ADVERTISEMENT

ಆಸ್ಟ್ರೇಲಿಯಾ ನೆಲದಲ್ಲಿ ರಿಷಭ್ ಪಂತ್ ಅಪರೂಪದ ದಾಖಲೆ: ಭೇಷ್ ಎಂದ ಸಚಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜನವರಿ 2025, 10:41 IST
Last Updated 4 ಜನವರಿ 2025, 10:41 IST
<div class="paragraphs"><p>ರಿಷಬ್ ಪಂತ್ ಬ್ಯಾಟಿಂಗ್ ವೈಖರಿ</p></div>

ರಿಷಬ್ ಪಂತ್ ಬ್ಯಾಟಿಂಗ್ ವೈಖರಿ

   

–ರಾಯಿಟರ್ಸ್ ಚಿತ್ರ

ಬೆಂಗಳೂರು: ಸಿಡ್ನಿ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಸ್ಫೋಟಕ ಅರ್ಧ ಶತಕ ಬಾರಿಸಿದ ಭಾರತ ಬ್ಯಾಟರ್ ರಿಷಭ್ ಪಂತ್‌ ಅವರ ಬ್ಯಾಟಿಂಗ್ ಗಮನ ಸೆಳೆಯಿತು. ಕೇವಲ 29 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. 2022ರಲ್ಲಿ ಶ್ರೀಲಂಕಾ ವಿರುದ್ಧ 28 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ್ದು ಅವರ ಈ ಹಿಂದಿನ ದಾಖಲೆಯಾಗಿತ್ತು.

ADVERTISEMENT

ಅವರ ಈ ಅರ್ಧ ಶತಕ ಆಸ್ಟ್ರೇಲಿಯಾ ನೆಲದಲ್ಲಿ ವಿದೇಶಿ ಬ್ಯಾಟರ್ ಬಾರಿಸಿದ ವೇಗದ ಅರ್ಧಶತಕ. ಈ ಹಿಂದೆ ಇಂಗ್ಲೆಂಡ್‌ನ ಜಾನ್ ಬ್ರೌನ್‌ (ಮೆಲ್ಬರ್ನ್‌, 1985) ಹಾಗೂ ವೆಸ್ಟ್ ಇಂಡೀಸ್‌ನ ರಾಯ್ ಫೆಡ್ರಿಕ್ಸ್ (ಪರ್ತ್‌ 1975) 33 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದ್ದು ದಾಖಲೆಯಾಗಿತ್ತು.

ವಿರಾಟ್ ಕೊಹ್ಲಿ ಔಟಾದ ಬಳಿಕ ಕ್ರೀಸ್‌ಗೆ ಪಂತ್, ತಾವು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟಿ ಆರ್ಭಟಿಸುವ ಸೂಚನೆ ನೀಡಿದರು. ಬೋಲ್ಯಾಂಡ್, ಸ್ಟಾರ್ಕ್ ಹಾಗೂ ವೆಬ್‌ಸ್ಟರ್‌ ಎಸೆತಗಳನ್ನು ಲೀಲಾಜಾಲವಾಗಿ ಬೌಂಡರಿಗೆ ಅಟ್ಟಿದರು. ಪಂತ್ ಹೊಡೆತಗಳಿಗೆ ಆಸೀಸ್ ಬೌಲರ್‌ಗಳು ಸುಸ್ತಾದರು.

33 ಎಸೆತಗಳಲ್ಲಿ 61 ರನ್‌ಗಳಿಸಿ ಪಂತ್ ನಿರ್ಗಮಿಸಿದರು. ಪಾಟ್‌ ಕಮಿನ್ಸ್ ಎಸೆತವನ್ನು ಕೆಣಕಲು ಹೋಗಿ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚಿತ್ತು ನಿರ್ಗಮಿಸಿದರು. ಅವರ ಇನಿಂಗ್ಸ್‌ನಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳಿದ್ದವು.

ಸಚಿನ್ ತೆಂಡೂಲ್ಕರ್ ಶ್ಲಾಘನೆ

ಪಂತ್ ಅವರ ಈ ಆಟ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಮೆಚ್ಚುಗೆಗೆ ಪಾತ್ರವಾಯಿತು. ‘ಬಹುಪಾಲು ಬ್ಯಾಟರ್‌ಗಳು 50 ಅಥವಾ ಅದಕ್ಕಿಂತ ಕಡಿಮೆ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿದ ಪಿಚ್‌ನಲ್ಲಿ ರಿಷಭ್ ಪಂತ್‌ ಅವರು 184ರ ಸ್ಟ್ರೇಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದು ನಿಜವಾಗಲೂ ಗಮನಾರ್ಹ. ಅವರು ಮೊದಲ ಎಸೆತದಿಂದಲೇ ಆಸ್ಟ್ರೇಲಿಯಾ ಬೌಲರ್‌ಗ ಮೇಲೆ ಸವಾರಿ ಮಾಡಿದರು. ಅವರ ಆಟ ನೋಡುವುದೇ ಸೊಗಸು. ಎಂಥಾ ಪರಿಣಾಮಕಾರಿ ಇನಿಂಗ್ಸ್‌’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.