ಮುಂಬೈ: ಯಜುವೇಂದ್ರ ಚಾಹಲ್ ಅವರ ಬೌಲಿಂಗ್ ದಾಳಿಗೆ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಸುಲಭ ಜಯದ ಅವಕಾಶವನ್ನು ಕೈಚೆಲ್ಲಿತ್ತು.
ಕೆಕೆಆರ್‌ಗೆ 111 ರನ್‌ಗಳ ಅಲ್ಪಮೊತ್ತದ ಗುರಿ ನೀಡಿದ್ದ ಪಂಜಾಬ್ ತಂಡವು ಉತ್ತಮ ಬೌಲಿಂಗ್ ಪ್ರದರ್ಶಿಸುವ ಮೂಲಕ 16 ರನ್‌ಗಳ ರೋಚಕ ಜಯ ಸಾಧಿಸಿತು.
ಮಹಾರಾಜ ಯದುವೇಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದ ಪಂಜಾಬ್ ತಂಡ, 15.3 ಓವರ್‌ಗಳಲ್ಲಿ 111 ರನ್ ಗಳಿಸಿ ಆಲೌಟ್ ಆಗಿತ್ತು. ಈ ಗುರಿ ಬೆನ್ನಟ್ಟಿದ ಹಾಲಿ ಚಾಂಪಿಯನ್ ಕೋಲ್ಕತ್ತ ತಂಡ 15.1 ಓವರ್‌ಗಳಲ್ಲಿ 95 ರನ್ ಗಳಿಸಿ ಆಲೌಟ್ ಆಯಿತು.
ಪಂದ್ಯದುದ್ದಕ್ಕೂ ಕೋಲ್ಕತ್ತ ತಂಡಕ್ಕೆ ಚಾಹಲ್ ಮತ್ತು ಎಡಗೈ ವೇಗಿ ಮಾರ್ಕೊ ಯಾನ್ಸೆನ್ ಸಿಂಹಸ್ವಪ್ನವಾಗಿ ಕಾಡಿದರು. 28 ರನ್‌ಗೆ 4 ವಿಕೆಟ್ ಉರುಳಿಸುವ ಮೂಲಕ ಚಾಹಲ್ ಎದುರಾಳಿ ತಂಡದ ಜಯವನ್ನು ಅಕ್ಷರಶಃ ಕಸಿದುಕೊಂಡಿದ್ದಾರೆ.
ಪಂದ್ಯ ಗೆದ್ದ ಖುಷಿಯಲ್ಲಿ ಪಂಜಾಬ್ ಕಿಂಗ್ಸ್ ಒಡತಿ ಪ್ರೀತಿ ಝಿಂಟಾ ತಂಡದ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಚಾಹಲ್ ಅವರನ್ನು ತಬ್ಬಿಕೊಂಡು ಅಭಿನಂದಿಸಿದ್ದಾರೆ.
ಈ ನಡುವೆ ಚಾಹಲ್ ಗೆಳತಿ ಆರ್‌ಜೆ ಮಹ್ವಾಶ ಅವರು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಚಾಹಲ್ ಅವರನ್ನು ಪ್ರತಿಭಾನ್ವಿತ ವ್ಯಕ್ತಿ ಎಂದು ಹೊಗಳಿದ್ದಾರೆ.
ಚಾಹಲ್ ಅವರೊಂದಿಗಿನ ಸೆಲ್ಫಿ ಫೋಟೊವನ್ನು ಹಂಚಿಕೊಂಡಿರುವ ಅವರು, ‘ಎಂಥಾ ಪ್ರತಿಭಾನ್ವಿತ ವ್ಯಕ್ತಿ. ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬುದಕ್ಕೆ ಒಂದು ಕಾರಣವಿದೆ. ಅಸಂಭವ!’ ಎಂದು ಬರೆದುಕೊಂಡಿದ್ದಾರೆ.
ಧನಶ್ರೀ ಅವರೊಂದಿಗೆ ವಿಚ್ಛೇದನ ನಂತರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಪಿ ಫೈನಲ್ ಪಂದ್ಯದಲ್ಲಿ ಮೊದಲ ಬಾರಿಗೆ ಮಹ್ವಾಶ ಅವರೊಂದಿಗೆ ಚಾಹಲ್ ಕಾಣಿಸಿಕೊಂಡಿದ್ದರು. ಅಲ್ಲಿಂದ ಇವರಿಬ್ಬರು ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಈ ಬಗ್ಗೆ ಇಬ್ಬರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.