ADVERTISEMENT

IPL Final | ಮುಗಿಲುಮುಟ್ಟಿದ ಹುಮ್ಮಸ್ಸು: ಅಹಮದಾಬಾದಿಗೆ ಹೊರಟ RCB ಅಭಿಮಾನಿಗಳು

​ಪ್ರಜಾವಾಣಿ ವಾರ್ತೆ
Published 2 ಜೂನ್ 2025, 2:08 IST
Last Updated 2 ಜೂನ್ 2025, 2:08 IST
<div class="paragraphs"><p>ಆರ್‌ಸಿಬಿ ಅಭಿಮಾನಿಗಳ ಸಂಭ್ರಮ&nbsp; </p></div>

ಆರ್‌ಸಿಬಿ ಅಭಿಮಾನಿಗಳ ಸಂಭ್ರಮ 

   

 –ಪ್ರಜಾವಾಣಿ ಸಂಗ್ರಹ ಚಿತ್ರ

ಬೆಂಗಳೂರು: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ನಾಲ್ಕನೇ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪ್ರವೇಶಿಸಿದೆ. ಕಳೆದ ಮೂರು ಬಾರಿಯೂ ತಂಡವು ರನ್ನರ್ಸ್ ಅಪ್ ಆಗಿತ್ತು. 18 ವರ್ಷಗಳಿಂದ ತಂಡವು ಒಂದು ಸಲವೂ ಚಾಂಪಿಯನ್ ಆಗಿಲ್ಲ. ಆದರೆ ಈ ಬಾರಿ ‘ಕಪ್ ಆರ್‌ಸಿಬಿಯದ್ದೇ’  ಎಂಬ ವಿಶ್ವಾಸದಲ್ಲಿ ತಂಡದ ಆಭಿಮಾನಿಗಳಿದ್ದಾರೆ.

ADVERTISEMENT

ತಂಡವು ಫೈನಲ್‌ನಲ್ಲಿ ಜಯಿಸಲಿ ಎಂದು ತಮಗೆ ತಿಳಿದ ಬಗೆಯಲ್ಲಿ ಪ್ರಾರ್ಥನೆ, ಹರಕೆ ಇತ್ಯಾದಿ ಮಾಡುತ್ತಿದ್ದಾರೆ. ಬೆಂಗಳೂರಷ್ಟೇ ಅಲ್ಲ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿಯೂ ಆರ್‌ಸಿಬಿ ಜ್ವರ ಹೆಚ್ಚುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ವಿಡಿಯೊಗಳು ಗಮನ ಸೆಳೆಯುತ್ತಿವೆ. 

ಬೆಂಗಳೂರಿನಲ್ಲಿ ಆಟೋ ಚಾಲಕರಾಗಿರುವ ಪರಶುರಾಮ್ ಶೆಟ್ಟಿ ಅವರು ಆರ್‌ಸಿಬಿಯ ಅಪ್ಪಟ ಅಭಿಮಾನಿ. ಆರ್‌ಸಿಬಿ ತಂಡದ ಜೆರ್ಸಿ ಧರಿಸಿ ಬಂದವರಿಗೆ ತಮ್ಮ ಆಟೋದಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ. ಅವರ ಸ್ನೇಹಿತ ಅಜ್ಮಲ್ ಹುಸೇನ್ ಕೂಡ ಇದೇ ರೀತಿಯ ಅಭಿಯಾನ ನಡೆಸಿದ್ದಾರೆ.

‘ನಾನು ಹಲವು ವರ್ಷಗಳಿಂದ  ಆರ್‌ಸಿಬಿ ಅಭಿಮಾನಿ. ಈ ವರ್ಷವು ನಮಗೆ ಶುಭದಾಯಕವಾಗಿದೆ. ಆರ್‌ಸಿಬಿ ಉನ್ನತ ಫಾರ್ಮ್‌ನಲ್ಲಿದೆ. ಈ ಸಲ ಕಪ್ ನಮ್ದೇ. ನನಗೆ ಮೂವರು ಮಕ್ಕಳಿದ್ದಾರೆ. ಅವರೂ ಕೂಡ ತಂಡದ ಗೆಲುವಿನ ಭರವಸೆಯಲ್ಲಿದ್ದಾರೆ’ ಎಂದು ಪರಶುರಾಮ್ ಇನ್ಸ್ಟಾಗ್ರಾಮ್ ವಿಡಿಯೊದಲ್ಲಿ ಹೇಳಿದ್ದಾರೆ. ತಮ್ಮ ಆಟೋದಲ್ಲಿ ಫ್ರೀ ರೈಡ್‌ ಬಗ್ಗೆ ಪ್ಲೇಕಾರ್ಡ್ ಕೂಡ ಹಿಡಿದಿದ್ದಾರೆ. 

ನೇಪಾಳದಲ್ಲಿ ಸಮಗ್ರ ಅಧಿಕಾರಿ ಎಂಬುವವರು ಆರ್‌ಸಿಬಿ ಫ್ಯಾನ್ ಕ್ಲಬ್‌ ಸ್ಥಾಪಿಸಿದ್ದಾರೆ. ಈ ಕ್ಲಬ್‌ನ ಕೆಲವು ಸದಸ್ಯರು ಒಂದುಗೂಡಿ ಅಹಮದಾಬಾದಿಗೆ ಫೈನಲ್‌ ವೀಕ್ಷಿಸಲು ತೆರಳುತ್ತಿದ್ದಾರೆ. 

'ಫೈನಲ್ ಪಂದ್ಯ ವೀಕ್ಷಿಸಲು ನನಗೆ ಹೋಗಲಾಗುತ್ತಿಲ್ಲ. ನಮ್ಮ ಕೆಲವು ಸದಸ್ಯರು ಹೋಗುತ್ತಿದ್ದಾರೆ. ಉಳಿದಂತೆ ನೇಪಾಳದಲ್ಲಿ ಪಂದ್ಯವನ್ನು ವೀಕ್ಷಿಸಲು ಸ್ಕ್ರೀನಿಂಗ್ ವ್ಯವಸ್ಥೆ ಮಾಡುತ್ತಿದ್ದೇವೆ. ಬೆಂಗಳೂರಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯ ವೀಕ್ಷಣೆಗೆ ನಾವು ಹೋಗಿದ್ದೆವು. ಅದೊಂದು ಅದ್ಭುತ ಅನುಭವ. ಅಲ್ಲಿಯ ಆರ್‌ಸಿಬಿ ಫ್ಯಾನ್ ಆರ್ಮಿ ಮತ್ತು ನಮ್ಮ ಟೀಮ್ ಆರ್‌ಸಿಬಿ ಕ್ಲಬ್‌ಗಳು ನಮಗೆ ಬಹಳಷ್ಟು ಸಹಾಯ ಮಾಡಿದವು. ಅದೊಂದು ಸುಂದರ ಅನುಭವ’ ಎಂದು ಸಮಗ್ರ ಅಧಿಕಾರಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.  

ದೆಹಲಿಯಲ್ಲಿರುವ ಸೂಪರ್‌ ಫ್ಯಾನ್ ಅಭಿಮನ್ಯು ರಾವ್‌ ಅವರು ಆರ್‌ಸಿಬಿ ತಂಡವು ಲೀಗ್ ಹಂತದಲ್ಲಿ ಚೆನ್ನೈ ವಿರುದ್ಧ ಗೆದ್ದಾಗ ಸುಮಾರು ಒಂದು ಸಾವಿರ ಜನರಿಗೆ ಊಟ ಹಾಕಿಸಿದ್ದರು. ‘ನಾವು 500 ಜನರಿಗೆ ಊಟ ಕೊಡಿಸುವ ಯೋಜನೆ ಮಾಡಿದ್ದೆವು. ಆದರೆ ಅದು ಹಬ್ಬವಾಗಿ ಪರಿವರ್ತನೆಯಾಯಿತು. ಜನರು ಹೆಚ್ಚು ಸೇರಿದ್ದರು. ಆರ್‌ಸಿಬಿ ಫೈನಲ್ ಗೆದ್ದರೆ, ಇದರ ದುಪ್ಪಟ್ಟು ಸಂಖ್ಯೆಯ ಜನರಿಗೆ ಊಟದ ವ್ಯವಸ್ಥೆ ಮಾಡುತ್ತೇವೆ’ ಎಂದು ರಾವ್ ಹೇಳಿದ್ದಾರೆ. 

2009ರಲ್ಲಿ ಆರ್‌ಸಿಬಿ ಫ್ಯಾನ್ ಆರ್ಮಿ ಆರಂಭಿಸಿದ ಲೆನ್ ಅಭಿಷೇಕ್, ‘ನಮ್ಮ ಹಲವು ಸದಸ್ಯರು ಅಹಮದಾಬಾದಿಗೆ ಹೋಗುತ್ತಿದ್ದಾರೆ. ಆದರೆ ನಾನು ಬೆಂಗಳೂರಿನಲ್ಲಿ ಇರುತ್ತೇನೆ. ಅವರು ಇಲ್ಲಿ ವಿಶೇಷವಾದ ವಾತಾವರಣ ಇರುತ್ತದೆ. ಬಾವುಟ, ಬ್ಯಾನರ್‌ಗಳು ಸಿದ್ಧವಾಗಿವೆ. ಆ ದಿನ ರಾತ್ರಿ ಇಡೀ ನಗರ ಸುತ್ತುಹಾಕುವ ಯೋಜನೆ ಇದೆ’ ಎಂದಿದ್ದಾರೆ.   

ಈ ವರ್ಷ ಆರ್‌ಸಿಬಿ ತಂಡವು ತನ್ನ ಆಟಗಾರರು ಪ್ರಯಾಣಿಸುವ ಬಸ್‌ ಮೇಲೆ ಸೂಪರ್‌ಫ್ಯಾನ್ ಸುಗುಮಾರ್ ಅವರ ಚಿತ್ರವನ್ನು ಮುದ್ರಿಸಿತ್ತು. ಆ ಮೂಲಕ ಅಭಿಮಾನಿಗಳ ಬಳಗಕ್ಕೆ ಧನ್ಯವಾದ ತಿಳಿಸಿತ್ತು. 

‘ನಮ್ಮ ತಂಡದಲ್ಲಿ 25 ಸದಸ್ಯರಿದ್ದೇವೆ. ಅದರಲ್ಲಿ 20 ಮಂದಿ  ಸೋಮವಾರ ಅಹಮದಾಬಾದಿಗೆ ತೆರಳುತ್ತಿದ್ದಾರೆ. ನಾವಷ್ಟೇ ಅಲ್ಲ. ನಮ್ಮ ರಾಜ್ಯದ ಹಲವು ಕ್ಲಬ್‌ಗಳು, ಕೇರಳ, ತಮಿಳುನಾಡು ಮತ್ತಿತರ ರಾಜ್ಯಗಳಿಂದಲೂ ಅಹಮದಾಬಾದ್‌ಗೆ ಫೈನಲ್ ಪಂದ್ಯ ವೀಕ್ಷಿಸಲು ಹೋಗುತ್ತಿದ್ದಾರೆ’ ಎಂದು ನಮ್ಮ ಟೀಮ್ ಆರ್‌ಸಿಬಿ ಕ್ಲಬ್‌ನ ಪ್ರೀತಮ್ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.