ADVERTISEMENT

ವಿರಾಟ್‌ಗೆ ಶೋಕಾಸ್ ನೋಟಿಸ್ ವದಂತಿ ನಿರಾಕರಿಸಿದ ಗಂಗೂಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಜನವರಿ 2022, 9:27 IST
Last Updated 22 ಜನವರಿ 2022, 9:27 IST
ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ
ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ   

ನವದಹೆಲಿ: ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ವಿರಾಟ್ ಕೊಹ್ಲಿಗೆ ಶೋಕಾಸ್ ನೋಟಿಸ್ ನೀಡಲು ಮುಂದಾಗಿದ್ದರು ಎಂಬ ವದಂತಿಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ನಿರಾಕರಿಸಿದ್ದಾರೆ.

ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಟ್ವೀಟಿಸಿದೆ. ಎಎನ್‌ಐಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಗಂಗೂಲಿ ಸ್ಪಷ್ಟಪಡಿಸಿದ್ದಾರೆ.

ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ತೆಗೆದು ಹಾಕಲು ಕಾರಣವಾದ ಘಟನೆಗಳ ಕುರಿತು ಸಾರ್ವಜನಿಕವಾಗಿ ಮಾತನಾಡಿದ ವಿರಾಟ್ ಕೊಹ್ಲಿ ವಿರುದ್ಧ ಶೋಕಾಸ್ ನೋಟಿಸ್ ರವಾನಿಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮುಂದಾಗಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಕಳೆದ ವರ್ಷ ಟ್ವೆಂಟಿ-20 ನಾಯಕ ಸ್ಥಾನವನ್ನು ಕೊಹ್ಲಿ ತೊರೆದಿದ್ದರು. ಬಳಿಕ ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಏಕ ಕಪ್ತಾನ ನೀತಿಯನ್ನು ಪಾಲಿಸಿದ್ದ ಬಿಸಿಸಿಐ, ವಿರಾಟ್ ಅವರನ್ನು ಏಕದಿನ ನಾಯಕ ಸ್ಥಾನದಿಂದ ಕೆಳಗಿಳಿಸಿತ್ತು.

ಕೊಹ್ಲಿಯನ್ನು ಏಕದಿನ ಕಪ್ತಾನಗಿರಿಯಿಂದ ಕೆಳಗಿಳಿಸಿದ ಒಂದು ದಿನದ ಬಳಿಕ ಪ್ರತಿಕ್ರಿಯಿಸಿದ ಗಂಗೂಲಿ, ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ವಿರಾಟ್ ಅವರೊಂದಿಗೆ ಚರ್ಚಿಸಲಾಗಿತ್ತು. ಟ್ವೆಂಟಿ-20 ನಾಯಕತ್ವವನ್ನು ತ್ಯಜಿಸದಂತೆವಿನಂತಿಸಲಾಗಿತ್ತು ಎಂದು ಹೇಳಿದ್ದರು.

ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಸುದ್ಧಿಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ್ದ ಕೊಹ್ಲಿ, ಟ್ವೆಂಟಿ-20 ನಾಯಕತ್ವವನ್ನು ತೊರೆದಾಗ ಸರ್ವಾನುಮತದಿಂದ ಸ್ವಾಗತಿಸಲಾಯಿತು. ಅಲ್ಲದೆ ಏಕದಿನ ನಾಯಕತ್ವದಿಂದ ಕೆಳಗಿಳಿಸುವ ಕೆಲವೇ ತಾಸಿನ ಮೊದಲು ತಿಳಿಸಲಾಯಿತು ಎಂದು ಹೇಳಿದ್ದರು.

ಕೊಹ್ಲಿ ಹಾಗೂ ಗಂಗೂಲಿ ಅವರ ತದ್ವಿರುದ್ಧವಾದ ಹೇಳಿಕೆಗಳು ವಿವಾದಕ್ಕೀಡಾಗಿದ್ದವು.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎದುರಾದ ಸೋಲಿನ ಬಳಿಕ ಟೆಸ್ಟ್ ನಾಯಕತ್ವವನ್ನು ವಿರಾಟ್ ಕೊಹ್ಲಿ ತ್ಯಜಿಸಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿದ್ದ ಗಂಗೂಲಿ, ಇದು ವಿರಾಟ್ ಅವರ ವೈಯಕ್ತಿಕ ನಿರ್ಧಾರವಾಗಿದ್ದು, ಬಿಸಿಸಿಐ ಅದನ್ನು ಗೌರವಿಸುತ್ತದೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.