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿದ್ದ ಆತಿಥೇಯ ತಂಡವು ಮೂರು ಪಾಯಿಂಟ್ ಪಡೆದಿತ್ತು. ಆದ್ದರಿಂದ ಮಯಂಕ್ ಬಳಗವು ಟೂರ್ನಿಯಲ್ಲಿ ಇನ್ನೂ ಜಯದ ಖಾತೆ ತೆರೆದಿಲ್ಲ. 

ಅನುಭವಿ ಬ್ಯಾಟರ್ ಕರುಣ್ ನಾಯರ್ ಮತ್ತು ಆಲ್‌ರೌಂಡರ್ ಶ್ರೇಯಸ್ ಗೋಪಾಲ್ ಅವರಿಬ್ಬರೂ ಎರಡೂ ಪಂದ್ಯಗಳಲ್ಲಿ ತಮ್ಮ ಸಾಮರ್ಥ್ಯ ಮೆರೆದಿದ್ದಾರೆ. ಶಿವಮೊಗ್ಗದಲ್ಲಿ ಕರುಣ್ ಅಮೋಘ ಶತಕ ದಾಖಲಿಸಿದ್ದರು. ಶ್ರೇಯಸ್ ತಮ್ಮ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಉಪಯುಕ್ತ ಕಾಣಿಕೆ ನೀಡಿದ್ದಾರೆ. ಆದರೆ ಉಳಿದ ಬ್ಯಾಟರ್‌ ಮತ್ತು ಬೌಲರ್‌ಗಳ ಪ್ರದರ್ಶನ ಸ್ಥಿರವಾಗಿಲ್ಲ. 

ADVERTISEMENT

ಮೊದಲ ಪಂದ್ಯದಲ್ಲಿ ಮಯಂಕ್ ಅರ್ಧಶತಕ ಹೊಡೆದಿದ್ದರು. ಅದು ಬಿಟ್ಟರೆ ದೊಡ್ಡ ಇನಿಂಗ್ಸ್ ಆಡುವಲ್ಲಿ ಅವರು ಯಶಸ್ವಿಯಾಗಿಲ್ಲ. ನಿಕಿನ್ ಜೋಸ್ ಕೂಡ ವೈಫಲ್ಯದ ಹಾದಿಯಿಂದ ಹೊರಬರಲು ಪರದಾಡುತ್ತಿದ್ದಾರೆ. ಮಯಂಕ್ ಮತ್ತು ನಿಕಿನ್ ದೀರ್ಘ ಜೊತೆಯಾಟದ ಮೂಲಕ ಉತ್ತಮ ಆರಂಭ ನೀಡಿದರೆ ಮುಂದಿನ ಕ್ರಮಾಂಕದ ಬ್ಯಾಟರ್‌ಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಏಕೆಂದರೆ; ಅನುಭವಿ ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ಭಾರತ ಎ ತಂಡದಲ್ಲಿ ಆಡುತ್ತಿದ್ದಾರೆ.  ಇದರಿಂದಾಗಿ ಕರುಣ್ ಮೇಲೆ ಒತ್ತಡ ಹೆಚ್ಚಿದೆ. 

ಯುವಪೀಳಿಗೆಯ ಬ್ಯಾಟರ್‌ಗಳಾದ ಕೆ.ಎಲ್. ಶ್ರೀಜಿತ್ ಮತ್ತು ಆರ್. ಸ್ಮರಣ್ ಅವರು ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲು ಲಯಕ್ಕೆ ಮರಳಬೇಕಿದೆ. ಹೋದ ವರ್ಷದ ರಣಜಿ ಋತುವಿನಲ್ಲಿ ಸ್ಮರಣ್ ‘ಸ್ಮರಣೀಯ’ ಆಟವಾಡಿದ್ದರು. ಅಭಿನವ್ ಮನೋಹರ್ ಕೂಡ ತಮಗೆ ಅವಕಾಶವನ್ನು ಬಳಸಿಕೊಂಡರೆ ತಂಡದ ಬ್ಯಾಟಿಂಗ್ ಬಲ ಇಮ್ಮಡಿಸುವುದು ಖಚಿತ. 

ಶಿವಮೊಗ್ಗದಲ್ಲಿ ಐದು ವಿಕೆಟ್ ಪಡೆದು ಮಿಂಚಿದ ವಿದ್ವತ್ ಕಾವೇರಪ್ಪ ಮಂಗಳಪುರಂ ಅಂಗಳದಲ್ಲಿಯೂ ತಮ್ಮ ಭುಜಬಲ ಮೆರೆಯುವ ನಿರೀಕ್ಷೆ ಮೂಡಿಸಿದ್ದಾರೆ. ಅವರಿಗೆ ಎಡಗೈ ವೇಗಿ ಅಭಿಲಾಷ್ ಶೆಟ್ಟಿ ಮತ್ತು ವೈಶಾಖ ವಿಜಯಕುಮಾರ್ ಅವರು ವಿದ್ವತ್ ಜೊತೆಗೆ ಹೊಣೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ.  ವೇಗದ ಬೌಲಿಂಗ್ ಆಲ್‌ರೌಂಡರ್ ಯಶೋವರ್ಧನ್ ಪರಂತಾಪ್ ಸ್ಥಾನ ಪಡೆದರೆ ಸ್ಪಿನ್ ವಿಭಾಗವನ್ನು ಶ್ರೇಯಸ್ ಏಕಾಂಗಿಯಾಗಿ ಮುನ್ನಡೆಸುವ ಸಾಧ್ಯತೆ ಇದೆ. ಒಂದೊಮ್ಮೆ ಎರಡನೇ ಸ್ಪಿನ್ನರ್ ಸ್ಥಾನ ಪಡೆದರೆ ಯಶೋವರ್ಧನ್ ವಿಶ್ರಾಂತಿ ಪಡೆಯಬಹುದು. 

ಕೇರಳ ತಂಡದ ಬ್ಯಾಟರ್‌ಗಳಾದ ಸಲ್ಮಾನ್ ನಜೀರ್, ಮೊಹಮ್ಮದ್ ಅಜರುದ್ಧೀನ್, ಅಂಕಿತ್ ಶರ್ಮಾ ಮತ್ತು ಕುನ್ನುಮಾಳ್ ಅವರನ್ನು ಕಟ್ಟಿಹಾಕುವುದು ಬೌಲರ್‌ಗಳ ಮುಂದಿರುವ ಪ್ರಮುಖ ಸವಾಲು. ತಂಡದ ವಿಕೆಟ್‌ಕೀಪರ್–ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಆಡುತ್ತಿರುವ ಭಾರತ ತಂಡದಲ್ಲಿದ್ದಾರೆ. ಆದ್ದರಿಂದ ಕೇರಳ ಬ್ಯಾಟಿಂಗ್ ಸ್ವಲ್ಪ ಮಂಕಾಗಿದೆ. ಅಲ್ಲದೇ ಈ ವರ್ಷ ಜಲಜ್ ಸಕ್ಸೆನಾ ಇಲ್ಲದ ಕಾರಣ ತಂಡದ ಬೌಲಿಂಗ್ ವಿಭಾಗವೂ ಕಠಿಣ ಸವಾಲು ಎದುರಿಸುತ್ತಿದೆ.

ಕೇರಳ ತಂಡವು ಮಹಾರಾಷ್ಟ್ರ ಮತ್ತು ಪಂಜಾಬ್ ತಂಡಗಳ ಎದುರಿನ ಪಂದ್ಯಗಳನ್ನು ಡ್ರಾ ಮಾಡಿಕೊಂಡು ಕೇವಲ ಎರಡು ಅಂಕ ಪಡೆದಿದೆ. ಅದರಿಂದಾಗಿ ಮೇಲ್ನೋಟಕ್ಕೆ ಕರ್ನಾಟಕವು ಕೇರಳಕ್ಕಿಂತ ಬಲಾಢ್ಯವಾಗಿ ಕಾಣುತ್ತಿದೆ. 

ಪಂದ್ಯ ಆರಂಭ: ಬೆಳಿಗ್ಗೆ  9.30

ಶ್ರೇಯಸ್ ಗೋಪಾಲ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.