ADVERTISEMENT

ಅನುಜ್ ರಾವತ್ ಟೀಮ್ ಇಂಡಿಯಾದ ಭವಿಷ್ಯದ ತಾರೆ: ಡುಪ್ಲೆಸಿ ಗುಣಗಾನ

ಪಿಟಿಐ
Published 10 ಏಪ್ರಿಲ್ 2022, 12:59 IST
Last Updated 10 ಏಪ್ರಿಲ್ 2022, 12:59 IST
ಅನುಜ್ ರಾವತ್
ಅನುಜ್ ರಾವತ್   

ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಂದ್ಯದಿಂದ ಪಂದ್ಯಕ್ಕೆ ಉತ್ತಮ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ಆರಂಭಿಕ ಬ್ಯಾಟರ್ ಅನುಜ್ ರಾವತ್ ಬಗ್ಗೆ ನಾಯಕ ಫಫ್ ಡುಪ್ಲೆಸಿ ಗುಣಗಾನ ಮಾಡಿದ್ದಾರೆ.

22 ವರ್ಷದ ಈ ಉದಯೋನ್ಮಖ ಪ್ರತಿಭೆಯನ್ನು ಹಾಡಿ ಹೊಗಳಿರುವ ಡುಪ್ಲೆಸಿ, ಟೀಮ್ ಇಂಡಿಯಾದ ಭವಿಷ್ಯದ ತಾರೆ ಎಂದು ನುಡಿದಿದ್ದಾರೆ.

ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾವತ್ ಕೇವಲ 47 ಎಸೆತಗಳಲ್ಲಿ 66 ರನ್ ಗಳಿಸಿದ್ದರು. ಅಲ್ಲದೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಉತ್ತಮ ಬದ್ಧತೆಯೊಂದಿಗೆ ಅತ್ಯುತ್ತಮವಾಗಿ ಆಡುತ್ತಿರುವ ರಾವತ್, ಭವಿಷ್ಯದ ತಾರೆಯಾಗಿ ಮೂಡಿಬರುತ್ತಿದ್ದಾರೆ ಎಂದು ಹೇಳಿದ್ದಾರೆ.

ಉತ್ತರಾಖಂಡದ ರಾಮನಗರದ ರೈತನ ಮಗನಾಗಿರುವ ರಾವತ್, 2021ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯ ಆಡಿದರೂ 'ಗೋಲ್ಡನ್ ಡಕ್' ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದರು.

2017-18ರ ಸಾಲಿನಲ್ಲಿ ರಣಜಿ ಟ್ರೋಫಿಯಲ್ಲಿ ಡೆಲ್ಲಿ ಪರ ಪದಾರ್ಪಣೆ ಮಾಡಿದ್ದ ಅವರು, ನಂತರದ ವರ್ಷದಲ್ಲಿ ಚೊಚ್ಚಲ ಶತಕ ಗಳಿಸಿದ್ದರು.

ಕಳೆದ ಸೈಯದ್ ಮುಷ್ತಾಕ್ ಅಲಿ ದೇಶೀಯ ಟ್ವೆಂಟಿ-20 ಟೂರ್ನಿಯಲ್ಲಿ ದೆಹಲಿ ಪರ ಐದು ಇನ್ನಿಂಗ್ಸ್‌ಗಳಲ್ಲಿ 15 ಬೌಂಡರಿ ಹಾಗೂ 10 ಸಿಕ್ಸರ್ ಸಿಡಿಸಿದ್ದರು.

ವರ್ಷಾರಂಭದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ₹3.4 ಕೋಟಿ ತೆತ್ತು ರಾವತ್ ಅವರನ್ನು ಆರ್‌ಸಿಬಿ ತಂಡವು ಖರೀದಿಸಿತ್ತು.

ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿರುವುದು ಹಾಗೂ ವಿರಾಟ್ ಕೊಹ್ಲಿ ಹಾಗೂ ಫಫ್ ಡುಪ್ಲೆಸಿ ಜೊತೆ ಆಡಲು ಸಾಧ್ಯವಾಗಿರುವುದಕ್ಕೆ ರಾವತ್ ಅತೀವ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.