ರಿಯಾನ್ ಪರಾಗ್, ಸಂಜು ಸ್ಯಾಮ್ಸನ್
(ಪಿಟಿಐ ಸಂಗ್ರಹ ಚಿತ್ರ)
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2025ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮೊದಲ ಮೂರು ಪಂದ್ಯಗಳಲ್ಲಿ ಉದನೋನ್ಮುಖ ಪ್ರತಿಭೆ ರಿಯಾನ್ ಪರಾಗ್ ಮುನ್ನಡೆಸಲಿದ್ದಾರೆ.
ತಂಡದ ನಾಯಕ, ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಯನ್ ಇನ್ನಷ್ಟೇ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕಾಗಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಕಂಡುಬಂದಿದೆ.
ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಸಂಜು ವಿಕೆಟ್ ಕೀಪಿಂಗ್ ಮಾಡದಂತೆ ಬಿಸಿಸಿಐ ಸೂಚಿಸಿತ್ತು. ಹಾಗಾಗಿ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಲಭ್ಯರಿರಲಿದ್ದಾರೆ.
ಕಳೆದ ತಿಂಗಳು ಮುಂಬೈಯಲ್ಲಿ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ-20 ಅಂತರರಾಷ್ಟ್ರೀಯ ಸರಣಿಯ ವೇಳೆ ವೇಗಿ ಜೋಫ್ರಾ ಆರ್ಚರ್ ಅವರ ಎಸೆತವು ಬಡಿದು ಸಂಜು ಸ್ಯಾಮ್ಸನ್ ಗಾಯಗೊಂಡಿದ್ದರು.
ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್, ಸಂಜುಗೆ ಬ್ಯಾಟಿಂಗ್ ಮಾಡಲು ತೊಂದರೆ ಇಲ್ಲ ಎಂದು ಹೇಳಿದ್ದರೂ ವಿಕೆಟ್ ಕೀಪರ್ ಆರಂಭಿಸುವ ಮೊದಲು ಬೆರಳುಗಳಿಗೆ ಇನ್ನಷ್ಟು ವಿಶ್ರಾಂತಿ ಸೂಚಿಸಿತ್ತು.
'ಮೊದಲ ಮೂರು ಪಂದ್ಯಗಳಲ್ಲಿ 23ರ ಹರೆಯದ ರಿಯಾನ್ ಪರಾಗ್ ತಂಡವನ್ನು ಮುನ್ನಡೆಸಲಿದ್ದಾರೆ' ಎಂದು ಆರ್‌ಆರ್ ಕ್ಯಾಂಪ್‌ನಲ್ಲಿ ಸಂಜು ಸ್ಯಾಮ್ಸನ್ ಪ್ರಕಟಿಸಿದ್ದಾರೆ.
ಆ ಮೂಲಕ ಐಪಿಎಲ್‌ನ ಕಿರಿಯ ನಾಯಕರ ಪಟ್ಟಿಯಲ್ಲಿ ಪರಾಗ್ ಸಹ ಒಬ್ಬರೆನಿಸಲಿದ್ದಾರೆ. ಐಪಿಎಲ್‌ನ ಅತಿ ಕಿರಿಯ ನಾಯಕ ಪಟ್ಟ ವಿರಾಟ್ ಕೊಹ್ಲಿ ಅವರಿಗೆ ಸೇರುತ್ತದೆ. 22ರ ಹರೆಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿದ್ದರು.
ಮಾರ್ಚ್ 23ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ಸವಾಲನ್ನು ಎದುರಿಸಲಿದೆ. ಬಳಿಕ ಮಾರ್ಚ್ 26ರಂದು ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಮಾರ್ಚ್ 30ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ.
ರಾಜಸ್ಥಾನ ತಂಡವು ಈ ಮೂರು ಪಂದ್ಯಗಳಲ್ಲಿ ಸಂಜು ಅವರನ್ನು 'ಇಂಪ್ಯಾಕ್ಟ್ ಸಬ್' ಆಗಿ ಕಣಕ್ಕಿಳಿಸುವ ಸಾಧ್ಯತೆಯಿದೆ. ಸಂಪೂರ್ಣ ಫಿಟ್ ಆದ ಬಳಿಕ ತಂಡದ ನಾಯಕತ್ವ ಜವಾಬ್ದಾರಿಯನ್ನು ವಹಿಸಲಿದ್ದಾರೆ.
ರಾಜಸ್ಥಾನ ತಂಡಕ್ಕೆ ಕರ್ನಾಟಕದ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿದ್ದಾರೆ.
ದೇಶೀಯ ಟೂರ್ನಿಯಲ್ಲಿ ಅಸ್ಸಾಂ ತಂಡವನ್ನು ಮುನ್ನಡೆಸಿದ ಅನುಭವವನ್ನು ರಿಯಾನ್ ಹೊಂದಿದ್ದಾರೆ. ಆದರೆ ಯಶಸ್ವಿ ಜೈಸ್ವಾಲ್ ಅವರಂತಹ ಆಟಗಾರರನ್ನು ಕಡೆಗಣಿಸಿ ರಿಯಾನ್‌ಗೆ ಕಪ್ತಾನಗಿರಿ ನೀಡಿರುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಮೈಕ್ ಹಿಡಿಯಲಿರುವ ಅಂಪೈರ್ ಚೌಧರಿ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ 17 ವರ್ಷಗಳ ಕಾಲ ಅಂಪೈರ್ ಆಗಿ ಕಾರ್ಯನಿರ್ವಹಿಸಿರುವ ಅನಿಲ್ ಚೌಧರಿ ಇನ್ನು ಬೇರೆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವಾರ 60ನೇ ವರ್ಷಕ್ಕೆ ಕಾಲಿಟ್ಟ ಚೌಧರಿ ಇನ್ನು ವೀಕ್ಷಕ ವಿವರಣೆಗಾರನಾಗಿ ಮೈಕ್ ಹಿಡಿಯಲಿದ್ದಾರೆ.
ಆ ಮೂಲಕ ಅವರು ಅಂಪೈರಿಂಗ್ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಹೇಳಿದಂತಾಗಿದೆ. ಕಳೆದ ತಿಂಗಳು ಕೇರಳ ಮತ್ತು ವಿದರ್ಭ ನಡುವಣ ರಣಜಿ ಟ್ರೋಫಿ ಪಂದ್ಯದಲ್ಲಿ ಅವರು ಕೊನೆಯ ಬಾರಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು.
ಅವರು 12 ಟೆಸ್ಟ್, 49 ಏಕದಿನ ಮತ್ತು 64 ಟಿ20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಅವರು ಪ್ರಾದೇಶಿಕ ಭಾಷೆಯಲ್ಲಿ (ಹರಿಯಾಣವಿ) ಮತ್ತು ಹಿಂದಿಯಲ್ಲಿ ಕಾಮೆಂಟರಿ ನೀಡಲು ಯೋಜಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.