ADVERTISEMENT

Test Championship | 10ನೇ ಪಂದ್ಯಶ್ರೇಷ್ಠ, 400 ಬೌಂಡರಿ: ದಾಖಲೆ ಬರೆದ ಹೆಡ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜೂನ್ 2025, 4:55 IST
Last Updated 29 ಜೂನ್ 2025, 4:55 IST
<div class="paragraphs"><p>ಆಸ್ಟ್ರೇಲಿಯಾದ ಟ್ರಾವಿಸ್‌ ಹೆಡ್‌</p></div>

ಆಸ್ಟ್ರೇಲಿಯಾದ ಟ್ರಾವಿಸ್‌ ಹೆಡ್‌

   

ರಾಯಿಟರ್ಸ್‌ ಚಿತ್ರ

ಬ್ರಿಜ್‌ಟೌನ್‌ (ಬಾರ್ಬಾಡೋಸ್‌): ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 159 ರನ್‌ ಅಂತರದ ಸುಲಭ ಜಯ ಸಾಧಿಸಿದೆ. ಈ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ ಟ್ರಾವಿಸ್‌ ಹೆಡ್‌ ಪಂದ್ಯಶ್ರೇಷ್ಠ ಎನಿಸಿಕೊಂಡಿದ್ದಾರೆ. ಇದರೊಂದಿಗೆ ಅವರು, ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ (ಡಬ್ಲ್ಯುಟಿಸಿ) ಪಂದ್ಯಗಳಲ್ಲಿ ಅತಿಹೆಚ್ಚು ಬಾರಿ ಈ ಪ್ರಶಸ್ತಿ ಗಿಟ್ಟಿಸಿಕೊಂಡ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

ADVERTISEMENT

ಬ್ರಿಜ್‌ಟೌನ್‌ನ ಕೆನ್ನಿಂಗ್‌ಟನ್‌ ಓವಲ್‌ನಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 180 ರನ್‌ ಗಳಿಸಿ ಆಲೌಟ್‌ ಆದರೆ, ವೆಸ್ಟ್ ಇಂಡೀಸ್‌ 190 ರನ್‌ ಗಳಿಸಿ ಸರ್ವಪತನ ಕಂಡಿತ್ತು.

10 ರನ್‌ಗಳ ಹಿನ್ನಡೆ ಅನುಭವಿಸಿದರೂ, ಎರಡನೇ ಇನಿಂಗ್ಸ್‌ನಲ್ಲಿ ಚೇತರಿಸಿಕೊಂಡ ಕಾಂಗರೂ ಪಡೆ 310 ರನ್‌ ಕಲೆಹಾಕಿತ್ತು. ಹೀಗಾಗಿ, ಗೆಲಲ್ಲು 301 ರನ್‌ಗಳ ಸವಾಲು ಪಡೆದ ವಿಂಡೀಸ್‌, ಆಸಿಸ್‌ ವೇಗಿಗಳೆದುರು ತತ್ತರಿಸಿತು. ಕೇವಲ 141 ರನ್‌ಗೆ ಆಲೌಟ್‌ ಆಗುವುದರೊಂದಿಗೆ ದೊಡ್ಡ ಅಂತರದ ಸೋಲಿಗೆ ಶರಣಾಯಿತು.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಪರ ನಿರ್ಣಾಯಕ ಬ್ಯಾಟಿಂಗ್‌ ಮಾಡಿದ್ದ ಹೆಡ್‌, ಮೊದಲ ಇನಿಂಗ್ಸ್‌ನಲ್ಲಿ 59 ರನ್‌ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 61 ರನ್‌ ಕಲೆಹಾಕಿದ್ದರು.

10ನೇ ಪಂದ್ಯಶ್ರೇಷ್ಠ
ಟ್ರಾವಿಸ್‌ ಹೆಡ್‌ ಅವರು ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲಿ ಪಡೆದ 10ನೇ ಪಂದ್ಯಶ್ರೇಷ್ಠ ಪ್ರಶಸ್ತಿ ಇದಾಗಿದೆ. ಸದ್ಯ ಬೇರಾವ ಕ್ರಿಕೆಟಿಗ ಈ ಸಾಧನೆ ಮಾಡಿಲ್ಲ.

ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌, ಜೋ ರೂಟ್‌ ತಲಾ ಐದು ಬಾರಿ ಈ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಅದೇ ತಂಡದ ಹ್ಯಾರಿ ಬ್ರೂಕ್‌ 4 ಸಲ ಪಂದ್ಯಶ್ರೇಷ್ಠ ಎನಿಸಿದ್ದಾರೆ.

ಡಬ್ಲ್ಯುಟಿಸಿಯಲ್ಲಿ ಈವರೆಗೆ ಒಟ್ಟು 50 ಪಂದ್ಯಗಳ 83 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿರುವ ಹೆಡ್‌, 8 ಶತಕ ಮತ್ತು 15 ಅರ್ಧಶತಕ ಸಹಿತ 3,196 ರನ್‌ ಗಳಿಸಿದ್ದಾರೆ. 40.97 ಬ್ಯಾಟಿಂಗ್ ಸರಾಸರಿಯಾದರೆ, 73.01 ಅವರ ಸ್ಟ್ರೈಕ್‌ರೇಟ್‌.

400 ಫೋರ್‌
ವಿಂಡೀಸ್‌ ವಿರುದ್ಧದ ಪಂದ್ಯದಲ್ಲಿ ಒಟ್ಟು 17 ಬೌಂಡರಿ ಬಾರಿಸಿದ ಹೆಡ್, ಡಬ್ಲ್ಯುಟಿಸಿಯಲ್ಲಿ ಗಳಿಸಿದ ಬೌಂಡರಿಗಳ ಸಂಖ್ಯೆಯನ್ನು 401ಕ್ಕೆ ಏರಿಸಿಕೊಂಡಿದ್ದಾರೆ. ಅದರೊಂದಿಗೆ, 400ಕ್ಕಿಂತ ಹೆಚ್ಚು ಸಲ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ ನಾಲ್ಕನೇ ಬ್ಯಾಟರ್‌ ಎನಿಸಿದ್ದಾರೆ.

ಇಂಗ್ಲೆಂಡ್‌ನ ಜೋ ರೂಟ್‌ (119 ಇನಿಂಗ್ಸ್‌ಗಳಲ್ಲಿ) 576 ಬೌಂಡರಿ ಗಳಿಸಿ ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್‌ ಲಾಬುಶೇನ್‌ (96 ಇನಿಂಗ್ಸ್‌, 476 ಬೌಂಡರಿ), ಸ್ಟೀವ್‌ ಸ್ಮಿತ್ (91 ಇನಿಂಗ್ಸ್‌, 443 ಬೌಂಡರಿ) ನಂತರದ ಸ್ಥಾನಗಳಲ್ಲಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.