
ವಾಸೀಂ ಅಕ್ರಂ, ರೋಹಿತ್ ಶರ್ಮಾ
ಚಿತ್ರ ಕೃಪೆ: @RayhamUnplugged
ಕೊಲೊಂಬೊ: ಇಲ್ಲಿನ ಆರ್. ಪ್ರೇಮದಾಸ ಕ್ರಿಕೆಟ್ ಮೈದಾನದಲ್ಲಿ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಗೆಲ್ಲುವ ಮೂಲಕ ಸೂಪರ್ 8ರ ಹಂತಕ್ಕೆ ಲಗ್ಗೆ ಇಟ್ಟಿದೆ. ಇನ್ನೂ ನಿನ್ನೆ (ಭಾನುವಾರ) ನಡೆದ ಪಂದ್ಯದಲ್ಲಿ ಕೂಡ ಭಾರತ ಹಾಗೂ ಪಾಕಿಸ್ತಾನ ತಂಡದ ಆಟಗಾರರ ನಡುವೆ ಹಸ್ತಲಾಘವ ಇರಲಿಲ್ಲ.
ಹೌದು, ಪಹಲ್ಗಾಮ್‌ನಲ್ಲಿ ಹತ್ಯೆಯಾದ ಭಾರತೀಯರಿಗೆ ಸಂತಾಪ ಸೂಚಿಸುವ ಹಾಗೂ ಆಪರೇಷನ್ ಸಿಂಧೂರ್‌ನಲ್ಲಿ ಭಾರತೀಯ ಸೇನೆಯ ಜೊತೆಗೆ ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿನಲ್ಲಿ, ಭಾರತ ತಂಡವು ಪಾಕಿಸ್ತಾನ ವಿರುದ್ಧದ ಯಾವುದೇ ಪಂದ್ಯದಲ್ಲಿ ಹಸ್ತಲಾಘವ ಮಾಡುತ್ತಿಲ್ಲ. ಆದರೆ, ಭಾರತ ತಂಡದ ಮಾಜಿ ನಾಯಕ ಹಾಗೂ ಪಾಕಿಸ್ತಾನ ತಂಡದ ದಿಗ್ಗಜ ಆಟಗಾರ ವಾಸೀಂ ಅಕ್ರಮ್ ಜೊತೆ ಕಾಣಿಸಿಕೊಂಡಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ವಾಸೀಂ ಅಕ್ರಂಗೆ ಅಪ್ಪುಗೆ ನೀಡಿದ ಭಾರತ ಮಾಜಿ ನಾಯಕ
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ವೀಕ್ಷಣೆಗೆಂದು ಕೊಲೊಂಬೊಗೆ ತೆರಳಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಪಾಕಿಸ್ತಾನ ಕ್ರಿಕೆಟ್‌ನ ದಿಗ್ಗಜ ಆಟಗಾರ ವಾಸೀಂ ಅಕ್ರಂ ಅವರನ್ನು ಮೈದಾನದಲ್ಲಿ ಭೇಟಿಯಾಗಿದ್ದಾರೆ. ಈ ವೇಳೆ, ವಾಸೀಂ ಅವರನ್ನು ಆತ್ಮೀಯವಾಗಿ ಮಾತನಾಡಿಸಿದ ರೋಹಿತ್, ಅಪ್ಪುಗೆ ನೀಡಿ ಹಸ್ತಲಾಘವ ಮಾಡಿದ್ದಾರೆ.
ಸದ್ಯ, ರೋಹಿತ್ ಶರ್ಮಾ ಹಾಗೂ ವಾಸೀಂ ಅಕ್ರಂ ಅವರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದ್ದು, ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ಭಾರತ ಕ್ರಿಕೆಟ್ ತಂಡವು ಕಳೆದ ಏಷ್ಯಾಕಪ್‌ನಿಂದ ಪಾಕಿಸ್ತಾನದ ಜೊತೆಗೆ ಆಡುವಾಗ ಹಸ್ತಲಾಘವ ಮಾಡುತ್ತಿಲ್ಲ.
ಭಾರತ ಕ್ರಿಕೆಟ್ ತಂಡವು ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ 61 ರನ್‌ಗಳ ಅಂತರದಲ್ಲಿ ಗೆಲ್ಲುವ ಮೂಲಕ ಎ ಗುಂಪಿನ ಅಗ್ರಸ್ಥಾನಕ್ಕೇರಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.