ADVERTISEMENT

ಟ್ರೋಲ್ ಆದ ವಿಕೆಟ್‌ಕೀಪರ್ ರಿಷಭ್ ಪಂತ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 20:55 IST
Last Updated 7 ಜನವರಿ 2021, 20:55 IST
ವಿಕೆಟ್‌ಕೀಪರ್ ರಿಷಭ್ ಪಂತ್
ವಿಕೆಟ್‌ಕೀಪರ್ ರಿಷಭ್ ಪಂತ್   

ಬೆಂಗಳೂರು: ಭಾರತ ತಂಡದ ವಿಕೆಟ್‌ಕೀಪರ್ ರಿಷಭ್ ಪಂತ್ ಎರಡು ಕ್ಯಾಚ್‌ಗಳನ್ನು ಕೈಚೆಲ್ಲಿರುವುದು ಕ್ರಿಕೆಟ್‌ ಅಭಿಮಾನಿಗಳಿಗೆ ಸಿಟ್ಟು ತರಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿರುದ್ಧ ಟೀಕೆಗಳ ಮಳೆಯನ್ನೇ ಅಭಿಮಾನಿಗಳು ಸುರಿಸಿದ್ದಾರೆ. ಚೊಚ್ಚಲ ಟೆಸ್ಟ್ ಆಡುತ್ತಿರುವ ಆಸ್ಟ್ರೇಲಿಯಾದ ವಿಲ್ ಪುಕೊವಸ್ಕಿ ಇನಿಂಗ್ಸ್‌ನ 22ನೇ ಓವರ್‌ನಲ್ಲಿ ಅಶ್ವಿನ್ ಎಸೆತದಲ್ಲಿ ಕ್ಯಾಚ್ ಆಗುವ ಸಾಧ್ಯತೆ ಇತ್ತು. ಆದರೆ, ರಿಷಭ್ ಕೈಚೆಲ್ಲಿದರು.

ಮೂರು ಓವರ್‌ಗಳ ನಂತರ ಸಿರಾಜ್ ಎಸೆತದಲ್ಲಿ ಪುಕೊವಸ್ಕಿ ಬ್ಯಾಟ್‌ನ ಮೇಲಂಚಿಗೆ ಬಡಿದು ಪುಟಿದೆದ್ದ ಚೆಂಡನ್ನು ಹಿಮ್ಮುಖವಾಗಿ ಓಡಿ ಹಿಡಿತಕ್ಕೆ ಪಡೆಯಲು ರಿಷಭ್ ಪ್ರಯತ್ನಿಸಿದರು. ಆದರೆ ಅವರು ನೆಲಕ್ಕೆ ಬೀಳುವಾಗ ಚೆಂಡು ಕೂಡ ಕೈಗವಸಿನಿಂದ ಜಾರಿ ನೆಲಕ್ಕೆ ತಾಗಿತ್ತು. ಆದರೂ ರಿಷಭ್ ಹಾವಭಾವದಿಂದ ಔಟ್ ಎಂಬ ಸಂದೇಶ ಬಿತ್ತರವಾಯಿತು. ಭಾರತದ ಆಟಗಾರರು ಸಂಭ್ರಮಿಸಿದರು. ಪುಕೊವಸ್ಕಿ ಪೆವಿಲಿಯನ್‌ ಕಡೆಗೆ ಹೆಜ್ಜೆ ಹಾಕಿದರು.

ADVERTISEMENT

ಆದರೆ ಟಿವಿ ಅಂಪೈರ್ ಬ್ರೂಸ್ ಆಕ್ಸೆನ್‌ಫೋರ್ಡ್‌ ಅವರು ನಾಟೌಟ್ ತೀರ್ಪು ನೀಡಿದರು. ಚೆಂಡು ಹುಲ್ಲಿನಂಕಣಕ್ಕೆ ಬಿದ್ದು ನಂತರ ವಿಕೆಟ್‌ಕೀಪರ್‌ ಕೈಗವಸು ಸೇರಿದ್ದು ಟಿವಿ ರಿಪ್ಲೆಯಲ್ಲಿ ಸ್ಪಷ್ಟವಾಗಿತ್ತು. ಇದರ ಬಗ್ಗೆ ರಿಷಭ್‌ ಅವರನ್ನು ಅಭಿಮಾನಿಗಳು ಬಹಳಷ್ಟು ತರಾಟೆಗೆ ತೆಗೆದುಕೊಂಡಿದ್ದಾರೆ.

ಸರಣಿಯ ಮೊದಲ ಪಂದ್ಯದಲ್ಲಿ ವೃದ್ಧಿಮಾನ್ ಸಹಾ ವೈಫಲ್ಯ ಅನುಭವಿಸಿದ್ದರು. ಆದ್ದರಿಂದ ಮೆಲ್ಬರ್ನ್ ಮತ್ತು ಇಲ್ಲಿಯ ಪಂದ್ಯಕ್ಕೆ ಪಂತ್ ಅವರನ್ನು ಆಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.