
ಯಶಸ್ವಿ ಜೈಸ್ವಾಲ್
(ಬಿಸಿಸಿಐ ಚಿತ್ರ)
ಮುಂಬೈ: ನಾಯಕ ಶಾರ್ದೂಲ್ ಠಾಕೂರ್ ಮತ್ತು ಭಾರತ ತಂಡದ ಆರಂಭ ಆಟಗಾರ ಯಶಸ್ವಿ ಜೈಸ್ವಾಲ್ ಅವರು ಕರ್ನಾಟಕ ವಿರುದ್ಧ ಇದೇ 6ರಿಂದ ನಡೆಯಲಿರುವ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮುಂಬೈ ತಂಡಕ್ಕೆ ಮರಳಿದ್ದಾರೆ.
ಮುಂಬೈ ಡಿ ಗುಂಪಿನಲ್ಲಿ ನಾಲ್ಕು ಗೆಲುವು ಮತ್ತು ಮೂರು ಡ್ರಾಗಳೊಂದಿಗೆ ಅಗ್ರಸ್ಥಾನ ಪಡೆದಿತ್ತು. ಕರ್ನಾಟಕ ತಂಡ ಭಾನುವಾರ ನಡೆದ ‘ಎ’ ಗುಂಪಿನ ಕೊನೆಯ ಪಂದ್ಯದಲ್ಲಿ ಪಂಜಾಬ್ ತಂಡದ ಮೇಲೆ ರೋಚಕ ಜಯಗಳಿಸಿ ಎರಡನೇ ಸ್ಥಾನ ಪಡೆಯುವಲ್ಲಿ ಯಶಸ್ವಿ ಆಗಿತ್ತು.
ಎಂಟರ ಘಟ್ಟದ ಪಂದ್ಯ ಎಂಸಿಎ– ಬಿಕೆಸಿ ಮೈದಾನದಲ್ಲಿ 6 ರಿಂದ 10ರವರೆಗೆ ನಡೆಯಲಿದೆ. ವಾಂಖೆಡೆ ಕ್ರೀಡಾಂಗಣ ಟಿ20 ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.
ಇದು ಈ ಋತುವಿನಲ್ಲಿ ಜೈಸ್ವಾಲ್ ಅವರು ಆಡಲಿರುವ ಎರಡನೆ ರಣಜಿ ಪಂದ್ಯವಾಗಲಿದೆ. ರಾಜಸ್ಥಾನ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಿದ್ದರು. ಅವರು ತಮ್ಮ ಲಭ್ಯತೆ ಖಚಿತಪಡಿಸದ ಕಾರಣ ಮುಂಬೈ ಕ್ರಿಕೆಟ್ ಸಂಸ್ಥೆ ಅವರನ್ನು ಆಯ್ಕೆಗೆ ಪರಿಗಣಿಸಿರಲಿಲ್ಲ. ಟಿ20 ವಿಶ್ವಕಪ್ ತಂಡದಲ್ಲಿ ಜೈಸ್ವಾಲ್ ಸ್ಥಾನ ಪಡೆದಿಲ್ಲ.
ವಿಜಯ್ ಹಜಾರೆ ಟ್ರೋಫಿ ವೇಳೆ ಆದ ಗಾಯದಿಂದಾಗಿ ಖಾಯಂ ನಾಯಕ ಠಾಕೂರ್ ಅವರು ರಣಜಿ ಆಡಿರಲಿಲ್ಲ. ಸಿದ್ದೇಶ್ ಲಾಡ್ ಅವರು ತಂಡವನ್ನು ಮುನ್ನಡೆಸಿದ್ದರು. ದೆಹಲಿ ವಿರುದ್ಧ ಕೊನೆಯ ಲೀಗ್ ಪಂದ್ಯದ ವೇಳೆ ಠಾಕೂರ್ ಅವರು ನೆಟ್ಸ್‌ನಲ್ಲಿ ಬೌಲಿಂಗ್ ನಡೆಸಿದ್ದರು.
ಶಾರ್ದೂಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಮುಶೀರ್ ಖಾನ್, ಸರ್ಫರಾಜ್ ಖಾನ್, ಸಿದ್ದೇಶ್ ಲಾಡ್, ಅಖಿಲ್ ಹೆರವಾಡಕರ್, ಆಕಾಶ್ ಆನಂದ್ (ವಿಕೆಟ್ ಕೀಪರ್), ಹಾರ್ದಿಕ್ ತಮೋರೆ (ವಿಕೆಟ್ ಕೀಪರ್), ಸಾಯಿರಾಜ್ ಪಾಟೀಲ್, ಶಮ್ಸ್ ಮುಲಾನಿ, ತನುಶ್ ಕೋಟ್ಯಾನ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ಥಿ, ಓಂಕಾರ್ ತರ್ಮಲೆ, ದಿವ್ಯಾಂಶ್ ಸಕ್ಸೇನಾ, ಸೂರ್ಯಾಂಶ್ ಶೆಡ್ಗೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.