ADVERTISEMENT

ಏಕದಿನ ತಂಡದಲ್ಲಿ ರೋ–ಕೊ ಸ್ಥಾನವನ್ನು ಯಾರೂ ಪ್ರಶ್ನಿಸಬಾರದು: ಸಂಜಯ್ ಬಂಗಾರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಡಿಸೆಂಬರ್ 2025, 14:50 IST
Last Updated 7 ಡಿಸೆಂಬರ್ 2025, 14:50 IST
<div class="paragraphs"><p>ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ (ಒಳಚಿತ್ರದಲ್ಲಿ ಸಂಜಯ್‌ ಬಂಗಾರ್‌)</p></div>

ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ (ಒಳಚಿತ್ರದಲ್ಲಿ ಸಂಜಯ್‌ ಬಂಗಾರ್‌)

   

ವಿಶಾಖಪಟ್ಟಣಂ: ಏಕದಿನ ಕ್ರಿಕೆಟ್‌ ತಂಡದಲ್ಲಿ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ಸ್ಥಾನವನ್ನು ಪ್ರಶ್ನೆ ಮಾಡುವುದರ ಬಗ್ಗೆ ಟೀಂ ಇಂಡಿಯಾದ ಮಾಜಿ ಕೋಚ್‌ ಸಂಜಯ್‌ ಬಂಗಾರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಮತ್ತು ರೋಹಿತ್‌, ಶನಿವಾರವಷ್ಟೇ (ಡಿ.6) ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘ ಆಟವಾಡಿದ್ದರು. ಅದರ ಬೆನ್ನಲ್ಲೇ, ಏಕದಿನ ತಂಡದಲ್ಲಿ 'ರೋ–ಕೊ' ಸ್ಥಾನವನ್ನು ಯಾರೂ ಪ್ರಶ್ನಿಸಬಾರದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ 2027ರ ಏಕದಿನ ವಿಶ್ವಕಪ್‌ ನಡೆಯಲಿದೆ. ಹಾಗಾಗಿ, ಪ್ರಸ್ತುತ ಸರಣಿಯು ರೋ–ಕೊ ಪಾಲಿಗೆ ಮಹತ್ವದ್ದಾಗಿತ್ತು. ಅದರಲ್ಲಿ ಅವರಿಬ್ಬರೂ ಪಾಸ್‌ ಆಗಿದ್ದಾರೆ.

'JioStar' ಕಾರ್ಯಕ್ರಮದಲ್ಲಿ ಮಾತನಾಡಿರುವ ಸಂಜಯ್‌, 'ಕೊಹ್ಲಿ ಮತ್ತು ರೋಹಿತ್‌ ಅವರ ಸ್ಥಾನವನ್ನು ಯಾರೊಬ್ಬರೂ ಪ್ರಶ್ನಿಸಬಾರದು' ಎಂದು ಒತ್ತಿ ಹೇಳಿದ್ದಾರೆ. ಹಾಗೆಯೇ, 'ಅವರಿಬ್ಬರೂ, ಇಷ್ಟು ವರ್ಷಗಳ ಕಾಲ ಏನು ಮಾಡಿದ್ದಾರೆ ಎಂಬುದನ್ನು ನೋಡಿ' ಎಂದು ಸಲಹೆ ನೀಡಿದ್ದಾರೆ.

ರೋ–ಕೊ ಎರಡು ಮಾದರಿಗೆ ವಿದಾಯ ಹೇಳಿದ್ದಾರೆ. ಹಾಗಾಗಿ, ಆಟಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಅದಕ್ಕಾಗಿ ಅವರು ಅನನುಭವಿ ಆಟಗಾರರಂತೆ ಹೆಚ್ಚೆಚ್ಚು ಪಂದ್ಯ ಆಡುವ ಅಗ್ಯವಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಒಂದು ಸಲ ರೋ–ಕೊ ಆಟಕ್ಕೆ ಕುದುರಿಕೊಂಡರೆ, ರನ್‌ ಗಳಿಸುವ ಹಸಿವು ಶುರುವಾದರೆ, ವ್ಯತ್ಯಾಸ ನಿಮಗೇ ಕಾಣುತ್ತದೆ. ಅವರಿಬ್ಬರ ಉಪಸ್ಥಿತಿಯು ಡ್ರೆಸ್ಸಿಂಗ್ ರೂಂನ ವಾತಾವರಣವನ್ನೇ ಬದಲಿಸುತ್ತದೆ ಎಂದು ಬಂಗಾರ್‌ ಹೇಳಿದ್ದಾರೆ.

ಟೆಸ್ಟ್ ಮತ್ತು ಟಿ20 ಮಾದರಿಗೆ ವಿದಾಯ ಹೇಳಿರುವ ವಿರಾಟ್‌ ಹಾಗೂ ರೋಹಿತ್‌, ಟೀಂ ಇಂಡಿಯಾ ಇತ್ತೀಚೆಗೆ ಆಡಿದ ಎರಡು ಏಕದಿನ ಸರಣಿಗಳಲ್ಲಿ 'ಶ್ರೇಷ್ಠ' ಆಟಗಾರರಾಗಿ ಹೊರಹೊಮ್ಮಿದ್ದಾರೆ.

ದಕ್ಷಿಣ ಆಫ್ರಿಕಾ ಎದುರು ಮೂರು ಪಂದ್ಯಗಳಲ್ಲಿ ಎರಡು ಶತಕ, ಒಂದು ಅರ್ಧಶತಕ ಸಹಿತ 302 ರನ್‌ ಸಿಡಿಸಿದ್ದ ಕೊಹ್ಲಿ, 'ಸರಣಿ ಶ್ರೇಷ್ಠ' ಎನಿಸಿದ್ದಾರೆ.

ಅದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಮೂರು ಪಂದ್ಯಗಳ ಸರಣಿಯಲ್ಲಿ ರೋಹಿತ್‌ಗೆ ಆ ಪ್ರಶಸ್ತಿ ಒಲಿದಿತ್ತು. ಅವರು, ಮೂರು ಪಂದ್ಯಗಳಲ್ಲಿ ತಲಾ ಒಂದು ಶತಕ ಹಾಗೂ ಅರ್ಧಶತಕ ಸಹಿತ 202 ರನ್‌ ಬಾರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.