ರಿಷಭ್ ಪಂತ್
(ಪಿಟಿಐ ಚಿತ್ರ)
ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗಾಯವನ್ನು ಲೆಕ್ಕಿಸದೇ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದಿರುವ ಭಾರತದ ವಿಕೆಟ್ ಕೀಪರ್ ಎಡಗೈ ಬ್ಯಾಟರ್ ರಿಷಭ್ ಪಂತ್ ಅವರ ದಿಟ್ಟತನಕ್ಕೆ ಅಭಿನಂದನೆಗಳ ಪೂರವೇ ಹರಿದು ಬಂದಿವೆ.
ಮೊದಲ ದಿನದ ಆಟದ ವೇಳೆ ಗಾಯಗೊಂಡಿದ್ದ ಪಂತ್ ನಿವೃತ್ತಿಯಾಗಿದ್ದರು. ಬಳಿಕ ಸ್ಕ್ಯಾನಿಂಗ್ ವರದಿಯಲ್ಲಿ ಗಾಯಗೊಂಡ ಪಂತ್ ಅವರಿಗೆ ಆರು ವಾರಗಳ ವಿಶ್ರಾಂತಿ ಸೂಚಿಸಲಾಗಿತ್ತು.
ಆದರೆ ಎರಡನೇ ದಿನದಾಟದಲ್ಲಿ ಭಾರತದ ಸ್ಥಿತಿ ಉತ್ತಮವಾಗಿರಲಿಲ್ಲ. ಈ ನಡುವೆ ಕಾಲ್ಬೆರಳು ಮುರಿದ ನೋವಿನಲ್ಲಿಯೂ ಬ್ಯಾಟಿಂಗ್ ಮಾಡಿದ ಪಂತ್ ಕ್ರಿಕೆಟ್ ಲೋಕದ ಮನಗೆದ್ದಿದ್ದಾರೆ.
ಆಂಗ್ಲರ ಬೌಲರನ್ನು ಸಮರ್ಥವಾಗಿ ಎದುರಿಸಿದ ಪಂತ್ ಮಗದೊಂದು ಆಕರ್ಷಕ ಅರ್ಧಶತಕ (54) ಗಳಿಸಿದರು. ಪಂತ್ ಅವರ ಈ ಆಟವನ್ನು ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರೊಂದಿಗೆ ಹೋಲಿಸಲಾಗುತ್ತಿದೆ. 2002ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ ದವಡೆ ಮುರಿದಿದ್ದರೂ ಕುಂಬ್ಳೆ ಬ್ಯಾಂಡೇಜ್ ಹಾಕಿಸಿಕೊಂಡೇ ಬೌಲಿಂಗ್ ಮಾಡಲು ಕಣಕ್ಕಿಳಿದಿದ್ದರು.
'ಟೀಂ ಮ್ಯಾನ್' ಪಂತ್...
ಪಂತ್ ಬಗ್ಗೆ ಯಾರೇ ಅನುಮಾನಿಸಿದ್ದರೆ, ಅವರಿಗೆ ಈ ಪ್ರದರ್ಶನದಿಂದ ಉತ್ತರ ಸಿಕ್ಕಿರಬಹುದು. ಪಂತ್ ಪರಿಪೂರ್ಣ ಟೀಂ ಮ್ಯಾನ್' ಎಂದು ಮಾಜಿ ಕೋಚ್ ರವಿ ಶಾಸ್ತ್ರಿ 'ಅಭಿಪ್ರಾಯಪಟ್ಟಿದ್ದಾರೆ.
'ಪಂತ್ ಮತ್ತೆ ಆಡಲು ಬಂದಿರುವುದು ವಿಶೇಷವಾಗಿತ್ತು. ಕೆಲವೊಮ್ಮೆ ಇಂತಹ ಪ್ರೇರಣಾ ಶಕ್ತಿಯು ಇನ್ನೊಂದು ಹಂತಕ್ಕೆ ತಲುಪುತ್ತದೆ. ಇದರಿಂದ ತಂಡದ ಮನೋಬಲವನ್ನು ಇಮ್ಮಡಿಗೊಳಿಸುತ್ತದೆ. ಇಂಗ್ಲೆಂಡ್ ತಂಡದಿಂದಲೂ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಅಂತಿಮವಾಗಿ ಅದಕ್ಕಾಗಿಯೇ ನೀವು ಆಡುತ್ತಿದ್ದೀರಿ' ಎಂದು ಅವರು ಹೇಳಿದ್ದಾರೆ.
ಲಾರ್ಡ್ಸ್‌ನಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲೂ ಕೈಗೆ ಗಾಯಗೊಂಡಿದ್ದರೂ ಪಂತ್ ಬ್ಯಾಟಿಂಗ್ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
'ಅಂದು ಬೆರಳು ಹೇಗಿದೆ ಅಂತಾ ಕೇಳಿದಾಗ, ಸ್ವಲ್ಪ ಮುರಿದರೂ ಆಡುತ್ತೇನೆ ಎಂದು ಹೇಳಿರುವುದು ಪಂತ್ ದಿಟ್ಟತನಕ್ಕೆ ಸಾಕ್ಷಿಯಾಗಿದೆ. ಅವರು ದೇಶಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡಲು ಇಷ್ಟಪಡುತ್ತಾರೆ' ಎಂದು ಶಾಸ್ತ್ರಿ ಉಲ್ಲೇಖಿಸಿದ್ದಾರೆ.
'ಕಷ್ಟದ ಪರಿಸ್ಥಿತಿಯೂ ಆಡುವಂತಹ ಆಟಗಾರರು ನಮಗೆ ಬೇಕಾಗಿದೆ. ತುಂಬಾ ನೋವು ಅನುಭವಿಸಿದ್ದರೂ ಧೈರ್ಯದಿಂದ ಆಡುವ ಮೂಲಕ ಪಂತ್ ತಮ್ಮ ವ್ಯಕ್ತಿತ್ವವನ್ನು ತೋರಿಸಿದ್ದಾರೆ' ಎಂದು ಚೇತೇಶ್ವರ ಪೂಜಾರ ಗುಣಗಾನ ಮಾಡಿದ್ದಾರೆ.
'ಇಂಗ್ಲೆಂಡ್‌ನವರು ಸಹ ರಿಷಭ್ ಪಂತ್ ಅವರನ್ನು ಪ್ರೀತಿಸುತ್ತಾರೆ. ಇಂತಹ ಸ್ಪೂರ್ತಿದಾಯಕ ಕ್ಷಣಗಳು ದೀರ್ಘಕಾಲ ಉಳಿಯುತ್ತದೆ' ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.
'ಪಂತ್ ಅದ್ಭುತ ಪ್ರತಿಭೆಯಷ್ಟೇ ಅಲ್ಲದೆ ವಿಶಾಲವಾದ ಹೃದಯವನ್ನು ಹೊಂದಿದ್ದಾರೆ' ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ನಾಸಿರ್ ಹುಸೇನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.