ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆರಂಭಿಕ ಸ್ಥಾನವನ್ನು ಕೆ.ಎಲ್. ರಾಹುಲ್ ಅವರಿಗೆ ಬಿಟ್ಟುಕೊಟ್ಟಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಧ್ಯಮ ಕ್ರಮಾಂಕದಲ್ಲೂ ಯಶಸ್ಸು ಕಂಡಿಲ್ಲ.
ರೋಹಿತ್ ಶರ್ಮಾ ಪಿತೃತ್ವದ ರಜೆಯಿಂದಾಗಿ ಮೊದಲ ಪಂದ್ಯದಲ್ಲಿ ಆಡಿರಲಿಲ್ಲ. ಎರಡನೇ ಹಾಗೂ ಮೂರನೇ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು. ಕ್ರಮವಾಗಿ 10, 3, 6 ರನ್ ಗಳಿಸಿ ಔಟ್ ಆಗಿದ್ದರು.
ಇದರಿಂದ ತೀವ್ರ ಒತ್ತಡಕ್ಕೊಳಗಾಗಿರುವ ರೋಹಿತ್ ಅವರಿಗೆ ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಸಲಹೆಯನ್ನು ನೀಡಿದ್ದಾರೆ.
'ರೋಹಿತ್ ಸ್ಪಷ್ಟವಾದ ಮನಸ್ಥಿತಿಯೊಂದಿಗೆ ಕ್ರೀಸಿಗಿಳಿಯಬೇಕು. ತನ್ನ ರಣನೀತಿಯನ್ನು ಬದಲಾಯಿಸಬೇಕು. ಹೆಚ್ಚು ಆಕ್ರಮಣಕಾರಿಯಾಗಿ ಆಡಬೇಕು' ಎಂದು ರವಿ ಶಾಸ್ತ್ರಿ ಸಲಹೆ ಮಾಡಿದ್ದಾರೆ.
'ಆರನೇ ಕ್ರಮಾಂಕದಲ್ಲೂ ರೋಹಿತ್ ಅತ್ಯಂತ ಅಪಾಯಕಾರಿ ಬ್ಯಾಟರ್ ಆಗಬಲ್ಲರು. ಇತರೆ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಬೌಲರ್‌ಗಳ ಮೇಲೆ ಆಕ್ರಮಣಕಾರಿಯಾಗಿ ಆಡುವ ಮನೋಬಲವನ್ನು ಹೊಂದಿರಬೇಕು' ಎಂದು ಹೇಳಿದ್ದಾರೆ.
'ಆಕ್ರಮಣಕಾರಿಯಾಗಿ ಅಥವಾ ರಕ್ಷಣಾತ್ಮಕವಾಗಿ ಆಡಬೇಕೇ ಎಂಬ ಗೊಂದಲ ಇರಬಾರದು. ರೋಹಿತ್ ತಮ್ಮ ಸಹಜ ಆಟವನ್ನು ಆಡಬೇಕು. ಎದುರಾಳಿ ತಂಡದ ಬೌಲರ್‌ಗಳನ್ನು ನಿರಂತಕವಾಗಿ ಎದುರಿಸಬೇಕು' ಎಂದು ತಿಳಿಸಿದ್ದಾರೆ.
'ಆ ಮೂಲಕ ರೋಹಿತ್‌ಗೆ ತಮ್ಮ ಎಂದಿನ ಬ್ಯಾಟಿಂಗ್ ಲಯಕ್ಕೆ ಮರಳಲು ಸಾಧ್ಯ. ಆರನೇ ಕ್ರಮಾಂಕದಲ್ಲಿ ವಿಶ್ವದ ಬಹುತೇಕ ಆಟಗಾರರು ಕೌಂಟರ್-ಅಟ್ಯಾಕ್ ತಂತ್ರಗಾರಿಕೆಯೊಂದಿಗೆ ಬ್ಯಾಟ್ ಬೀಸುತ್ತಾರೆ' ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.