ADVERTISEMENT

RCB Cares | ಅಭಿಮಾನಿಗಳೊಂದಿಗೆ ಇದ್ದೇವೆ: ಕಾಲ್ತುಳಿತದ 3ತಿಂಗಳ ಬಳಿಕ RCB ಪೋಸ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಆಗಸ್ಟ್ 2025, 6:50 IST
Last Updated 28 ಆಗಸ್ಟ್ 2025, 6:50 IST
<div class="paragraphs"><p>ಆರ್‌ಸಿಬಿ ಲೋಗೊ</p></div>

ಆರ್‌ಸಿಬಿ ಲೋಗೊ

   

ಬೆಂಗಳೂರು: ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಮೊದಲ ಬಾರಿಗೆ ಕಪ್‌ ಗೆದ್ದು ಸಂಭ್ರಮಾಚರಣೆ ನಡೆಸಿದ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಘಟನೆಯ ಬಳಿಕ ಆರ್‌ಸಿಬಿ ತಂಡ ಸಂತಾಪ ಪೋಸ್ಟ್‌ ಹಂಚಿಕೊಂಡಿತ್ತು.  ಆ ಬಳಿಕ ಇಲ್ಲಿಯವರೆಗೂ ಯಾವುದೇ ಪೋಸ್ಟ್‌ ಹಂಚಿಕೊಂಡಿರಲಿಲ್ಲ. ಈಗ ಮೂರು ತಿಂಗಳ (84 ದಿನ) ಬಳಿಕ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ಪೋಸ್ಟ್‌ನಲ್ಲಿ ‘ಆರ್‌ಸಿಬಿ ಕೇರ್ಸ್‌’ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದು, ಅಭಿಮಾನಿಗಳೊಂದಿಗೆ ಸದಾ ಇರುವುದಾಗಿ ತಂಡ ಹೇಳಿದೆ.

ADVERTISEMENT

‘ನಾವು ಪೋಸ್ಟ್ ಮಾಡಿ ಸುಮಾರು ಮೂರು ತಿಂಗಳು ಕಳೆದಿವೆ. ಇದು ನಮ್ಮ ಗೈರಲ್ಲ, ಆಳವಾದ ದುಃಖದ ಮೌನವಾಗಿತ್ತು’ ಎಂದಿದೆ.

‘ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಮತ್ತು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಜೂನ್ 4ರ ಘಟನೆ ಎಲ್ಲವನ್ನೂ ಬದಲಾಯಿಸಿತು. ಆ ದಿನದ ದುರಂತದ ನಂತರ ಕೇವಲ ನಿಶ್ಯಬ್ದ ಆವರಿಸಿತ್ತು. ಅದು ಕೇವಲ ಮೌನವಲ್ಲ ಅದು ಶ್ರದ್ಧೆಯಿಂದ ತುಂಬಿದ ಶಾಂತ ಶ್ರದ್ಧಾಂಜಲಿ. ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ ಅನೇಕ ವಿಷಯಗಳನ್ನು ಕಲಿತೆವು.  ನೋವನ್ನೇ ಶ್ರದ್ದೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದ್ದೆವು. ಅದರ ಫಲವೇ ‘ಆರ್‌ಸಿಬಿ ಕೇರ್ಸ್’.

ನಮ್ಮ ಅಭಿಮಾನಿಗಳು ಮತ್ತು ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಒಂದು ಯೋಜನೆ. ಇಂದು ನಾವು ಮರಳಿದ್ದೇವೆ, ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತ, ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ. ಆರ್‌ಸಿಬಿ ಕೇರ್ಸ್‌: ನಾವು ಸದಾ ನಿಮ್ಮೊಂದಿಗಿದ್ದೇವೆ’ ಎಂದು ಬರೆದುಕೊಂಡಿದೆ. 

ಜತೆಗೆ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಹಂಚಿಕೊಳ್ಳುತ್ತೇವೆ ಎಂದು ಹೇಳಿದೆ.

ಮೊದಲ ಬಾರಿಗೆ ಕಪ್ ಗೆದ್ದ ಖುಷಿಯಲ್ಲಿ ನಡೆದ ಸಂಭ್ರಮಾಚರಣೆ ವೇಳೆ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದರು. ಆ ಬಳಿಕ ಆರ್‌ಸಿಬಿ ಮೃತರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.