ADVERTISEMENT

ರೋಹಿತ್, ಕೊಹ್ಲಿ ನೀಡಿದ ಅಮೂಲ್ಯ ಸಲಹೆಯಿಂದ ನೆರವು: ಇಶಾನ್ ಕಿಶನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಮೇ 2022, 13:16 IST
Last Updated 11 ಮೇ 2022, 13:16 IST
ಇಶಾನ್ ಕಿಶನ್
ಇಶಾನ್ ಕಿಶನ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗರಿಷ್ಠ ಮೊತ್ತಕ್ಕೆ ಹರಾಜು ಗೊಂಡಿರುವ ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ಅತ್ಯಂತ ಕಠಿಣ ಸಮಯದಲ್ಲಿ ನಾಯಕ ರೋಹಿತ್ ಶರ್ಮಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಕಪ್ತಾನವಿರಾಟ್ ಕೊಹ್ಲಿ ನೀಡಿರುವ ಅಮೂಲ್ಯ ಸಲಹೆ ಬಗ್ಗೆ ತಿಳಿಸಿದ್ದಾರೆ.

ಐಪಿಎಲ್ 2022 ಹರಾಜಿನಲ್ಲಿ ₹15.25 ಕೋಟಿ ನೀಡಿ ಇಶಾನ್ ಕಿಶನ್ ಅವರನ್ನು ಮಂಬೈ ಫ್ರಾಂಚೈಸ್ ಖರೀದಿಸಿತ್ತು. ಆದರೆ ಅದಕ್ಕೆ ತಕ್ಕುದಾದ ನಿರ್ವಹಣೆ ನೀಡುವಲ್ಲಿ ವಿಫಲರಾಗಿದ್ದರು. ಇದುವರೆಗೆ 11 ಪಂದ್ಯಗಳಲ್ಲಿ 32.10ರ ಸರಾಸರಿಯಲ್ಲಿ 321 ರನ್ ಗಳಿಸಿದ್ದಾರೆ.

ಹೆಚ್ಚು ಮೌಲ್ಯಕ್ಕೆ ಹರಾಜು ಗೊಂಡಿರುವ ಒತ್ತಡವು ಕೆಲವು ದಿನಗಳವರೆಗೆ ಇರುತ್ತದೆ. ಇದು ಕಾಡುವುದರಿಂದ ಹಿರಿಯ ಆಟಗಾರರೊಂದಿಗೆ ಸಮಾಲೋಚಿಸುವುದು ಉತ್ತಮ ಎಂದು ಹೇಳಿದ್ದಾರೆ.

ಐಪಿಎಲ್ ಹಣದ ಬಗ್ಗೆ ಯೋಚಿಸದಂತೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ಹಾರ್ದಿಕ್ ಪಾಂಡ್ಯ ಸಲಹೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

'ನನ್ನ ಮೇಲೆ ನಂಬಿಕೆ ಇಟ್ಟು ಬಿಡ್ ಸಲ್ಲಿಸಲಾಗಿದೆ. ಆದರೆ ಅತ್ಯುನ್ನತ್ತ ಮಟ್ಟದಲ್ಲಿ ಆಡುವಾಗ ಈ ವಿಷಯಗಳ ಬಗ್ಗೆ ಯೋಚಿಸಬಾರದು. ಇದರ ಬದಲು ತಂಡವನ್ನು ಗೆಲುವಿನತ್ತ ಮುನ್ನಡೆಸುವುದರ ಬಗ್ಗೆ ಗಮನ ಕೇಂದ್ರಿಕರಿಸಬೇಕು. ಈ ನಿಟ್ಟಿನಲ್ಲಿ ಹಿರಿಯ ಆಟಗಾರೊಂದಿಗಿನ ಸಮಾಲೋಚನೆಯು ನೆರವು ಮಾಡಿದೆ' ಎಂದು ಹೇಳಿದ್ದಾರೆ.

'ನೀವು ಒಂದು ಕೋಟಿ ರೂ. ಅಥವಾ ₹15.25 ಕೋಟಿಗೆ ಮಾರಾಟ ಗೊಂಡಿದ್ದಿರೋ ಎಂಬುದು ಅಪ್ರಸ್ತುತ. ತಂಡವನ್ನು ಗೆಲ್ಲಲು ಸಹಾಯ ಮಾಡುವುದು ಹಾಗೂ ಈ ಗುರಿ ಸಾಧಿಸಲು ಇತರೆ ಆಟಗಾರರಿಗೂ ನೆರವಾಗುವುದು ಅತಿ ಮುಖ್ಯ' ಎಂದು ಹೇಳಿದ್ದಾರೆ.

'ನನ್ನ ಸಹಜ ಆಟ ಆಡುವಂತೆ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ಮಹೇಲಾ ಜಯವರ್ಧನೆ ಸಲಹೆ ಮಾಡಿದ್ದಾರೆ. ತಂಡದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಪಾತ್ರವಿದೆ. ಉತ್ತಮ ಆರಂಭವನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಪ್ರಯತ್ನಿಸಬೇಕು' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.