ರೋಹಿತ್ ಶರ್ಮಾ
ಪಿಟಿಐ ಚಿತ್ರ
ಮುಂಬೈ: ತಮ್ಮದೇ ಹೆಸರಿನ ಸ್ಟಾಂಡ್ ಇರುವ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡದ ಪರ ಏಕದಿನ ಕ್ರಿಕೆಟ್‌ನಲ್ಲಿ ಕಣಕ್ಕಿಳಿಯುವುದು ವಿಶೇಷ ಭಾವನೆಯೇ ಸರಿ ಎಂದು ಅನುಭವಿ ಆಟಗಾರ ರೋಹಿತ್ ಶರ್ಮಾ ಹೇಳಿದ್ದಾರೆ.
ಮುಂಬೈ ಕ್ರಿಕೆಟ್ ಸಂಸ್ಥೆಯು (ಎಂಸಿಎ), ವಾಂಖೆಡೆ ಕ್ರೀಡಾಂಗಣದ ಮೂರು ಸ್ಟ್ಯಾಂಡ್‌ಗಳಿಗೆ ದಿಗ್ಗಜರ ಹೆಸರುಗಳನ್ನು ಶುಕ್ರವಾರ ಇಟ್ಟಿದೆ. ಒಂದಕ್ಕೆ ರೋಹಿತ್ ಹೆಸರು ಹಾಗೂ ಉಳಿದ ಎರಡಕ್ಕೆ, ಭಾರತ ತಂಡದ ಮಾಜಿ ನಾಯಕ ಅಜಿತ್ ವಾಡೇಕರ್, ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್ ಅವರ ಹೆಸರುಗಳನ್ನು ಇಟ್ಟಿದೆ.
ನಾಮಕರಣ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರೋಹಿತ್, 'ಇಂದು ಏನಾಗುತ್ತಿದೆಯೋ ಅದು ನನ್ನ ಕನಸಿನಲ್ಲಿಯೂ ಮೂಡಿರಲಿಲ್ಲ. ಸಾಕಷ್ಟು ಮೈಲುಗಲ್ಲುಗಳನ್ನು ಸಾಧಿಸಲು ಪ್ರಯತ್ನಿಸುತ್ತೇವೆ. ಆದರೆ, ಇಂತಹ ಕೆಲವೊಂದು ವಿಚಾರಗಳು ತುಂಬಾ ವಿಶೇಷ. ಏಕೆಂದರೆ, ವಾಂಖೆಡೆಯು ಐಕಾನಿಕ್ ಕ್ರೀಡಾಂಗಣ. ಇಲ್ಲಿ ಸಾಕಷ್ಟು ನೆನಪುಗಳಿವೆ' ಎಂದು ಹೇಳಿದ್ದಾರೆ.
2024ರಲ್ಲಿ ವಿಶ್ವಕಪ್ ಗೆದ್ದ ನಂತರ ಟಿ20 ಮಾದರಿಗೆ ವಿದಾಯ ಹೇಳಿರುವ ರೋಹಿತ್, ಇದೇ ತಿಂಗಳ 7ರಂದು ಟೆಸ್ಟ್ ಕ್ರಿಕೆಟ್‌ಗೂ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಅವರ ಬ್ಯಾಟಿಂಗ್ ಅನ್ನು ಐಪಿಎಲ್ ಮತ್ತು ಏಕದಿನ ಮಾದರಿಯಲ್ಲಷ್ಟೇ ಕಣ್ತುಂಬಿಕೊಳ್ಳಲು ಸಾಧ್ಯ.
'ಈ ಕ್ರೀಡೆಯ ಶ್ರೇಷ್ಠ ಆಟಗಾರರು ಹಾಗೂ ವಿಶ್ವದ ಅತ್ಯುತ್ತಮ ರಾಜಕಾರಣಿ ಹೆಸರಿನೊಂದಿಗೆ ನನ್ನ ಹೆಸರನ್ನು ಹೊಂದಿರುವುದರಿಂದ ಮೂಡುತ್ತಿರುವ ಭಾವನೆಯನ್ನು ವ್ಯಕ್ತಪಡಿಸಲಾರೆ. ಕೃತಜ್ಞನಾಗಿದ್ದೇನೆ' ಎಂದಿದ್ದಾರೆ.
'ಎರಡು ಮಾದರಿಗೆ ನಿವೃತ್ತಿ ಘೋಷಿಸಿದ್ದರೂ, ಇನ್ನೂ ಆಡುತ್ತಿದ್ದೇನೆ. ಈ ಕ್ರೀಡಾಂಗಣದಲ್ಲಿ ನನ್ನ ಹೆಸರಿನ ಸ್ಟಾಂಡ್ ಎದುರು ಮೇ 21ರಂದು (ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ) ಆಡಲಿದ್ದೇನೆ. ಅದು ಅಸಾಮಾನ್ಯ ಸಂಗತಿ. ದೇಶದ ಪರ ಕಣಕ್ಕಿಳಿಯುವುದು ವಿಶೇಷ ಭಾವವೇ ಸರಿ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಷ್ಟೆಲ್ಲಾ ಸಾಧ್ಯವಾಗಲು ಸಾಕಷ್ಟು ತ್ಯಾಗ ಮಾಡಿದ ತಮ್ಮ ಕುಟುಂಬದವರಿಗೂ ರೋಹಿತ್ ಧನ್ಯವಾದ ಹೇಳಿದ್ದಾರೆ.
ರೋಹಿತ್ ಸಾಧನೆ
ಟೆಸ್ಟ್: 67 ಪಂದ್ಯ, 116 ಇನಿಂಗ್ಸ್, 4,301 ರನ್
ಏಕದಿನ: 273 ಪಂದ್ಯ, 265 ಇನಿಂಗ್ಸ್, 11,168 ರನ್
ಟಿ20: 159 ಪಂದ್ಯ, 151 ಇನಿಂಗ್ಸ್, 4,231 ರನ್
'ರೋಹಿತ್ ಶರ್ಮಾ' ಸ್ಟ್ಯಾಂಡ್ ಉದ್ಘಾಟನೆ ವೇಳೆ, ರೋಹಿತ್ ಶರ್ಮಾ, ಅವರ ಪೋಷಕರು, ಪತ್ನಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.